ಶುಕ್ರವಾರ, ಜನವರಿ 22, 2021
20 °C
ಕಾಂಗ್ರೆಸ್‌ ಹಿರಿಯ ನಾಯಕರ ಸಭೆಯಲ್ಲಿ ಸೋಲಿನ ಆತ್ಮಾವಲೋಕನ

ಪಕ್ಷ ಸಂಘಟನೆಗೆ ‘ಪ್ರಜಾ ಪ್ರತಿನಿಧಿ’ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಾಂಗ್ರೆಸ್ ಅನ್ನು ಕಾರ್ಯಕರ್ತ ಆಧಾರಿತ ಪಕ್ಷವಾಗಿ ರೂಪಿಸಲು ಪಂಚಾಯಿತಿ ಹಾಗೂ ಬೂತ್ ಮಟ್ಟದಲ್ಲಿ ‘ಪ್ರಜಾ ಪ್ರತಿನಿಧಿ’ ಹೆಸರಿನಲ್ಲಿ ಸಮಿತಿ ರಚಿಸಲಾಗುವುದು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇದನ್ನು ಅನುಷ್ಠಾನಕ್ಕೆ ತರುವ ಉದ್ದೇಶ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ದೇವನಹಳ್ಳಿಯಲ್ಲಿರುವ ಕ್ಲಾರ್ಕ್ ಎಕ್ಸೋರ್ಟಿಕಾ ಹೋಟೆಲ್‌ನಲ್ಲಿ ಸೋಮವಾರ ನಡೆದ ಪಕ್ಷದ ಹಿರಿಯ ಮುಖಂಡರ ಸಭೆಯ ಬಳಿಕ ಮಾತನಾಡಿದ ಅವರು, ‘ಉಪಚುನಾವಣೆ ಫಲಿತಾಂಶದ ಬಗ್ಗೆ ಆತ್ಮಾವಲೋಕನ ಮಾಡಿದ್ದೇವೆ. ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದೇವೆ. ಮುಂದಿನ ಚುನಾವಣೆಗಳಲ್ಲಿ ಎಚ್ಚೆತ್ತುಕೊಂಡು ಸ್ಥಳೀಯ ನಾಯಕರಿಗೆ ಆದ್ಯತೆ ನೀಡಲಿದ್ದೇವೆ. ಇದಕ್ಕಾಗಿ ಸಮಿತಿ ರಚಿಸಿದ್ದು, ಸಮಿತಿಯ ಸಲಹೆ ಮೇರೆಗೆ ಅಭ್ಯರ್ಥಿ ಆಯ್ಕೆ ಮಾಡಿ ಹೈಕಮಾಂಡ್‌ಗೆ ಹೆಸರು ಶಿಫಾರಸು ಮಾಡುತ್ತೇವೆ’ ಎಂದರು.

‘ಪಕ್ಷದ ಸಂಘಟನೆಗಾಗಿ ಸಾಂಸ್ಕೃತಿಕ, ಚಾಲಕರ ಹಾಗೂ ಸಹಕಾರ ಸಂಘ ಘಟಕಗಳನ್ನು ರಚನೆ ಮಾಡಲಿದ್ದು, ಪಂಚಾಯಿತಿ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಈ ಘಟಕಗಳು ಆರಂಭವಾಗಲಿವೆ’ ಎಂದೂ ಹೇಳಿದರು.

ರೈತರ ಹೋರಾಟಕ್ಕೆ ಬೆಂಬಲ: ‘ದೆಹಲಿಯಲ್ಲಿ ನಡೆಯುತ್ತಿರುವ ರೈತರ ಜನಪರ ಹೋರಾಟದ ಪರವಾಗಿ ಕಾಂಗ್ರೆಸ್ ನಿಲ್ಲುತ್ತದೆ. ರೈತರನ್ನು ಉಳಿಸಲು ನಮ್ಮ ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ರೈತರ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ, ಎಲ್ಲ ರೈತ ಮಾರಕ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು’ ಎಂದೂ ಆಗ್ರಹಿಸಿದರು.

‘ಹಿಂದುತ್ವ ಯಾರ ಆಸ್ತಿಯೂ ಅಲ್ಲ. ಮಹಾತ್ಮ ಗಾಂಧೀಜಿ, ವಿವೇಕಾನಂದರ ಹಿಂದುತ್ವ ವಾದದ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದೇವೆ. ಸಂವಿಧಾನ ಉಳಿಸುವುದು ನಮ್ಮ ಗುರಿ. ಸಿದ್ದು ಸವದಿ ತಮ್ಮ ಕ್ಷೇತ್ರದಲ್ಲಿ ಹೆಣ್ಣು ಮಗಳೊಬ್ಬಳ ಮೇಲೆ ನಡೆಸಿದ ದೌರ್ಜನ್ಯದ ಬಗ್ಗೆ ಮುಖ್ಯಮಂತ್ರಿಯಾಗಲಿ, ಪೊಲೀಸ್ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಅಲ್ಲಿಗೇ ಭೇಟಿ ಕೊಟ್ಟು ಆ ಮಹಿಳೆಯ ಪರವಾಗಿ ನಿಲ್ಲುತ್ತೇವೆ. ಮಹಿಳೆ ಮೇಲೆ ದೌರ್ಜನ್ಯ ನಡೆಸಿದವರನ್ನು ತಕ್ಷಣ ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಕುಮಾರಸ್ವಾಮಿ ದೊಡ್ಡವರು, ಅವರು ಏನು ಬೇಕಾದರೂ ಹೇಳಲಿ. ಅವರ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಎಚ್‌. ವಿಶ್ವನಾಥ್ ಅವರು ಸಚಿವರಾಗಬಾರದು ಎಂಬುದು ನ್ಯಾಯಾಲಯದ ತೀರ್ಪು. ನ್ಯಾಯಾಲಯದ ತೀರ್ಪು ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ’ ಎಂದರು.

ಸಭೆಯಲ್ಲಿ ‘ಕೈ’ ಒಡಕಿನ ಧ್ವನಿ

‘ಚುನಾವಣೆಯಲ್ಲಿ ಸೋಲಿಗೆ ಆಂತರಿಕ ಕಚ್ಚಾಟವೇ ಕಾರಣ’ ಎಂದು ಕೆ.ಬಿ. ಕೋಳಿವಾಡ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದು ಚರ್ಚೆಗೆ ಕಾರಣವಾಯಿತು.

'ಅವರು ಮುಖ್ಯಮಂತ್ರಿ, ಇವರು ಮುಖ್ಯಮಂತ್ರಿ ಎಂದು ಅಂತ ಹೇಳುವ ಅವಶ್ಯಕತೆ ಏನಿದೆ, ಆ ಬಣ, ಈ ಬಣ ಅಂತ ಯಾಕೆ ಹೇಳ್ತೀರಾ. ಕಾಂಗ್ರೆಸ್ ಬಣ ಅಂತ ಹೇಳಿ’ ಎಂದು ಕೋಳಿವಾಡ ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಡಿ.ಕೆ. ಶಿವಕುಮಾರ್, ‘ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿ’ ಎಂದರು. ‘ನಾನು ಒಗ್ಗಟ್ಟಿನ ಬಗ್ಗೆ ಮಾತಾಡ್ತಿದ್ದೀನಿ, ಬೇರೇನು ಮಾತಾಡಿದೆ’ ಎಂದು ಅಸಮಾಧಾನದಿಂದ ಕೋಳಿವಾಡ ಭಾಷಣ ನಿಲ್ಲಿಸಿದರು.

ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್‌, ‘ಪಕ್ಷ ಸಂಘಟನೆಯಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಉಪ ಚುನಾವಣೆಯ ಬಳಿಕ ನಾವು ಸುಮ್ಮನಾಗಿದ್ದೇವೆ. ಬರೀ ಬಿಳಿ ಬಟ್ಟೆ ಹಾಕಿ ಓಡಾಡಿ ಪ್ರಯೋಜನ ಇಲ್ಲ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು