ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್) ಕಚ್ಚಾವಸ್ತು ಪೂರೈಕೆದಾರರಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.
ಲಂಚ ಪ್ರಕರಣದ ಮೊದಲನೇ ಆರೋಪಿಯಾಗಿದ್ದ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ನಿರೀಕ್ಷಣಾ ಜಾಮೀನು ಕೋರಿದ್ದ ಮೂಲ ಅರ್ಜಿಯನ್ನು ತಿರಸ್ಕರಿಸಿ ಸೋಮವಾರ ಮಧ್ಯಾಹ್ನ ಆದೇಶ ಪ್ರಕಟಿಸಿದ್ದ ನ್ಯಾಯಾಲಯ, ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿತ್ತು.ನ್ಯಾಯಾಲಯದ ಆದೇಶ ಹೊರಬಿದ್ದ ಬೆನ್ನಲ್ಲೇ ಶಾಸಕರನ್ನು ಬಂಧಿಸಲಾಗಿದೆ.
ಕೆಎಸ್‌ಡಿಎಲ್‌ಗೆ ಕಚ್ಚಾವಸ್ತು ಪೂರೈಸುವ ಗುತ್ತಿಗೆ ಪಡೆದಿದ್ದ ಶ್ರೇಯಸ್ ಕಶ್ಯಪ್ ಎಂಬುವವರಿಂದ ₹ 40 ಲಕ್ಷ ಲಂಚ ಪಡೆಯುತ್ತಿದ್ದ ವಿರೂಪಾಕ್ಷಪ್ಪ ಅವರ ಮಗ, ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರನ್ನು ಮಾರ್ಚ್ 2ರಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಪ್ರಶಾಂತ್ ಖಾಸಗಿ ಕಚೇರಿಯಲ್ಲಿ ₹ 1.62 ಕೋಟಿ ಲಂಚದ ಹಣ ಹಾಗೂ ವಿರೂಪಾಕ್ಷಪ್ಪ ಅವರ ಮಲಗುವ ಕೋಣೆಯಲ್ಲಿ ₹ 6.10 ಕೋಟಿ ನಗದು ಪತ್ತೆಯಾಗಿತ್ತು.
ಕೆಎಸ್‌ಡಿಎಲ್ ಅಧ್ಯಕ್ಷರೂ ಆಗಿದ್ದ ವಿರೂಪಾಕ್ಷಪ್ಪ, ಮಗನ ಬಂಧನವಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದರು. ಮಾರ್ಚ್ 7ರಂದು ಹೈಕೋರ್ಟ್, ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಮಾರ್ಚ್ 9ರಂದು ವಿರೂಪಾಕ್ಷಪ್ಪ ತನಿಖಾ ತಂಡದ ಎದುರು ಹಾಜರಾಗಿದ್ದರು. ಆರು ದಿನ ವಿಚಾರಣೆ ನಡೆಸಿದರೂ, ತನಿಖೆಗೆ ಸಹಕಾರ ನೀಡಿರಲಿಲ್ಲ.
ಶಾಸಕರಿಗೆ ತುರ್ತಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಲೋಕಾಯುಕ್ತ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ನ್ಯಾಯಪೀಠ ಸೋಮವಾರ ಅರ್ಜಿಯ ವಿಚಾರಣೆ ನಡೆಸಿತು.
ಪ್ರತಿವಾದಿ ವಿರೂಪಾಕ್ಷಪ್ಪ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿತ್ತು. ಅದಾದ ಕೆಲ ಹೊತ್ತಿನಲ್ಲೇ ಹೈಕೋರ್ಟ್ ಏಕಸದಸ್ಯ ಪೀಠ ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿ ತೀರ್ಪು ನೀಡಿತ್ತು.
ಬೆಂಗಳೂರಿನತ್ತ ಬರುವಾಗ ಸೆರೆ
ಚನ್ನಗಿರಿಯಲ್ಲಿ ಸೋಮವಾರ ವಿವಿಧ ಕಾಮಗಾರಿಗಳ ಉದ್ಘಾಟನೆ, ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದ ವಿರೂಪಾಕ್ಷಪ್ಪ, ‘ಪ್ರಕರಣದಲ್ಲಿ ವಿರೋಧಿಗಳ ಕೈವಾಡವಿದೆ. ಆರೋಪ ಮುಕ್ತನಾಗಿ ಹೊರಬರುತ್ತೇನೆ’ ಎಂದು ಭಾವುಕರಾಗಿದ್ದರು.
ನಂತರ ಮಾಡಾಳ್‌ನಲ್ಲಿರುವ ಮನೆಗೆ ಮರಳಿದ್ದರು. ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿನತ್ತ ಹೊರಟಿದ್ದರು. ಹೈಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದ್ದ ಲೋಕಾಯುಕ್ತ ಪೊಲೀಸರು ಬೆಂಗಳೂರು, ಚನ್ನಗಿರಿಯಲ್ಲಿ ಶಾಸಕರ ಪತ್ತೆಗಾಗಿ ಶೋಧ ನಡೆಸುತ್ತಿದ್ದರು.
‘ವಿರೂಪಾಕ್ಷಪ್ಪ ಚಲನವಲನದ ಮೇಲೆ ನಿಗಾ ಇರಿಸಲಾಗಿತ್ತು. ಅವರು ಬೆಂಗಳೂರಿನತ್ತ ಬರುತ್ತಿರುವ ಮಾಹಿತಿ ಆಧರಿಸಿ ನಮ್ಮ ಅಧಿಕಾರಿಗಳ ತಂಡವೊಂದು ತುಮಕೂರಿನ ಕ್ಯಾತ್ಸಂದ್ರ ಟೋಲ್ ಗೇಟ್ ಬಳಿ ಕಾದಿತ್ತು. ಟೋಲ್ ಗೇಟ್‌ನಲ್ಲೇ ಶಾಸಕರ ಕಾರನ್ನು ಸುತ್ತುವರೆದು ವಶಕ್ಕೆ ಪಡೆಯಲಾಯಿತು. ನಂತರ ಬಂಧನದ ಪ್ರಕ್ರಿಯೆ ಪೂರ್ಣಗೊಳಿಸಿ ಬೆಂಗಳೂರಿಗೆ ಕರೆತರಲಾಯಿತು’ ಎಂದು ಲೋಕಾಯುಕ್ತದ ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ವಿಚಾರಣೆಗೆ ಸಿದ್ಧತೆ: ಆರೋಪಿಯನ್ನು ಬೆಂಗಳೂರಿಗೆ ಕರೆತಂದ ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ತಾನು ಹೃದ್ರೋಗಿಯಾಗಿದ್ದು, ಎದೆ ನೋಯುತ್ತಿದೆ ಎಂಬುದಾಗಿ ಶಾಸಕರು ವೈದ್ಯಕೀಯ ತಪಾಸಣೆ ವೇಳೆ ಅಳಲು ತೋಡಿಕೊಂಡಿದ್ದರು. ಆದರೆ, ವೈದ್ಯರು ಆರೋಗ್ಯ ಸ್ಥಿತಿ ಸರಿ ಇರುವುದಾಗಿವರದಿ ನೀಡಿದರು. ನಂತರ ಲೋಕಾಯುಕ್ತ ಕಚೇರಿಗೆ ಕರೆ
ತಂದಿದ್ದು, ವಿಚಾರಣೆಗೆ ಸಿದ್ಧತೆ ನಡೆಸಲಾಗುತ್ತಿದೆ.
25 ದಿನಗಳಿಂದ ಬಂಧನದಲ್ಲಿರುವ ಐವರು
ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್, ಅವರ ಖಾಸಗಿ ಕಚೇರಿಯ ಅಕೌಂಟೆಂಟ್ ಸುರೇಂದ್ರ, ಚಿತ್ರದುರ್ಗದ ಭೀಮಸಂದ್ರ ನಿವಾಸಿ ಸಿದ್ದೇಶ್, ಬೆಂಗಳೂರಿನ ಕರ್ನಾಟಕ ಅರೋಮಾಸ್ ಕಂಪನಿಯ ನೌಕರರಾದ ಆಲ್ಬರ್ಟ್ ನಿಕೋಲಸ್ ಮತ್ತು ಗಂಗಾಧರ ಅವರನ್ನು ಕೆಎಸ್‌ಡಿಎಲ್ ಕಚ್ಚಾವಸ್ತು ಪೂರೈಕೆಯಲ್ಲಿನ ಲಂಚ ಪ್ರಕರಣದಲ್ಲಿ ಮಾರ್ಚ್ 2ರಂದು ಬಂಧಿಸಲಾಗಿತ್ತು. 25 ದಿನಗಳಿಂದ ಅವರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.