ಬುಧವಾರ, ಆಗಸ್ಟ್ 17, 2022
26 °C

ಜನವರಿ 1ರಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ತರಗತಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಜನವರಿ 1 ರಿಂದ ಆರಂಭಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಕೋವಿಡ್‌ ಲಾಕ್‌ಡೌನ್‌ ಕಾರಣ ಕಳೆದ ಮಾರ್ಚ್‌ನಲ್ಲಿ ಶಾಲಾ– ಕಾಲೇಜುಗಳನ್ನು ಮುಚ್ಚಲಾಗಿತ್ತು. ಶಾಲೆಗಳ ಪುನರಾರಂಭದ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಚಿವರು ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ‘ರಾಜ್ಯ ಕೋವಿಡ್‌–19 ತಾಂತ್ರಿಕ ಸಲಹಾ ಸಮಿತಿ ನೀಡಿದ ವರದಿಯನ್ನು ಪರಿಶೀಲಿಸಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ’ ಎಂದು ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌, ‘10 ಮತ್ತು 12ನೇ ತರಗತಿಗಳ ಆರಂಭದ ಅನುಭವದ ಆಧಾರದಲ್ಲಿ ಜ.15ರಿಂದ 11ನೇ ತರಗತಿಗೆ ಅನುಮತಿ ನೀಡಲಾಗು ವುದು. ಆದರೆ, ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯವಲ್ಲ’ ಎಂದು ಹೇಳಿದರು.

ಕೋವಿಡ್‌ ಮಾರ್ಗಸೂಚಿ ಆಧಾರ ದಲ್ಲಿ ವಿವಿಧ ಇಲಾಖೆಗಳ ಸಹಕಾರದಲ್ಲಿ ಶಾಲಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೋವಿಡ್‌–19 ಮುನ್ನೆಚ್ಚರಿಕೆ ಕ್ರಮಗಳನ್ನು ಖಾತರಿಪಡಿಸುವ ಮೂಲಸೌಲಭ್ಯಗಳನ್ನು ಗಮನಿಸಿದ ನಂತರವೇ ತರಗತಿಗಳನ್ನು ಆರಂಭಿಸಲಾಗು
ತ್ತದೆ. 10 ಮತ್ತು 12ನೇ ತರಗತಿಗಳಿಗೆ ಮಂಡಳಿ ಪರೀಕ್ಷೆ ನಡೆಯಲಿರುವ ಕಾರಣ ಈ ಶೈಕ್ಷಣಿಕ ವರ್ಷದ ಉಳಿಯುವ ಅವಧಿಗೆ ಬೋಧಿಸ ಬಹುದಾದ ಪಠ್ಯಗಳನ್ನು ಎನ್‌ಸಿಇಆರ್‌ಟಿ ಮಾರ್ಗದರ್ಶಿ ಸೂತ್ರಗಳ ಅನ್ವಯ ಅಂತಿಮಗೊಳಿಸಲಾಗಿದೆ. ಉಳಿದ ತರಗತಿಗಳ ಪಠ್ಯಗಳ ಕುರಿತು ಮುಂದಿನ ವಾರ ತೀರ್ಮಾನಿಸಲಾಗುತ್ತದೆ ಎಂದರು.

ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಶಾಲೆಗೆ ಹಾಜರಾಗುವ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ವಿದ್ಯಾರ್ಥಿ ನಿಲಯ ಪುನರಾರಂಭಿಸಲಿವೆ. ಆನ್‌ಲೈನ್‌ ತರಗತಿ ಮತ್ತು ಯೂಟ್ಯೂಬ್‌ ಕಲಿಕೆ ಮುಂದುವರಿ ಯಲಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಪೋಷಕರಿಂದ ಅನುಮತಿ ಪತ್ರ ತರುವುದು ಕಡ್ಡಾಯ ಎಂದು ಅವರು ಹೇಳಿದರು.

ಶಾಲೆಗಳಲ್ಲೇ ವಿದ್ಯಾಗಮ
6 ರಿಂದ 9 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳನ್ನು ಜ.1 ರಿಂದ ಶಾಲೆಗಳಲ್ಲೇ ಆರಂಭಿಸಲಾಗುವುದು. ಜ.14 ರಿಂದ 1 ರಿಂದ 5 ನೇ ತರಗತಿಗಳಿಗೂ ವಿದ್ಯಾಗಮ ವಿಸ್ತರಿಸಲಾಗುತ್ತದೆ. ಖಾಸಗಿ ಶಾಲೆಗಳಲ್ಲೂ ವಿದ್ಯಾಗಮ ಆರಂಭಿಸಬೇಕು ಎಂದು ಸಚಿವ ಸುರೇಶ್‌ ಕುಮಾರ್‌ ಹೇಳಿದರು.

*
ವಿದ್ಯಾರ್ಥಿಗಳಿಗೆ ಕಲಿಕೆಯು ಹೊರೆಯಾಗದಂತೆ ಅತ್ಯಂತ ಸುರಕ್ಷಿತವಾದ ವಾತಾವರಣವನ್ನು ನಾವು ಸೃಷ್ಟಿಸಿಕೊಡಲಿದ್ದೇವೆ. –ಎಸ್‌.ಸುರೇಶ್‌ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು