ಮಂಗಳವಾರ, ಜೂನ್ 22, 2021
22 °C

ಮಂಡ್ಯ: ಕೋವಿಡ್‌ನಿಂದ ರಕ್ಷಿಸುವಂತೆ ಕೋರಿ ಕೋಳಿ ಬಲಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ(ಮಂಡ್ಯ): ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ವೈದ್ಯಕೀಯ ವಿಜ್ಞಾನ ಸಾಕಷ್ಟು ಶ್ರಮಿಸುತ್ತಿದೆ. ಆದರೆ ಇತ್ತ ಹಳ್ಳಿಯ ಜನರು ಮಹಾಮಾರಿ ಕೋವಿಡ್‌ನಿಂದ ಪಾರು ಮಾಡುವಂತೆ ಕೋರಿ ದೇವರಿಗೆ ಕೋಳಿ ಬಲಿ ಕೊಡುತ್ತಿದ್ದಾರೆ.

ಎನ್ಇಎಸ್ ಬಡಾವಣೆ, ಸುಲ್ತಾನ್ ರಸ್ತೆ, ಗಂಗಾಮತಸ್ಥರ ಬೀದಿ, ಉಮ್ಮತೂರಮ್ಮನ ತೋಟ, ತಮ್ಮಡಹಳ್ಳಿ ರಸ್ತೆ, ಅಡ್ಡೇನಿಂಗಯ್ಯನ ಕೇರಿ, ಮಾರೇಹಳ್ಳಿ, ನಾಗೇಗೌಡನದೊಡ್ಡಿ ಮುಂತಾದೆಡೆ ಬಲಿ ನೀಡುತ್ತಿರುವುದು ಸಾಮಾನ್ಯವಾಗಿದೆ. ರಸ್ತೆಯಲ್ಲಿ ಮೂರು ಕಲ್ಲುಗಳನ್ನು ಇಟ್ಟು ಅವುಗಳಿಗೆ ಪಟ್ಟಲದಮ್ಮ, ಮಂಡಿನಮಾರಮ್ಮ, ಕಾಳಮ್ಮ ರೂಪ ಕೊಟ್ಟು ಕೋಳಿ ಕೊಯ್ಯುತ್ತಿದ್ದಾರೆ.

ಕಲ್ಲಿಗೆ ಹರಿಶಿಣ–ಕುಂಕುಮ ಹಚ್ಚಿ, ಬೇವಿನ ಸೊಪ್ಪಿನಿಂದ ಶೃಂಗರಿಸಿದ್ದಾರೆ. ಪಟ್ಟಣದ ಎನ್ಇಎಸ್ ಬಡಾವಣೆ ಮುಖ್ಯರಸ್ತೆಯಲ್ಲೇ ಬಲಿ ಕೊಡುತ್ತಿರುವ ಕಾರಣ ರಸ್ತೆಯುದ್ದಕ್ಕೂ ರಕ್ತ ಸೋರಿದೆ. ಕೋಳಿ ಬಲಿಕೊಟ್ಟು, ಅದನ್ನು ಮನೆಗೆ ಕೊಂಡೊಯ್ದು ಅಡುಗೆ ಮಾಡಿ ಸೇವಿಸುತ್ತಿದ್ದಾರೆ. ಕೋಳಿ ತಲೆಯನ್ನು ದೇವರಿಗೆ ಅರ್ಪಿಸುತ್ತಿದ್ದು ಅದು ಪ್ರಾಣಿ, ಪಕ್ಷಿಗಳ ಪಾಲಾಗುತ್ತಿದೆ.

ದೊಡ್ಡಕೆರೆ ಬಳಿಯ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಬೆಳಗಿನ ಜಾವ ದೇವರಿಗೆ ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಸಾಂಕ್ರಾಮಿಕ ರೋಗದಿಂದ ಮುಕ್ತಿ ನೀಡುವಂತೆ ಪ್ರಾರ್ಥಿಸಿದ್ದಾರೆ.

‘ಹೆಚ್ಚಿನ ಸಾವು ನೋವು, ಸಾಂಕ್ರಾಮಿಕ ರೋಗ ಬಂದಾಗ ಇಲ್ಲಿನ ಇತಿಹಾಸ ಪ್ರಸಿದ್ದ ದಂಡಿನ ಮಾರಮ್ಮನ ಮೊರೆ ಹೋಗುವುದು ಸಾಮಾನ್ಯ ಸಂಪ್ರದಾಯವಾಗಿದ್ದು ಈಗಲೂ ಅದು ನಡೆದುಕೊಂಡು ಬರುತ್ತಿದೆ’ ಎಂದು ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು