ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನ ಮೇಧಾಶಕ್ತಿಯ ಸಮರ್ಥ ಬಳಕೆಗೆ ರಾಜ್ಯಕ್ಕೆ ಬನ್ನಿ: ಬೊಮ್ಮಾಯಿ ಆಹ್ವಾನ

Last Updated 17 ನವೆಂಬರ್ 2021, 12:34 IST
ಅಕ್ಷರ ಗಾತ್ರ

ಬೆಂಗಳೂರು: ಮನುಷ್ಯನ ಮೇಧಾಶಕ್ತಿಯ ಸಮರ್ಥ ಬಳಕೆಗೆ ಪೂರಕ ವಾತಾವರಣ ಬೆಂಗಳೂರಿನಲ್ಲಿ, ಕರ್ನಾಟಕ ರಾಜ್ಯದಲ್ಲಿದೆ. ಆದ್ದರಿಂದ ರಾಜ್ಯದಲ್ಲಿ ನಾವಿನ್ಯತೆಯನ್ನು ಅನ್ವೇಷಿಸಿ, ಸಾಧನೆಯ ಉತ್ತುಂಗಕ್ಕೇರುವಂತೆ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು.

ಬೆಂಗಳೂರು ತಂತ್ರಜ್ಞಾನ ಶೃಂಗ–2021 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ತಂತ್ರಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯ. ರಾಜ್ಯದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ನಾಯಕರಿದ್ದಾರೆ. ಕಿರಣ್ ಮಜುಂದಾರ್ ಷಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧಕರು ಹಾಗೂ ಪ್ರತಿಭಾವಂತರಿದ್ದಾರೆ. ಅಂತರರಾಷ್ಟ್ರೀಯ ಖ್ಯಾತಿಯುಳ್ಳ 300 ಕ್ಕೂ ಹೆಚ್ಚು ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳಿವೆ. ಏರೋಸ್ಪೇಸ್, ರಕ್ಷಣಾ ತಂತ್ರಜ್ಞಾನ, ಕೃತಕ ಬುದ್ಧಿ ಮತ್ತೆ,ಸೆಮಿ ಕಂಡಕ್ಟರ್, ನವೀಕರಿಸಬಹುದಾದ ಇಂಧನ, ಐ.ಟಿ– ಬಿ.ಟಿ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಎಲ್ಲರಿಗೂ ತಂತ್ರಜ್ಞಾನ: ಬೆಂಗಳೂರು ಟೆಕ್ ಸಮ್ಮಿಟ್ ಹಿಂದಿನಿಂದಲೂ ಯಶಸ್ವೀ ಸಮಾವೇಶವಾಗಿದ್ದು, ಈ ಬಾರಿಯ ಸಮಾವೇಶ ಇನ್ನಷ್ಟು ಫಲಪ್ರದವಾಗಬೇಕು. ತಂತ್ರಜ್ಞಾನದ ಕ್ಷೇತ್ರದ ಮುನ್ನಡೆಯಲ್ಲಿ, ತಂತ್ರಜ್ಞಾನವನ್ನು ಪ್ರತಿಯೊಬ್ಬರಿಗೂ ಹಾಗೂ ಸಂಪೂರ್ಣ ವ್ಯವಸ್ಥೆಗೆ ತಲುಪಿಸುವಲ್ಲಿ ಈ ಸಮಾವೇಶದಿಂದ ನಿಖರ ಹಾಗೂ ಜವಾಬ್ದಾರಿಯುತ ಕೊಡುಗೆ ದೊರೆಯುವುದು ಎಂಬ ಆಶಯವನ್ನು ಮುಖ್ಯಮಂತ್ರಿಯವರು ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಎಲ್ಲ ನಾವೀನ್ಯತೆದಾರರು ತಮ್ಮ ಬುದ್ಧಿಶಕ್ತಿ ಪ್ರದರ್ಶಿಸಲು ಅಗತ್ಯವಿರುವ ವಾತಾವರಣವನ್ನು ಕರ್ನಾಟಕ ಹೊಂದಿದೆ. ವಲಯ ನಿರ್ದಿಷ್ಟ, ಪ್ರಗತಿಪರ ನೀತಿಗಳು, ವಿವಿಧ ಕ್ಷೇತ್ರಗಳ ಅಭ್ಯುದಯಕ್ಕೆ ದಾರ್ಶನಿಕ ತಂಡಗಳು, ವಿವಿಧ ಕ್ಷೇತ್ರಗಳ ನಾಯಕರ ಬೆಂಬಲ ಕರ್ನಾಟಕದಲ್ಲಿದೆ. ಇದರಿಂದಾಗಿ ಕರ್ನಾಟಕವು ಅತ್ಯಂತ ಶ್ರೀಮಂತ, ಉನ್ನತ ಚಿಂತನೆಯ ನಾಯಕತ್ವ, ಪ್ರತಿಭಾವಂತ ಮತ್ತು ಕುಶಲ ಮಾನವ ಸಂಪನ್ಮೂಲವನ್ನು ಹೊಂದಿದೆ ಎಂದು ಬೊಮ್ಮಾಯಿ ಅವರು ತಿಳಿಸಿದರು.

ಯಶಸ್ಸು ಸಾಧನೆಯ ಭಾಗವಾಗಿದ್ದು, ದೇಶ ಹಾಗೂ ವಿಶ್ವದ ಏಳಿಗೆಗೆ ಹಾಗೂ ಅಂತಿಮವಾಗಿ ಮನುಕುಲದ ಒಳಿತಿಗೆ ಕಾರಣವಾಗಬಲ್ಲದು. ಎಲ್ಲ ದೇಶಗಳ ಪ್ರತಿನಿಧಿಗಳು ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಹೂಡಿಕೆ ಮಾಡಿ, ಯಶಸ್ಸು ಗಳಿಸಿ ಸಾಧನೆ ಮಾಡಬೇಕು ಎಂದರು.

ನಾವೀನ್ಯತೆ ಸರಸ್ವತಿಯಂತೆ. ಬೆಂಗಳೂರು ಸರಸ್ವತಿಯ ವಾಹನ ಹಂಸದಂತೆ. ಹಂಸ ಭಾರಿ ಗಾತ್ರ, ತೂಕದ ಪಕ್ಷಿಯಾಗಿದ್ದರೂ, ಅತಿ ಎತ್ತರಕ್ಕೆ ಏರಬಲ್ಲ ಪಕ್ಷಿಯಾಗಿದೆ. ಅಂತೆಯೇ ಬೆಂಗಳೂರು ನಾವಿನ್ಯತೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂದು ಅವರು ಬಣ್ಣಿಸಿದರು.

**
ಬಿಟಿಎಸ್ ಶೃಂಗದಲ್ಲಿ ನೆರೆದಿರುವವರನ್ನು ನೋಡಿದರೆ ನನಗೆ ಗಗನನೌಕೆಯಲ್ಲಿ ಕುಳಿತು ಭವಿಷ್ಯ ಯಾನ ಮಾಡುತ್ತಿದ್ದೇನೆ ಎನ್ನಿಸುತ್ತಿದೆ. ಕರ್ನಾಟಕವು ಜ್ಞಾನದ ಅಧಿದೇವತೆಯಾದ ಸರಸ್ವತಿಯ ನೆಲೆವೀಡು. ಸರಸ್ವತಿಯನ್ನು ಹೊತ್ತಿರುವ ಹಂಸಪಕ್ಷಿಗಳು ಮಾನಸ ಸರೋವರದ ಎತ್ತರವನ್ನು ತಲುಪಬೇಕು. ಇದು ಉದ್ಯಮಿಗಳ ಗುರಿಯಾಗಬೇಕು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

*
ಐಟಿ, ಬಿಟಿಗಳ ಜೊತೆಗೆ ನಮ್ಮ ಡ್ಯೂಟಿ ಸೇರಿಕೊಳ್ಳಬೇಕು ಆಗ ನಾವೆಲ್ಲರೂ ಮೈಟಿ (ಶಕ್ತಿಶಾಲಿ) ಆಗಬಹುದು.
-ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

**
ರಾಜ್ಯವು ಮುಂಬರುವ ದಿನಗಳಲ್ಲಿ ಬಯೋಎಕಾನಮಿಯಲ್ಲೂ ದೇಶಕ್ಕೆ ಅಗ್ರ ಸ್ಥಾನವನ್ನು ಅಲಂಕರಿಸಲಿದೆ. ಜೀವವಿಜ್ಞಾನವನ್ನು ಉತ್ತೇಜಿಸಲು ಸದ್ಯದಲ್ಲೇ ಎಲಿಕ್ಸ್ ಪಾರ್ಕ್ ಸ್ಥಾಪನೆ ಮಾಡಲಾಗುವುದು.
-ಡಾ.ಸಿ.ಎನ್.ಅಶ್ವತ್ಥನಾರಾಯಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಸಚಿವ

**
ಇಸ್ರೇಲ್‌ನ ಪ್ರಾಯೋಗಿಕತೆ ಹಾಗೂ ಭಾರತದ ಕಲ್ಪನೆ ಎರಡೂ ಸೇರಿದರೆ ನಾವೀನ್ಯತೆಯಲ್ಲಿ ಕ್ರಾಂತಿ ಉಂಟುಮಾಡಬಹುದು. ಎರಡೂ ದೇಶಗಳು ಸೇರಿಕೊಂಡು ಜಗತ್ತಿನ ಸಮಸ್ಯೆಗಳಿಗೆ ತಂತ್ರಜ್ಞಾನವನ್ನು ಆಧರಿಸಿ ಪರಿಹಾರ ಕಂಡುಹಿಡಿಯಲು ಸಾಧ್ಯವಿದೆ. ಯಾರು ನಾವೀನ್ಯತೆಗೆ ತೆರೆದುಕೊಳ್ಳುತ್ತಾರೋ ಅವರದೇ ಮುಂದಿನ ಭವಿಷ್ಯ.
-ನಫ್ತಾಲಿ ಬೆನೆಟ್, ಇಸ್ರೇಲ್ ಪ್ರಧಾನಿ

**
ಬೆಂಗಳೂರು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ನೆಲೆಯಾಗಿದೆ. ಇಲ್ಲಿ ನಾವು ನಮ್ಮ ಕಾನ್ಸುಲೇಟ್ ಕಚೇರಿ ತೆರೆಯಲಿದ್ದೇವೆ.
-ಸ್ಕಾಟ್ ಮಾರಿಸನ್, ಆಸ್ಟ್ರೇಲಿಯಾ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT