ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಜ್‌ಶೀಟ್: ಪಿ.ಪಿ ಪರಿಶೀಲನೆ ಕಡ್ಡಾಯ

ಶಿಕ್ಷೆ ಪ್ರಮಾಣ ಹೆಚ್ಚಿಸಲು ಕ್ರಮ l ‘ಸುಪ್ರೀಂ’ ಆದೇಶ ಪಾಲಿಸಲು ಪೊಲೀಸರಿಗೆ ಸೂಚನೆ
Last Updated 1 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಅಪರಾಧ ಪ್ರಕರಣಗಳ ಶಿಕ್ಷೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ, ‘ಪ್ರತಿಯೊಂದು ಪ್ರಕರಣದ ದೋಷಾರೋಪ ಪಟ್ಟಿಯನ್ನು (ಚಾರ್ಜ್‌ಶೀಟ್) ಹಿರಿಯ ಅಧಿಕಾರಿ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್‌ (ಪಿ.ಪಿ) ಕಡ್ಡಾಯವಾಗಿ ಪರಿಶೀಲಿಸಬೇಕು’ ಎಂದು ಸುತ್ತೋಲೆ ಹೊರಡಿಸಿದೆ.

ಗುಜರಾತ್‌ ಸರ್ಕಾರದ ವಿರುದ್ಧ ಕಿಶನ್ ಭಾಯ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ಉಲ್ಲೇಖಿಸಿ ಈ ಸುತ್ತೋಲೆ ಸಿದ್ಧಪಡಿಸಲಾಗಿದೆ. ದೋಷಾರೋಪ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಕ್ಕೂ ಮುನ್ನ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

‘ಬಹುತೇಕ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಲೋಪಗಳು ಹಾಗೂ ನ್ಯೂನತೆಗಳು ಕಂಡುಬರುತ್ತಿವೆ. ಅದನ್ನು ಸರಿಪಡಿಸದೇ ಪೊಲೀಸ್ ತನಿಖಾಧಿಕಾರಿ, ನೇರವಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದಾರೆ. ಇದೇ ಕಾರಣದಿಂದಲೇ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಆಗುತ್ತಿದ್ದು, ಲೋಪ ಹಾಗೂ ನ್ಯೂನತೆ ಸರಿಪಡಿಸಿದರೆ ಮಾತ್ರ ಶಿಕ್ಷೆ ಪ್ರಮಾಣ ಹೆಚ್ಚುವುದಾಗಿ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾನೂನು ತಜ್ಞರ ಅಭಿಪ್ರಾಯ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನಗಳ ಅನ್ವಯ ಹೊಸ ಸುತ್ತೋಲೆ ಹೊರಡಿಸಲಾಗಿದೆ. ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ಪಾಲಿಸದಿದ್ದರೆ ಇಲಾಖೆ ಶಿಸ್ತು ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ’ ಎಂದೂ ವಿವರಿಸಿದರು.

ಪರಿಶೀಲನೆ ಬಳಿಕವೇ ಸಲ್ಲಿಕೆ: ‘ಪ್ರಕರಣದ ತನಿಖೆ ಪೂರ್ಣಗೊಳಿಸುವ ತನಿಖಾಧಿಕಾರಿ, ಅದರ ಕಡತಗಳನ್ನು ತಮ್ಮ ಹಿರಿಯ ಅಧಿಕಾರಿಗೆ ನೀಡಬೇಕು. ಹಿರಿಯ ಅಧಿಕಾರಿ, ಪ್ರಕರಣದ ಸಂಗತಿ ಹಾಗೂ ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಏನಾದರೂ ಲೋಪಗಳು ಹಾಗೂ ನ್ಯೂನತೆಗಳು ಇದ್ದರೆ, ಸರಿಪಡಿಸುವಂತೆ ಲಿಖಿತವಾಗಿ ತನಿಖಾಧಿಕಾರಿಗೆ ನಿರ್ದೇಶನ ನೀಡಬೇಕು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ಹಿರಿಯ ಅಧಿಕಾರಿಗಳ ನಿರ್ದೇಶನ ಪಾಲಿಸಿದ ನಂತರ ದೋಷಾರೋಪ ಪಟ್ಟಿಯನ್ನು ಸಂಬಂಧಪಟ್ಟ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ನೀಡಬೇಕು. ಪಬ್ಲಿಕ್ ಪ್ರಾಸಿಕ್ಯೂಟರ್, ಚಾಲ್ತಿಯಲ್ಲಿರುವ ಕಾನೂನು ಹಾಗೂ ನ್ಯಾಯಾಲಯಗಳ ತೀರ್ಪುಗಳ ಆಧಾರದಲ್ಲಿ ಪಟ್ಟಿಯನ್ನು ಪರಿಶೀಲಿಸಬೇಕು. ಲೋಪ ಹಾಗೂ ನ್ಯೂನತೆಗಳು ಇದ್ದರೆ, ಅವುಗಳನ್ನು ಉಲ್ಲೇಖಿಸಿ ಲಿಖಿತ ರೂಪದಲ್ಲಿ ತನಿಖಾಧಿಕಾರಿಗೆ ಸೂಚನೆ ನೀಡಬೇಕು.’

‘ಹಿರಿಯ ಅಧಿಕಾರಿ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ನೀಡಿದ ನಿರ್ದೇಶಗಳನ್ನು ಪಾಲಿಸಿದ ನಂತರವೇ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ರೀತಿಯಾದರೆ, ನ್ಯಾಯಾಲಯದಲ್ಲಿ ಸೂಕ್ತ ವಾದ ಮಂಡಿಸಲು ಹಾಗೂ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಅನುಕೂಲವಾಗಲಿದೆ’ ಎಂಬುದಾಗಿಯೂ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT