ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ಮುಷ್ಕರ: ಇಡೀ ದಿನ ನಡೆದ ಸಂಧಾನದ ಕಸರತ್ತು

ಕಾರ್ಮಿಕ ಸಂಘಟನೆಗಳ ಜತೆ ನಿರಂತರ ಮಾತುಕತೆ
Last Updated 13 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಮುಷ್ಕರ ಕೊನೆಗಾಣಿಸಲು ಮೂವರು ಸಚಿವರು ಭಾನುವಾರ ಇಡೀ ದಿನ ಸಂಧಾನದ ಕಸರತ್ತು ನಡೆಸಿದರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಅಖಾಡಕ್ಕೆ ಇಳಿದು ನೌಕರರ ಮನವೊಲಿಕೆ ಯತ್ನಿಸಿದರು.

ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಭಾನುವಾರ ಬೆಳಿಗ್ಗೆಯೇ ಕಾರ್ಮಿಕ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸುವುದಾಗಿ ಶನಿವಾರವೇ ಪ್ರಕಟಿಸಿದ್ದರು. ಮುಖ್ಯಮಂತ್ರಿ ಸೂಚನೆಯಂತೆ ಕಂದಾಯ ಸಚಿವ ಆರ್‌. ಅಶೋಕ ಮತ್ತು ಗೃಹ ಸಚಿವ ಆರ್‌. ಅಶೋಕ ಅವರೂ ಸವದಿ ಅವರಿಗೆ ಜತೆಯಾದರು. ಬೆಳಿಗ್ಗೆಯಿಂದ ಸರಣಿ ಸಭೆಗಳನ್ನು ನಡೆಸಿದ ಸಚಿವತ್ರಯರು, ಮುಷ್ಕರನಿರತ ಕಾರ್ಮಿಕರನ್ನು ಮನವೊಲಿಸುವಲ್ಲಿ ಬಹುತೇಕ ಯಶಸ್ವಿಯೂ ಆಗಿದ್ದರು.

ಮುಷ್ಕರ ಮುನ್ನಡೆಸುತ್ತಿರುವ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳಿಗೆ ಲಕ್ಷ್ಮಣ ಸವದಿ ನಿಗದಿ ಮಾಡಿದ್ದ ಸಭೆಗೆ ಆಹ್ವಾನ ನೀಡಿರಲಿಲ್ಲ. ಎಐಟಿಯುಸಿ, ಸಿಐಟಿಯು, ಭಾರತ್‌ ಮಜ್ದೂರ್‌ ಸಭಾ (ಬಿಎಂಎಸ್‌), ಸಾರಿಗೆ ನೌಕರರ ಮಹಾಮಂಡಲದ ಪ್ರತಿನಿಧಿಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮೊದಲ ಸುತ್ತಿನ ಮಾತುಕತೆಯಲ್ಲಿ ಈ ನಾಲ್ಕು ಸಂಘಟನೆಗಳ ಪ್ರತಿನಿಧಿಗಳು ಮಾತ್ರ ಪಾಲ್ಗೊಂಡಿದ್ದರು.

ಮಾತುಕತೆಗೆ ಬಂದಿದ್ದ ಬಹುತೇಕ ಕಾರ್ಮಿಕ ಮುಖಂಡರು, ಸಾರಿಗೆ ನೌಕರರ ಕೂಟದ ಪ್ರತಿನಿಧಿಗಳನ್ನೂ ಕರೆದು ಚರ್ಚಿಸುವಂತೆ ಸಲಹೆ ನೀಡಿದ್ದರು. ಕೆಲವು ಮುಖಂಡರು ಮಾತ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಮಧ್ಯೆಯೇ ಸಚಿವ ಅಶೋಕ ಅವರು ತಮ್ಮ ಮನೆಯಲ್ಲೇ ಪ್ರತ್ಯೇಕ ಸಂಧಾನ ಸಭೆಗಳನ್ನು ಆರಂಭಿಸಿದ್ದರು. ಕೂಟದ ಕೆಲವು ಪದಾಧಿಕಾರಿಗಳನ್ನು ಅಲ್ಲಿಗೆ ಕರೆಸಿ ಮಾತುಕತೆ ನಡೆಸಿದ್ದರು.

ಎರಡನೇ ಮಾತುಕತೆಗೆ ಆಹ್ವಾನ: ಎರಡನೇ ಸುತ್ತಿನ ಚರ್ಚೆಗೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್‌ ಹಾಗೂ ಇತರ ಪದಾಧಿಕಾರಿಗಳಿಗೆ ಆಹ್ವಾನ ನೀಡಲಾಯಿತು. ನಾಲ್ಕು ಕಾರ್ಮಿಕ ಸಂಘಟನೆಗಳು ಮತ್ತು ಕೂಟದ ಪ್ರತಿನಿಧಿಗಳ ಜತೆ ಚರ್ಚಿಸಿದ ಬಳಿಕ ಸವದಿ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮೂರನೇ ಸುತ್ತಿನ ಮಾತುಕತೆ ನಡೆಯಿತು. ಅಲ್ಲಿ ಸಾರಿಗೆ ನಿಗಮಗಳ ನೌಕರರಿಗೆ ಸಂಬಂಧಿಸಿದಂತೆ ಎಂಟು ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಮುಷ್ಕರ ಕೊನೆಗೊಳಿಸಲು ನೌಕರರ ಕೂಟದ ಪದಾಧಿಕಾರಿಗಳು ಒಪ್ಪಿಕೊಂಡಿದ್ದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಎದುರಿನಲ್ಲೇ ಸಚಿವರು ಮತ್ತು ಕೂಟದ ಪದಾಧಿಕಾರಿಗಳು ಅಭಿನಂದನೆಗಳನ್ನೂ ಹೇಳಿಕೊಂಡಿದ್ದರು.

ಕೋಡಿಹಳ್ಳಿ ಚಂದ್ರಶೇಖರ್‌ ದೂರವಿಟ್ಟು ತೀರ್ಮಾನ
ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಕೊನೆಯವರೆಗೂ ಸಂಧಾನ ಸಭೆಗಳಿಗೆ ಆಹ್ವಾನಿಸಲಿಲ್ಲ. ಕೊನೆಯ ಸಭೆಗಳಿಗೆ ಚಂದ್ರಶೇಖರ್‌ ಅವರನ್ನು ದೂರವಿಟ್ಟು, ಕೂಟದ ಪದಾಧಿಕಾರಿಗಳನ್ನು ಮಾತ್ರ ಆಹ್ವಾನಿಸಲಾಯಿತು.

‘ಎಐಟಿಯುಸಿ, ಸಿಐಟಿಯು, ಬಿಎಂಎಸ್‌ ಮತ್ತು ಮಹಾಮಂಡಲದ ಪ್ರತಿನಿಧಿಗಳ ಜತೆ ಮಾತ್ರ ಮಾತುಕತೆ ನಡೆಸಲು ಲಕ್ಷ್ಮಣ ಸವದಿ ನಿರ್ಧರಿಸಿದ್ದರು. ಮುಷ್ಕರಕ್ಕೆ ಕರೆ ನೀಡಿದವರನ್ನು ಮಾತುಕತೆಗೆ ಕರೆಯಬೇಕು ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಪದೇ ಪದೇ ಹೇಳಿದಾಗ ಒಪ್ಪಿಕೊಂಡರು’ ಎಂದು ಮೂಲಗಳು ತಿಳಿಸಿವೆ.

‘ಕೋಡಿಹಳ್ಳಿಯಿಂದ ಗೊಂದಲ ಸೃಷ್ಟಿ’
‘ಕೋಡಿಹಳ್ಳಿ ಚಂದ್ರಶೇಖರ್‌ ಸಾರಿಗೆ ನಿಗಮಗಳ ನೌಕರರಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ದುರುದ್ದೇಶಪೂರಿತ ನಡೆಯ ಮೂಲಕ ನೌಕರರನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದ್ದಾರೆ.

ಸಾರಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಸಾರಿಗೆ ನಿಗಮಗಳ ನೌಕರರನ್ನು ‘ಸರ್ಕಾರಿ ನೌಕರರು’ ಎಂದು ಪರಿಗಣಿಸಬೇಕೆಂಬ ಬೇಡಿಕೆಯನ್ನು ಹೊರತುಪಡಿಸಿ ಉಳಿದ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿತ್ತು ಎಂದು ಮುಖ್ಯಮಂತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೇತನ ತಾರತಮ್ಯ ನಿವಾರಣೆ, ಕೋವಿಡ್‌ನಿಂದ ಮೃತಪಟ್ಟ ನೌಕರರ ಕುಟುಂಬಗಳಿಗೆ ತಲಾ ₹ 30 ಲಕ್ಷ ಪರಿಹಾರ, ಕಿರುಕುಳ ತಡೆಯುವ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಸಂಧಾನ ಸಭೆಯ ತೀರ್ಮಾನ ಒಪ್ಪಿಕೊಂಡು, ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ಕೈಬಿಡುವ ನಿರ್ಧಾರ ಪ್ರಕಟಿಸುವುದಾಗಿ ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದ್ದರು. ಕೋಡಿಹಳ್ಳಿ ಚಂದ್ರಶೇಖರ್‌ ಜತೆ ಸೇರಿದ ಬಳಿಕ ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT