ಬೆಂಗಳೂರು: ‘ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ಈ ವಿಚಾರದಲ್ಲಿ ಸರ್ಕಾರದ ಕಣ್ಣು ತೆರೆಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು’ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಚಿ.ನಾ.ರಾಮು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ದಿನದ ಅಂಗವಾಗಿ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದುಂಡು ಮೇಜಿನ ಸಭೆಯಲ್ಲಿ ಸೋಮವಾರ ಮಾತನಾಡಿದರು.
‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆಗ ಪರಿಶಿಷ್ಟ ಜಾತಿ ಪಟ್ಟಿಗೆಆರು ಜಾತಿಗಳನ್ನಷ್ಟೇ ಸೇರ್ಪಡೆ ಮಾಡಿದ್ದರು. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಜನಪ್ರತಿನಿಧಿಗಳು ಇದಕ್ಕೆ ಇನ್ನೂ 95 ಜಾತಿಗಳನ್ನು ಸೇರಿಸಿದ್ದಾರೆ. 101 ಜಾತಿಗಳಿಗೆ ಶೇ 15ರಷ್ಟು ಮೀಸಲಾತಿ ಸಾಲುವುದಿಲ್ಲ’ ಎಂದರು.
‘ಅಂಬೇಡ್ಕರ್ ಮತ್ತು ಪ್ರಸ್ತುತತೆ’ ಕುರಿತು ಮಾತನಾಡಿದಕ್ರಿಯಾ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ ಬಳ್ಳೇಕೆರೆ, ‘ಕೊಳೆಗೇರಿ ನಿವಾಸಿಗಳು, ಗ್ರಾಮೀಣ ಭಾಗದ ಬಡವರ ಬದುಕು ಈಗಲೂ ಶೋಚನೀಯವಾಗಿದೆ.ತಳ ಸಮುದಾಯದಲ್ಲೇ ಬಲಿಷ್ಠರಾಗಿರುವ ಕೆಲವರಷ್ಟೇ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ದಲಿತರು ವಾಸಿಸುವ ಮನೆ ಹಾಗೂ ಉಡುಗೆ ತೊಡುಗೆಯಲ್ಲಷ್ಟೇ ಬದಲಾವಣೆಯಾಗಿದೆ. ಅವರ ಆರ್ಥಿಕ ಸ್ಥಿತಿ ಇಂದಿಗೂ ದಯನೀಯವಾಗಿದೆ’ ಎಂದರು.
‘ಸಮುದಾಯದ ಹೆಸರು ಮುಂದಿಟ್ಟುಕೊಂಡು ಮೀಸಲಾತಿಯ ಲಾಭ ಪಡೆದು ಶಾಸಕ ಹಾಗೂ ಸಂಸದರಾಗಿ ಆಯ್ಕೆಯಾದವರು ಸ್ವಯಂ ಏಳಿಗೆಯತ್ತ ಮಾತ್ರ ಚಿತ್ತ ಹರಿಸುತ್ತಿದ್ದಾರೆ. ಸಮುದಾಯದ ಹಿತ ಕಡೆಗಣಿಸುತ್ತಿದ್ದಾರೆ’ ಎಂದು ದೂರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.