ಸೋಮವಾರ, ಸೆಪ್ಟೆಂಬರ್ 27, 2021
28 °C
ವಿಚಾರಣೆ ಆರಂಭಿಸಿದ ವಿಭಾಗೀಯ ಪೀಠ: ಸೆ.8ರೊಳಗೆ ಪ್ರಗತಿ ವರದಿ ಸಲ್ಲಿಕೆಗೆ ಸೂಚನೆ

ಭೂ ಕಬಳಿಕೆಗೆ ನಕಲಿ ದಾವೆ: ವಕೀಲರ ಪರಿಷತ್ತು, ಸಂಘವೂ ಪಾರ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಾರಸುದಾರರು ಉಪಯೋಗಿಸದ ಖಾಲಿ ಜಾಗವನ್ನು ಕೊಳ್ಳೆ ಹೊಡೆಯಲು ನಕಲಿ ಕಕ್ಷಿದಾರ–ಪ್ರತಿವಾದಿಗಳನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಲಪಟಾಯಿಸುತ್ತಿದ್ದ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಿರುವ ಹೈಕೋರ್ಟ್‌, ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮತ್ತು ಬೆಂಗಳೂರು ವಕೀಲರ ಸಂಘವನ್ನು ಪಾರ್ಟಿಗಳಾಗಿ ಒಳಗೊಳ್ಳುವಂತೆ ನಿರ್ದೇಶನ ನೀಡಿದೆ.

ಮೋಸದ ಮಾರ್ಗದಿಂದ ಆಸ್ತಿ ಹಕ್ಕಿನ ರಾಜಿ ಡಿಕ್ರಿ ಪಡೆಯುತ್ತಿದ್ದ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ ಆದೇಶ ನೀಡಿತ್ತು. ತನಿಖೆಯಲ್ಲಿ ಈ ರೀತಿಯ 100ಕ್ಕೂ ಹೆಚ್ಚು ಪ್ರಕರಣಗಳನ್ನು ಸಿಐಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪ್ರಕರಣದ ಅಗಾಧತೆ ಪರಿಗಣಿಸಿದ ಏಕ ಸದಸ್ಯ ಪೀಠ, ಅರ್ಜಿಯನ್ನು ಪಿಐಎಲ್‌(ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಆಗಿ ಪರಿವರ್ತಿಸಿ ವಿಭಾಗೀಯ ಪೀಠಕ್ಕೆ ಸಲ್ಲಿಸುವಂತೆ ಸೂಚಿಸಿದ್ದರು.

ಪಿಐಎಲ್‌ ವಿಚಾರಣೆ ಆರಂಭಿಸಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಸಿಐಡಿ ಸಲ್ಲಿಸಿದ ವರದಿ ಪರಿಶೀಲಿಸಿತು. ಸಿಐಡಿ ಕೇಳುತ್ತಿರುವ ಎಲ್ಲಾ ದಾಖಲೆಗಳನ್ನು ಕಂದಾಯ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ವಕೀಲರ ಸಂಸ್ಥೆಗಳ ಕಚೇರಿಗಳು ಒದಗಿಸಬೇಕು ಎಂದು ನಿರ್ದೇಶನ ನೀಡಿತು.

‘ಸಿಐಡಿ ತನಿಖಾ ವರದಿಯನ್ನು ನೋಡಿದರೆ ವಕೀಲರು ಮತ್ತು ನೋಟರಿಗಳು ಭಾಗಿಯಾಗಿದ್ದಾರೆ ಎಂಬುದನ್ನು ತಳ್ಳಿಹಾಕಲು ಆಗುವುದಿಲ್ಲ. ಈ ರೀತಿಯ ವಂಚನೆ ಮತ್ತು ಕಿಡಿಗೇಡಿತನ ತಡೆಗಟ್ಟಲು ವಕೀಲರ ಪರಿಷತ್ತಿನ ಪಾತ್ರ ಅಗತ್ಯವಿದೆ’ ಎಂದು ತಿಳಿಸಿದ ಪೀಠ, ವಕೀಲರ ಸಂಸ್ಥೆಗಳನ್ನೂ ಅರ್ಜಿಯಲ್ಲಿ ಒಳಗೊಳ್ಳುವಂತೆ ಅರ್ಜಿದಾರರಿಗೆ ಸೂಚನೆ ನೀಡಿತು.

ಈ ಪ್ರಕರಣದಲ್ಲಿ ಪೀಠಕ್ಕೆ ಸಲಹೆ ನೀಡಲು ವಕೀಲ ಶ್ರೀಧರ ಪ್ರಭು ಅವರನ್ನು ಅಮಿಕಸ್ ಕ್ಯೂರಿ ಆಗಿ ನೇಮಿಸಿತು. ತನಿಖೆಯ ಮುಂದಿನ ಪ್ರಗತಿ ವರದಿಯನ್ನು ಸೆ.8ರೊಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ತಿಳಿಸಿ, ವಿಚಾರಣೆಯನ್ನು ಸೆ. 13ಕ್ಕೆ ಮುಂದೂಡಿತು.

ಯಶವಂತಪುರ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಗ್ಗೂಡಿಸುವಂತೆ 1ನೇ ಎಸಿಎಂಎಂ ನ್ಯಾಯಾಲಯದ ಮುಂದೆಯೂ ಸಿಐಡಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಕೂಡಲೇ ವಿಚಾರಣೆಗೆ ತೆಗೆದುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಎಸಿಎಂಎಂ ನ್ಯಾಯಾಲಯಕ್ಕೂ ವಿಭಾಗೀಯ ಪೀಠ ಸೂಚನೆ ನೀಡಿತು.

ವಾರಸುದಾರರು ಉಪಯೋಗಿಸದ ಖಾಲಿ ಜಾಗವನ್ನು ಕೊಳ್ಳೆ ಹೊಡೆಯಲು ನಕಲಿ ಕಕ್ಷಿದಾರ–ಪ್ರತಿವಾದಿಗಳನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಆಸ್ತಿ ಲಪಟಾಯಿಸುತ್ತಿದ್ದ ಜಾಲದ ಬಗ್ಗೆ ಏಕ ಸದಸ್ಯ ಪೀಠದ ಮುಂದೆ ಷಾ ಹರಿಲಾಲ್ ಭಿಕಾಬಾಯಿ ಅಂಡ್ ಕಂಪನಿ ಅರ್ಜಿ ಸಲ್ಲಿಸಿತ್ತು. ಏಕ ಸದಸ್ಯ ಪೀಠ ತನಿಖೆಯನ್ನು ಸಿಐಡಿಗೆ ವಹಿಸಿದ ಬಳಿಕ ನಾಲ್ವರು ವಕೀಲರನ್ನು ಪೊಲೀಸರು ಬಂಧಿಸಿದ್ದು, ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು