ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪುಸ್ತಕದಲ್ಲಿ ಬ್ರಾಹ್ಮಣರ ಅವಹೇಳನ: ಕ್ರಮಕ್ಕೆ ಸೂಚನೆ

Last Updated 16 ಡಿಸೆಂಬರ್ 2020, 20:37 IST
ಅಕ್ಷರ ಗಾತ್ರ

ಬೆಂಗಳೂರು: ‘ಆರನೇ ಮತ್ತು ಒಂಬತ್ತನೇ ತರಗತಿಯ ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನಕಾರಿ ಅಂಶಗಳಿದ್ದರೆ ಪರಿಶೀಲಿಸಿ, ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ.

ಈ ಬಗ್ಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಯೋಗ ಮುಖ್ಯಮಂತ್ರಿ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿತ್ತು.

‘ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ವಿಷಯವನ್ನು ಸೇರಿಸಿರುವುದು ಆಘಾತಕಾರಿ ವಿಷಯ. ಅಲ್ಲದೆ, ಇದು ಬೆಳೆಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ. ವೇದಗಳ ಕಾಲದಲ್ಲಿ ಆಚರಿಸುತ್ತಿದ್ದ ಯಜ್ಞ, ಯಾಗಗಳಲ್ಲಿ ಆಹಾರ ಧಾನ್ಯ, ಹಾಲು, ತುಪ್ಪವನ್ನು ಹವಿಸ್ಸು ಎಂದು ದಹಿಸುತ್ತಿದ್ದುದರಿಂದ ಆಹಾರದ ಅಭಾವ ಸೃಷ್ಟಿಯಾಯಿತು ಎಂದು ಕಪೋಕಲ್ಪಿತವಾಗಿ ಉಲ್ಲೇಖಿಸಿ ಸನಾತನ ಸಂಪ್ರದಾಯ ಆಚರಣೆಗಳಿಗೆ ಅವಮಾನ ಮಾಡಲಾಗಿದೆ. ಇದೆಲ್ಲವನ್ನೂ ಬ್ರಾಹ್ಮಣರು ಮಾಡುತ್ತಿದ್ದರೆಂದು ತಪ್ಪು ಅಭಿಪ್ರಾಯ ಮೂಡುವಂತೆ ನಮೂದಿಸಿಲಾಗಿದೆ. ಇದು ನಮ್ಮ ಸನಾತನ ಧರ್ಮ ಹಾಗೂ ಸಂಪ್ರದಾಯಕ್ಕೆ ಎಸಗಿದ ಅಪಚಾರ’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

‘ವೈದಿಕೆ ಆಚರಣೆಗಳು ದುಬಾರಿಯಾಗಿದ್ದು, ಸಂಸ್ಕೃತ ಮಂತ್ರದ ಮೂಲಕ ನಡೆಸುತ್ತಿದ್ದುದರಿಂದ ಜನಸಾಮಾನ್ಯರಿಗೆ ಲಭ್ಯವಾಗುತ್ತಿರಲಿಲ್ಲ ಹಾಗೂ ಅರ್ಥ ಆಗುತ್ತಿರಲಿಲ್ಲ. ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆಯಾಯಿತು ಎಂಬ ಸತ್ಯಕ್ಕೆ ದೂರವಾದ ಅಂಶಗಳನ್ನು ಪಠ್ಯದಲ್ಲಿ ಉಲ್ಲೇಖಿಸಿರುವುದು ವಿಷಾದನೀಯ. ಇದು ಬ್ರಾಹ್ಮಣ ಸಮುದಾವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಬಿಂಬಿಸುವ ಹೇಯ ಕೆಲಸ. ಹೀಗಾಗಿ, ಈ ಅಂಶಗಳನ್ನು ತೆಗೆದು ಹಾಕಬೇಕು’ ಎಂದು ಮಂಡಳಿಯ ನಿಯೋಗ ಮನವಿ ಮಾಡಿದೆ.

ಮಂಡಳಿಯ ಅಧ್ಯಕ್ಷ ಎಚ್‌.ಎಸ್‌. ಸಚ್ಚಿದಾನಂದಮೂರ್ತಿ, ನಿರ್ದೇಶಕರಾದ ವಿ. ಭಾನುಪ್ರಕಾಶ್‌ ಶರ್ಮಾ, ಕೆ.ಎನ್‌. ಛಾಯಾಪತಿ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT