ಬುಧವಾರ, ಆಗಸ್ಟ್ 10, 2022
24 °C

ಮಾನವೀಯ ನೆಲೆಗಟ್ಟಿನಲ್ಲಿ ಸವಾಲು ಎದುರಿಸಿ: ವೈದ್ಯರ ಜೊತೆ ಯಡಿಯೂರಪ್ಪ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಾನವೀಯ ನೆಲೆಗಟ್ಟಿನಲ್ಲಿ ಕೋವಿಡ್ ಸವಾಲುಗಳನ್ನು ಎದುರಿಸಬೇಕಾಗಿದೆ. ಲಭ್ಯವಿರುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ, ಪಾರದರ್ಶಕತೆಯಿಂದ ಬಳಸಬೇಕು’ ಎಂದು ಕೋವಿಡ್ ಸಮರದಲ್ಲಿ ನಿರತ ವೈದ್ಯಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಿವಿಮಾತು ಹೇಳಿದರು.

ರಾಜ್ಯದುದ್ದಕ್ಕೂ ಇರುವ ವೈದ್ಯರ ಜೊತೆ ಶನಿವಾರ ವಿಡಿಯೊ ಸಂವಾದ ನಡೆಸಿದ ಅವರು, ಮನೋಸ್ಥೈರ್ಯ ಹೆಚ್ಚಿಸುವ ಜೊತೆಗೆ ಸಮಸ್ಯೆಗಳನ್ನು ಆಲಿಸಿದರು. ಈ ಹೃದಯಸ್ಪರ್ಶಿ ಸಂವಾದದಲ್ಲಿ ಕರ್ತವ್ಯದ ಸವಾಲುಗಳ ಬಗ್ಗೆ ಪ್ರಶ್ನಿಸಿ, ಆತ್ಮವಿಶ್ವಾಸ ತುಂಬಿದರು. ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ‘ರಾಜ್ಯದ ಅಮೂಲ್ಯ ಆಸ್ತಿ’ ಎಂದು ಬಣ್ಣಿಸಿದರು.

ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯ ಲಕ್ಷ್ಮೀಪತಿ, ಮನೆಗೇ ತೆರಳದೆ ಆಸ್ಪತ್ರೆಯಲ್ಲೇ ಮೊಕ್ಕಾಂ ಹೂಡಿರುವ ವೈದ್ಯರು, ಸಿಬ್ಬಂದಿ ಸೇವೆಯನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದರು. ಮಣಿಪಾಲದ ಶಶಿಕಿರಣ್ ಉಮಾಕಾಂತ್, ಅಂತಿಮ ವರ್ಷದ ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೂ ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು.

ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಆಸ್ಪತ್ರೆಯ ಶ್ರೀನಿವಾಸುಲು, ಜಿಂದಾಲ್ ಸಂಸ್ಥೆ ಒದಗಿಸಿದ 1,000 ಹಾಸಿಗೆಯ ಆಸ್ಪತ್ರೆಯನ್ನು ನಿರ್ವಹಿಸಲು ಕ್ರಮಕೈಗೊಳ್ಳಲಾಗಿದೆ ಎಂದರು. ‘ಲಸಿಕೆ ಪಡೆದಿದ್ದೀರಾ’ ಎಂದು ವಿಜಯಪುರದ ಡಾ ಮೀನಾಕ್ಷಿ ಡಿ ಮುತ್ತಪ್ಪನವರ್ ಅವರನ್ನು ಪ್ರಶ್ನಿಸಿದ ಮುಖ್ಯಮಂತ್ರಿ,‘ನಿಮ್ಮ ಆರೋಗ್ಯವೂ ಮುಖ್ಯ’ ಎಂದು ತಿಳಿ ಹೇಳಿದರು.

ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯ ಶರತ್ ಬಾಬು, ‘ಜಿಲ್ಲೆಯಲ್ಲಿ ಇತ್ತೀಚಿಗೆ ಒತ್ತಡ ಕಡಿಮೆಯಾಗಿದ್ದು, ಇರುವ ಹಾಸಿಗೆಗಳು ಹಾಗೂ ಸೋಂಕಿತರಿಗೆ ಸಮಸ್ಯೆ ಇಲ್ಲ’ ಎಂದರು. ಗೋಕಾಕದ ಅರವಳಿಕೆ ತಜ್ಞ ಮಹಾಂತೇಶ ಶೆಟ್ಟಪ್ಪನವರ್, ಗ್ರಾಮೀಣ ಮಟ್ಟದಲ್ಲಿ ಹೋಮ್ ಐಸೋಲೇಷನ್ ಹೆಚ್ಚಿಸುವ ಅಗತ್ಯದ ಬಗ್ಗೆ ಪ್ರಸ್ತಾಪಿಸಿದರು.

ಅರಕಲಗೂಡು ತಾಲ್ಲೂಕು ಆಸ್ಪತ್ರೆಯ ದೀಪಕ್, ‘ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಶೇ 10ಕ್ಕೆ ಇಳಿಸುವ ಗುರಿ ಹೊಂದಲಾಗಿದೆ’ ಎಂದರು. ಮೈಸೂರಿನ ಡಾ ತ್ರಿವೇಣಿ, ತಮಗೆ ಮತ್ತು ಮಗಳಿಗೆ ಸೋಂಕು ತಗುಲಿ ಇತ್ತೀಚಿಗೆ ಗುಣಮುಖರಾಗಿದ್ದನ್ನು ಮುಖ್ಯಮಂತ್ರಿ ವಿಚಾರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ತುಮಕೂರು ಜಿಲ್ಲಾ ಆಸ್ಪತ್ರೆಯ ಭಾನುಪ್ರಕಾಶ್, ‘ತುಮಕೂರು ಜಿಲ್ಲೆ ಬೆಂಗಳೂರಿನ ಪ್ರತಿಬಿಂಬದಂತೆ ಇರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಿದೆ’ ಎಂದರು.

ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಆಯುಕ್ತ ಕೆ.ವಿ. ತ್ರಿಲೋಕ ಚಂದ್ರ, ವಾರ್ತಾ ಇಲಾಖೆಯ ಆಯುಕ್ತ ಪಿ.ಎಸ್. ಹರ್ಷ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು