ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತುವಾರಿ ಸ್ವಾಮೀಜಿ ನೇಮಕಕ್ಕೆ ಇರುವ ಅಧಿಕಾರವೇನು: ಹೈಕೋರ್ಟ್

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ ಅರ್ಜಿ ವಿಚಾರಣೆ
Last Updated 18 ಜನವರಿ 2023, 15:18 IST
ಅಕ್ಷರ ಗಾತ್ರ

ಬೆಂಗಳೂರು: ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ), ಅತ್ಯಾಚಾರ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣದಲ್ಲಿ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಮುರುಘಾ ಶರಣರು, ಕರ್ನಾಟಕ ಬಂದಿಗಳ ಕಾಯ್ದೆ–1963ರ ಅನ್ವಯ ಈಗ ವಿಚಾರಣಾಧೀನ ಬಂದಿ. ಇಂತಹವರು ಜೈಲಿಗೆ ಹೋಗುವ ಮುನ್ನ ಮಠಕ್ಕೆ ಉಸ್ತುವಾರಿ ಸ್ವಾಮೀಜಿಯನ್ನು ನೇಮಕ ಮಾಡಲು ಯಾವ ಅಧಿಕಾರ ಹೊಂದಿದ್ದರು ಮತ್ತು ಈ ದಿಸೆಯಲ್ಲಿ ಏನಾದರೂ ಲಿಖಿತ ನಿಯಮಗಳಿವೆಯೇ’ ಎಂದು ಹೈಕೋರ್ಟ್‌, ಮಠದ ಪರ ವಕೀಲರನ್ನು ಪ್ರಶ್ನಿಸಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ರಿಟ್‌ ಅರ್ಜಿಯ ಹೆಚ್ಚುವರಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಮುಂದುವರಿಸಿತು.

ವಿಚಾರಣೆ ವೇಳೆ ಮಠದ ಪರ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ ಅವರು, ಬೆಳಗ್ಗೆ ಮತ್ತು ಮಧ್ಯಾಹ್ನದ ಒಟ್ಟು ಕಲಾಪದಲ್ಲಿ 2 ಗಂಟೆ 45 ನಿಮಿಷಕ್ಕೂ ಹೆಚ್ಚು ಕಾಲ ಸುದೀರ್ಘ ವಾದ ಮಂಡಿಸಿ, ‘ಉಸ್ತುವಾರಿ ಸ್ವಾಮೀಜಿ ನೇಮಕ ಮಾಡುವುದು ಪೀಠಾಧಿಪತಿಗೆ ಇರುವ ಅಂತರ್ಗತ ಅಧಿಕಾರ‘ ಎಂದು ಸ್ಪಷ್ಟನೆ ನೀಡಿದರು.

ಮುಂದುವರಿದು, ‘ಈ ಕೇಸಿಗೆ ಅನುಗುಣವಾಗುವ ವಾಸ್ತವಾಂಶ ಏನೆಂದರೆ, ಈಗಾಗಲೇ ಮುರುಘಾ ಶರಣರು ಜೈಲಿನಲ್ಲಿ ಇದ್ದರೂ ಅವರಿಂದ ನೇಮಕಗೊಂಡಿರುವ ಮಠದ ಉಸ್ತುವಾರಿ ಸ್ವಾಮೀಜಿ ಶಾಖಾ ಮಠದ ಮಠಾಧಿಪತಿಯೇ ಆಗಿದ್ದು, ಶರಣರಿಂದ ತಮ್ಮ ಹೆಸರಿಗೆ ಜಿಪಿಎ (ಸಾಮಾನ್ಯ ಅಧಿಕಾರ ಪತ್ರ) ಪಡೆದಿದ್ದಾರೆ. ಕಾನೂನು ಪ್ರಕಾರ ಇಂತಹ ಪತ್ರವನ್ನು ಜೈಲಿನಲ್ಲಿರುವ ವಿಚಾರಣಾಧೀನ ಬಂದಿಯೂ ಕೊಡುವ ಅಧಿಕಾರ ಇದೆ. ಇದರಿಂದ ಮಠ ಮತ್ತು ಅದರ ಆಸ್ತಿಗಳ ನಿರ್ವಹಣೆಗೆ ಯಾವುದೇ ಅನಾನುಕೂಲ ಆಗುವುದಿಲ್ಲ. ಹಾಗಾಗಿ, ಹೊರಗಿನಿಂದ ಬಂದ ಆಡಳಿತಾಧಿಕಾರಿಯು ಮಠದ ಆಂತರಿಕ ಆಡಳಿತ ನಡೆಸುವುದು ಕಾನೂನಿಗೆ ವಿರುದ್ಧವಾದುದು’ ಎಂದು ಪ್ರತಿಪಾದಿಸಿದರು.

‘ರಾಜ್ಯ ಸರ್ಕಾರವು ಸಂವಿಧಾನದ 162ನೇ ವಿಧಿಯನ್ನು ಬಳಸಿ ಆಡಳಿತಾಧಿಕಾರಿ ನೇಮಕ ಮಾಡಿದೆ. ಧಾರ್ಮಿಕ ಪಂಥದ (ರಿಲಿಜಿಯಸ್‌ ಡಿನಾಮಿನೇಶನ್) ವ್ಯಾಪ್ತಿಯಲ್ಲಿ ಹಾಗೂ ಸಂವಿಧಾನದ 26ನೇ ಕಲಂನಲ್ಲಿ ಮೂಲಭೂತ ಹಕ್ಕು ಪ್ರಾಪ್ತಿಯಾಗುತ್ತದೆ. ಒಮ್ಮೆ ಮೂಲಭೂತ ಹಕ್ಕು ಪ್ರಾಪ್ತಿ ಆದ ಮೇಲೆ ಅದನ್ನು ಯಾವುದೇ ಕಾನೂನು ಅಡಿಯಲ್ಲಿ ನಿರ್ಬಂಧಿಸಲು ಆಗುವುದಿಲ್ಲ. ಒಂದು ವೇಳೆ ನಿರ್ಬಂಧ ಮಾಡಲೇಬೇಕು ಎಂದಾದರೆ ಅದು ಶಾಸಕಾಂಗ ರೂಪಿಸಿದ ಕಾನೂನೇ ಆಗಿರಬೇಕು. ಈ ಕೆಲಸವನ್ನು ಕಾರ್ಯಾಂಗ ಮಾಡಲಾಗದು’ ಎಂದರು.

‘ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂವಿಧಾನದ 3ನೇ ಭಾಗ ಮತ್ತು 300–ಎ ವಿಧಿಯಡಿ ಯಾವುದಾದರೂ ನಿರ್ಬಂಧ ವಿಧಿಸಬೇಕಾದರೆ ಶಾಸಕಾಂಗ ರಚಿಸಿದ ಕಾನೂನಿನ ಅನ್ವಯದಿಂದ ಮಾತ್ರವೇ ಸಾಧ್ಯ’ ಎಂದು ವಿವರಿಸಿದ ಅವರು, ‘ಈ ಪ್ರಕರಣದಲ್ಲಿ ಆಡಳಿತಾಧಿಕಾರಿಯನ್ನು ನಿಯಮಿಸಿದ ಕಾರ್ಯಾಂಗದ ಕ್ರಮ ಸಂವಿಧಾನದಲ್ಲಿ ಕೊಡಮಾಡಿದ ಮೂಲಭೂತ ಹಕ್ಕುಗಳನ್ನು ವಿವರಿಸುವ 26ನೇ ವಿಧಿಗೆ ಸಂಪೂರ್ಣ ವಿರುದ್ಧವಾಗಿದೆ. ಆದ್ದರಿಂದ, ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಆದೇಶವನ್ನು ಅಸಿಂಧು ಎಂದು ಘೋಷಿಸಬೇಕು’ ಎಂದು ಮನವಿ ಮಾಡಿದರು.

‘ಮುರುಘಾ ಮಠವು ವಿರಕ್ತ ಮಠವಾಗಿದ್ದು, ಇದನ್ನು ಹಿಂದೂ ಪದದ ವ್ಯಾಪ್ತಿಯಲ್ಲಿ ಅರ್ಥೈಸಲು ಸಾಧ್ಯವೇ’ ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ ಜಯಕುಮಾರ್ ಪಾಟೀಲ್‌, ‘ಹಿಂದೂ ವಿವಾಹ ಕಾಯ್ದೆ–1955, ಉತ್ತರಾಧಿಕಾರ ಕಾಯ್ದೆ–1956, ನಿರ್ವಹಣೆ ಮತ್ತು ಪೋಷಕರ ಮಕ್ಕಳ ಕಾಯ್ದೆಗಳ ಅನ್ವಯಿಕ ಕಲಂನಲ್ಲಿ ಹಿಂದೂ ಧರ್ಮ ಯಾರಿಗೆ ಅನ್ವಯ ಆಗುತ್ತದೆ ಎಂಬ ವಿವರಣೆಯನ್ನು ಗಮನಿಸಿದಾಗ; ವೀರಶೈವ, ಲಿಂಗಾಯತ ಪದಗಳನ್ನೂ ಉಲ್ಲೇಖ ಮಾಡಲಾಗಿದೆ. ಆದ್ದರಿಂದ, ಅಷ್ಟರ ಮಟ್ಟಿಗೆ ಮುರುಘಾಮಠ ರಿಲಿಜಿಯಸ್ ಡಿನಾಮಿನೇಶನ್‌ ವ್ಯಾಪ್ತಿಗೆ ಒಳಪಡುತ್ತದೆ. ಆದಾಗ್ಯೂ, ವೀರಶೈವ–ಲಿಂಗಾಯತ ಪದಗಳಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳಿವೆ’ ಎಂದು ವಿವರಿಸಿದರು. ಪ್ರಕರಣಕ್ಕೆ ಪೂರಕವಾದ ಸುಪ್ರೀಂ ಕೋರ್ಟ್‌ ಹಾಗೂ ವಿವಿಧ ಹೈಕೋರ್ಟ್‌ಗಳ ಪೂರ್ವನಿದರ್ಶನಗಳನ್ನು ನ್ಯಾಯಪೀಠಕ್ಕೆ ಸಾದರಪಡಿಸಿದರು.

‘ಶರಣರ ವಿರುದ್ಧದ ಕ್ರಿಮಿನಲ್‌ ಆರೋಪದ ಪ್ರಕರಣದಲ್ಲಿ ತನಿಖಾಧಿಕಾರಿಗಳು ಈಗಾಗಲೇ ಚಿತ್ರದುರ್ಗ ಜಿಲ್ಲಾ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ಸೆಷನ್ಸ್‌ ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ನಿಯಮಿತ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿದೆ. ಅಂತಿಮ ವರದಿಯಲ್ಲಿ 74 ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ಹೆಸರಿಸಲಾಗಿದೆ’ ಎಂದರು. ಕೋರ್ಟ್‌ನ ದಿನದ ಕಲಾಪ ಪೂರ್ಣಗೊಂಡ ಕಾರಣ ಮತ್ತು ಅಡ್ವೊಕೇಟ್‌ ಜನರಲ್‌ ವಾದ ಮುಂದುವರಿಸಬೇಕಿದ್ದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಲಾಗಿದೆ.

ಶಿವಮೂರ್ತಿ ಮುರುಘಾ ಶರಣರು, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾರಣ, ರಾಜ್ಯ ಸರ್ಕಾರ ಪಿ.ಎಸ್.ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಅವರು 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದಾರೆ.

===

ವೀರಶೈವ–ಲಿಂಗಾಯತ ಪ್ರಸ್ತಾಪ

ವಿಚಾರಣೆ ವೇಳೆಯಲ್ಲಿ ವೀರಶೈವ ಮತ್ತು ಲಿಂಗಾಯತ ಪದಗಳ ಕುರಿತಂತೆ ಜಿಜ್ಞಾಸೆ ವ್ಯಕ್ತವಾಯಿತು. ಆಡಳಿತಾಧಿಕಾರಿ ಪಿ.ಎಸ್.ವಸ್ತ್ರದ ಪರ ಹಾಜರಾಗಿದ್ದ ಹಿರಿಯ ವಕೀಲ ಗಂಗಾಧರ ಗುರುಮಠ ಅವರು, ’ಎರಡೂ ಪದಗಳು ಒಂದೇ’ ಎಂದು ಪ್ರತಿಪಾದಿಸಿದರೆ ಜಯಕುಮಾರ್ ಪಾಟೀಲ, ‘ಈ ವಿಷಯದಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳಿವೆ. ಅದನ್ನು ಈ ಪ್ರಕರಣದಲ್ಲಿ ಚರ್ಚಿಸುವುದು ಬೇಡ’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದನ್ನು ಒಪ್ಪದ ನ್ಯಾಯಮೂರ್ತಿಗಳು, ‘ವಾದ ಮಂಡಿಸಲು ಅಡ್ಡಿಯೇನಿಲ್ಲ. ಅಂತೆಯೇ, ಹೇಳಿದ್ದನ್ನೆಲ್ಲಾ ದಾಖಲೆಯಲ್ಲಿ ತೆಗೆದುಕೊಳ್ಳಬೇಕು ಎಂದೇನೂ ಇಲ್ಲವಲ್ಲ. ನಿಮ್ಮ ವಿವರಣೆ ಕೋರ್ಟ್‌ನ ಜ್ಞಾನ ವೃದ್ಧಿಗೆ ಸಹಾಯಕವಾಬಲ್ಲುದು’ ಎಂದು ನುಡಿದರು.

ಆಗಾಗ್ಗೆ ಧರ್ಮಗಳ ವಿವರಣೆಯ ಕುರಿತಂತೆ ಜಯಕುಮಾರ್ ಪಾಟೀಲ್‌ ಅವರನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಅಮೆರಿಕದ ಪ್ರಖ್ಯಾತ ಇತಿಹಾಸಕಾರ, ದಾರ್ಶನಿಕ, ತತ್ವಶಾಸ್ತ್ರಜ್ಞ ವಿಲ್‌ ಡ್ಯೂರಂಟ್‌ ಹಾಗೂ ಇಂಗ್ಲಿಷ್‌ ಇತಿಹಾಸಕಾರ ಅರ್ನಾಲ್ಡ್‌ ಟಾಯ್ನಬಿ ಅವರು ಹಿಂದೂ ಧರ್ಮದ ಕುರಿತಂತೆ ಬರೆದಿರುವ ಪುಸ್ತಕಗಳನ್ನೂ ನೆನಪಿಸಿದರು. ಧರ್ಮದ ವ್ಯಾಖ್ಯಾನ, ಅನುಯಾಯಿಗಳು ಎಂದರೆ ಯಾರು ಎಂಬ ಬಗ್ಗೆ ಕ್ಲುಪ್ತ ನಿಷ್ಕರ್ಷೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT