ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಂಗೆ ಮುಖ್ಯಮಂತ್ರಿ ಕಿವಿಮಾತು

Last Updated 10 ಆಗಸ್ಟ್ 2021, 20:10 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮನ್ನು ಮಂಗಳವಾರ ಭೇಟಿ ಮಾಡಿದ ಶಾಸಕ ಪ್ರೀತಂ ಗೌಡ ಅವರಿಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬುದ್ಧಿವಾದ ಹೇಳಿದ್ದಾರೆ.

ಸಚಿವ ಆರ್. ಅಶೋಕ ಅವರ ಸಲಹೆಯಂತೆ ವಿಧಾನಸೌಧಕ್ಕೆ ಬಂದ ಪ್ರೀತಂ ಗೌಡ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು.

ಅಶೋಕ ಮುಂದೆ ಖಾರವಾಗಿ ಮಾತನಾಡಿದ ಮುಖ್ಯಮಂತ್ರಿ, ‘ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ದೇವೇಗೌಡ ಅವರನ್ನು ಭೇಟಿಯಾಗಿದ್ದೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅಪಾರ್ಥ ಕಲ್ಪಿಸುವುದು ಸರಿಯಲ್ಲ.‌ ನನ್ನ ನಡೆ ಬಗ್ಗೆಯೇ ಅನುಮಾನ ಪಡುತ್ತೀರಾ? ನಿಮಗೆ ಅನುಮಾನಗಳಿದ್ದರೆ ನೇರವಾಗಿ ನನ್ನ ಬಳಿಗೆ ಬನ್ನಿ. ಮೊದಲು ಮಾಧ್ಯಮಗಳ ಮುಂದೆ ಹೋಗುವುದನ್ನು ನಿಲ್ಲಿಸಿ. ದೇವೇಗೌಡರ ಬಗ್ಗೆ ಗೊಂದಲ ಮೂಡಿಸಬೇಡಿ ಎಂದು ಹೇಳಿದ್ದಾರೆ’ ಎಂದು ಗೊತ್ತಾಗಿದೆ.

‘ನೀವು ಇನ್ನೂ ಮೊದಲ ಬಾರಿ ಶಾಸಕರಾಗಿದ್ದೀರಿ. ನಿಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಯೋಚಿಸಿ. ನಿಮ್ಮ ಕ್ಷೇತ್ರದಲ್ಲಿ ಸಮಸ್ಯೆಗಳಿದ್ದರೆ ನನ್ನ ಬಳಿ ತನ್ನಿ. ಕ್ಷೇತ್ರದ ಕೆಲಸಗಳನ್ನು ಮಾಡಿಕೊಡೋಣ. ಇನ್ನು ಮುಂದೆ ಈ ರೀತಿ ಮಾತುಗಳನ್ನು ಆಡಬೇಡಿ’ ಎಂದೂ ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಮಾತನಾಡಿದ ಪ್ರೀತಂ ಗೌಡ, ‘ಮುಖ್ಯಮಂತ್ರಿ ಆಗಿ 24 ಗಂಟೆಯೊಳಗೆ ದೇವೇಗೌಡ ಅವರನ್ನು ಭೇಟಿ ಮಾಡಲು ಹೋಗಿದ್ದು ಸರಿಯೇ? ಎಂದು ನಮ್ಮ ಕಾರ್ಯಕರ್ತರು ಕೇಳುತ್ತಿದ್ದಾರೆ. ಕಾರ್ಯಕರ್ತರ ಮಾತನ್ನು ನಾನು ಹೇಳಿದ್ದೇನೆ ಅಷ್ಟೆ. ಮುಖ್ಯಮಂತ್ರಿಯನ್ನು ಭೇಟಿ‌ ಮಾಡಿ ಕಾರ್ಯಕರ್ತರ ನೋವನ್ನು ಮುಖ್ಯಮಂತ್ರಿಗೆ ತಿಳಿಸಿದ್ದೇನೆ’ ಎಂದರು.

‘ಪಕ್ಷವನ್ನು ಇಲ್ಲಿವರೆಗೆ ಅಭಿವೃದ್ಧಿ ಮಾಡಿದ್ದೇನೆ. ಸಂಘಟನೆ ಮುಂದುವರಿಸಿಕೊಂಡು ಹೋಗುತ್ತೇನೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ನನ್ನ ಜೊತೆ ಮುಖ್ಯಮಂತ್ರಿ ಚರ್ಚೆ ಮಾಡಿದ್ದಾರೆ. ಕಾರ್ಯಕರ್ತರಿಗೆ ನೋವಾಗದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ಹಿರಿಯರ ಮಾತಿಗೆ ನಾನು ಒಪ್ಪುತ್ತೇನೆ. ಪಕ್ಷದ ಎಲ್ಲ 120 ಶಾಸಕರು ಮುಖ್ಯ ಮಂತ್ರಿಯ ಬೆನ್ನಿಗಿದ್ದೇವೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನಾನು ರಾಜಕಾರಣ ಮಾಡಲು ಬಂದವನು. ಕಬ್ಬನ್ ಪಾರ್ಕ್, ಲಾಲ್ ಬಾಗ್ ನೋಡಲು ಬಂದಿಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT