ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಕಾಲದ ಟೆಂಡರ್‌ ಸಹ ತನಿಖೆಗೊಳಪಡಿಸುತ್ತೇವೆ: ಸಿಎಂ ಬಸವರಾಜ ಬೊಮ್ಮಾಯಿ

ಕಾಂಗ್ರೆಸ್‌ ನಾಯಕರೇ ಪರ್ಸೆಂಟೇಜ್‌ ಜನಕರು: ಬಸವರಾಜ ಬೊಮ್ಮಾಯಿ ಆರೋಪ
Last Updated 26 ನವೆಂಬರ್ 2021, 8:21 IST
ಅಕ್ಷರ ಗಾತ್ರ

ದಾವಣಗೆರೆ: ‘ಟೆಂಡರ್‌ಗಳಲ್ಲಿನ ಪರ್ಸೆಂಟೇಜ್‌ ವಿಚಾರದಲ್ಲಿ ಕಾಂಗ್ರೆಸ್‌ ಮಿತ್ರರು ಬಹಳಷ್ಟು ಆಸಕ್ತಿ ವಹಿಸುತ್ತಿರುವುದರಿಂದ ಕಾಂಗ್ರೆಸ್‌ ಕಾಲದಲ್ಲಿ ಆಗಿರುವ ಟೆಂಡರ್‌ಗಳನ್ನೂ ಸೇರಿಸಿಕೊಂಡು ತನಿಖೆ ನಡೆಸುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಕಾಂಗ್ರೆಸ್‌ ನಾಯಕರು ರಾಜ್ಯಪಾಲರಿಗೆ ದೂರು ನೀಡಿರುವ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಪರ್ಸೆಂಟೇಜ್‌ ಜನಕರೇನಾದರೂ ಇದ್ದರೆ ಕಾಂಗ್ರೆಸ್‌ನರೇ ಆಗಿದ್ದಾರೆ. ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗಲೂ ಪರ್ಸೆಂಟೇಜ್‌ ಹೆಚ್ಚು ಮಾಡಿಕೊಳ್ಳುತ್ತ ಬಂದಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ನ ಇಬ್ಬರು ನಾಯಕರು ಪಿಸು ಮಾತನಾಡಿರುವ ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅವರೇ ಪರ್ಸೆಂಟೇಜ್‌ ಪ್ರಾರಂಭಿಸಿದ್ದಾರೆ. ಈಗ ಅವರೇ ಮನವಿ ಕೊಟ್ಟಿದ್ದಾರೆ. ಇದು ಎಲ್ಲಾ ಗುತ್ತಿಗೆದಾರರಿಗೂ ಗೊತ್ತಿದೆ. ಕಾಂಗ್ರೆಸ್‌ನ ಆರೋಪ ಹಾಸ್ಯಾಸ್ಪದವಾಗಿದೆ’ ಎಂದರು.

ಭ್ರಷ್ಟಾಚಾರ ನಡೆಸುತ್ತಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಕಾಂಗ್ರೆಸ್‌ ನಾಯಕರು ರಾಜ್ಯಪಾಲರಿಗೆ ದೂರು ನೀಡಿರುವ ಕುರಿತ ಪ್ರಶ್ನೆಗೆ, ‘ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಗಿರುವ ಪರ್ಸೆಂಟೇಜ್‌ ಅನುಭವವನ್ನು ಗುತ್ತಿಗೆದಾರರು ಪುಸ್ತಕದಲ್ಲಿ ಬರೆದಿರಬೇಕು. ಗುತ್ತಿಗೆದಾರರ ಪತ್ರದಲ್ಲಿ ಸ್ಪಷ್ಟತೆ ಇಲ್ಲ. ನಿರ್ದಿಷ್ಟ ಕಾಮಗಾರಿಗಳ ಬಗ್ಗೆ ಉಲ್ಲೇಖವಿರಲಿಲ್ಲ. ಆದರೂ ಸಹ ಸಮಗ್ರವಾಗಿ ತನಿಖೆ ನಡೆಸಲು ಹೇಳಿದ್ದೇನೆ. ಕಾಂಗ್ರೆಸ್‌ ಮಿತ್ರರು ಆಸಕ್ತಿ ತೋರಿಸುತ್ತಿರುವುದರಿಂದ ಅವರ ಕಾಲದಲ್ಲೂ ಆಗಿರುವ ಟೆಂಡರ್‌ಗಳನ್ನೂ ತನಿಖೆ ನಡೆಸುವಂತೆ ಇಂದೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಎಸಿಬಿಗೆ ಮುಕ್ತವಾಗಿ ಸ್ವಾತಂತ್ರ್ಯ ನೀಡಿದ್ದರಿಂದ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಬಯಲಿಗೆ ಬಂದಿದೆ. ಭ್ರಷ್ಟ ಅಧಿಕಾರಿಗಳನ್ನು ಶಿಕ್ಷೆಗೊಳಪಡಿಸುತ್ತೇವೆ. ವ್ಯವಸ್ಥೆಯ ಶುದ್ಧೀಕರಣ ಕೆಲಸವನ್ನು ಎಸಿಬಿ ದಾಳಿಯ ಮೂಲಕ ಆರಂಭಿಸಿದ್ದೇವೆ’ ಎಂದು ಹೇಳಿದರು.

ವರದಿ ಬಂದ 24 ಗಂಟೆಯೊಳಗೆ ಪರಿಹಾರ: ‘ಬೆಳೆ ಹಾನಿ ಕುರಿತು ಜಿಲ್ಲೆಗಳಿಂದ ಪ್ರತಿ ದಿನ ಬರುವ ಸಮೀಕ್ಷೆ ವರದಿಯನ್ನು ಪರಿಹಾರ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿದ 24 ಗಂಟೆಯೊಳಗೆ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಪ್ರತಿ ಜಿಲ್ಲೆಯಲ್ಲೂ ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸುತ್ತಿದ್ದೇವೆ. ಉತ್ತರ ಕರ್ನಾಟಕದಲ್ಲಿ ಭತ್ತ ಹಾಗೂ ಮೆಕ್ಕೆಜೋಳ; ದಕ್ಷಿಣ ಕರ್ನಾಟಕದಲ್ಲಿ ರಾಗಿ, ಭತ್ತ, ತರಕಾರಿ ಬೆಳೆಗಳು ಮೊಳಕೆಯೊಡೆದು ನಾಶವಾಗಿದೆ. ಹಿಂದೆಲ್ಲ ವಿಸ್ತೃತವಾಗಿ ಸಮೀಕ್ಷೆ ನಡೆಸಲು 2–3 ತಿಂಗಳಾಗುತ್ತಿತ್ತು. ಈಗ ಆಯಾ ದಿನದ ವರದಿ ಬಂದ ತಕ್ಷಣವೇ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

‘ದಾವಣಗೆರೆ ಜಿಲ್ಲೆಯಲ್ಲಿ ಕಣ್ಣಳತೆಯ ಸಮೀಕ್ಷಾ ವರದಿ ಪ್ರಕಾರ 9,800 ಹೆಕ್ಟೇರ್‌ ಕೃಷಿ ಬೆಳೆ ಹಾಗೂ 2,147 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಇದರ ಬಗ್ಗೆಯೂ ಸಮಗ್ರವಾಗಿ ಸಮೀಕ್ಷೆ ನಡೆಸುವಂತೆ ಸೂಚಿಸಿದ್ದೇನೆ’ ಎಂದರು.

ಲಖನ್‌ ಜೊತೆ ಚರ್ಚೆ: ‘ಬೆಳಗಾವಿಯಲ್ಲಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಲಖನ್‌ ಜಾರಕಿಹೊಳಿ ನಾಮಪತ್ರ ಹಿಂದಕ್ಕೆ ಪಡೆಯುವರೇ’ ಎಂಬ ಪ್ರಶ್ನೆಗೆ, ‘ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ನಮ್ಮ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಗೆ ತೊಂದರೆ ಆಗಬಾರದು ಎಂಬ ವಿಚಾರವನ್ನು ಹೇಳಿದ್ದೇವೆ. ಇಂದು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಜೆಡಿಎಸ್‌ ಜೊತೆಗಿನ ಹೊಂದಾಣಿಕೆ ಕುರಿತ ಪ್ರಶ್ನೆಗೆ, ‘ಪಕ್ಷದಲ್ಲಿ ಅಧಿಕೃತವಾಗಿ ಈ ಬಗ್ಗೆ ಯಾವುದೇ ರೀತಿಯ ತೀರ್ಮಾನ ಆಗಿಲ್ಲ. ಆದರೆ, ನಮ್ಮ ಹಿರಿಯ ನಾಯಕರಾದ ಯಡಿಯೂರಪ್ಪ ಅವರು ಜೆಡಿಎಸ್‌ ಬೆಂಬಲ ಪಡೆಯುತ್ತಾರೆ ಎಂಬ ಮಾತನ್ನು ಹೇಳಿದ್ದಾರೆ. ನಾವು ಎಲ್ಲಾ ಕಡೆ ಸ್ಪರ್ಧಿಸಿದ್ದೇವೆ. ಎಲ್ಲೆಲ್ಲಿ ಬೆಂಬಲ ಪಡೆಯಲು ಸಾಧ್ಯವೋ ಅಲ್ಲಿ ಪಡೆದುಕೊಳ್ಳುವುದಾಗಿ ಹಿರಿಯ ನಾಯಕರು ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT