ಗುರುವಾರ , ಸೆಪ್ಟೆಂಬರ್ 16, 2021
24 °C
ತನಿಖಾ ಸಂಸ್ಥೆಗಳಿಗೆ ಎಸ್‌.ಆರ್‌. ಹಿರೇಮಠ ಪತ್ರ

ಕಾಫಿ ಡೇ ಹಗರಣ: ತ್ವರಿತ ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾಫಿ‌ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಗರಣದ ಕುರಿತು ತ್ವರಿತವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ‌ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ‌ ಎಸ್.ಆರ್. ಹಿರೇಮಠ ಅವರು ವಿವಿಧ ತನಿಖಾ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ.

ಸಿಬಿಐ, ಜಾರಿ‌ ನಿರ್ದೇಶನಾಲಯ, ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ (ಎಸ್‌ಎಫ್ಐಒ), ಸೆಬಿ, ಕಪ್ಪು ಹಣ ಕುರಿತ ವಿಶೇಷ ತನಿಖಾ ತಂಡ (ಎಸ್‌ಐಟಿ), ಲೋಕಪಾಲ, ಕೇಂದ್ರೀಯ ವಿಚಕ್ಷಣ ದಳ (ಸಿವಿಸಿ), ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ನವೆಂಬರ್ 25ರಂದು ಪತ್ರ ಬರೆದಿದ್ದಾರೆ.

ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್.ಆರ್. ಹಿರೇಮಠ, ‘ಕಾಫಿ ಡೇ ಸಾರ್ವಜನಿಕರಿಂದ ಷೇರು ಹಣ ಸಂಗ್ರಹಿಸಿದ್ದ ಸಂಸ್ಥೆ. ಕಂಪನಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ನಡೆದಿದೆ. ಈ ಕುರಿತು ತ್ವರಿತವಾಗಿ ತನಿಖೆ ನಡೆಸುವಂತೆ ಪತ್ರದ ಮೂಲಕ ಒತ್ತಾಯಿಸಿದ್ದೇನೆ. ಪ್ರಧಾನಿ ಮತ್ತು ಕೇಂದ್ರ ಹಣಕಾಸು ಸಚಿವರಿಗೂ ಪತ್ರ ಬರೆದಿದ್ದೇನೆ’ ಎಂದರು.

ಕಾಫಿ ಡೇ ಕಂಪನಿಯಲ್ಲಿ ₹ 3,535 ಕೋಟಿ‌ ಮೊತ್ತದ ಹಗರಣ ನಡೆದಿರುವುದ‌ನ್ನು ಕಂಪನಿ‌ ನಡೆಸಿದ ಆಂತರಿಕ ತನಿಖೆ ಖಚಿತಪಡಿಸಿದೆ. ವಿವಿಧ ಬ್ಯಾಂಕ್ ಗಳಿಂದ‌ ₹ 3,000 ಕೋಟಿಗೂ ಹೆಚ್ಚು ಸಾಲ ಪಡೆದು ವಂಚಿಸಲಾಗಿದೆ. ಹಗರಣದ ಸಮಗ್ರ ಸಂಗತಿ ಹೊರ ಬರಬೇಕಾದರೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕಂಪನಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಾರ್ವಜನಿಕರಿಗೆ‌ ಮಾಹಿತಿ‌ ನೀಡುವಂತೆ ಕಾಫಿ‌ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ ಅಧ್ಯಕ್ಷರಾಗಿರುವ ಎಸ್.ವಿ. ರಂಗನಾಥ್ ಅವರಿಗೂ ಪತ್ರ ಬರೆಯಲಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ವಿ.ಜಿ. ಸಿದ್ಧಾರ್ಥ  ಪತ್ನಿ ಮಾಳವಿಕಾ, ನಿತಿನ್ ಬಾಗಮನೆ, ಬಾಲರಾಜ್, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಅವರ ಕುಟುಂಬದ ಇತರ ಸದಸ್ಯರ ವಿರುದ್ಧ ತನಿಖೆ‌ ನಡೆಸಬೇಕು ಎಂದು ಒತ್ತಾಯಿಸಿದರು.

ಕಾಫಿ ಡೇ ಮುಖ್ಯಸ್ಥರಾಗಿದ್ದ ಸಿದ್ಧಾರ್ಥ ಅವರು ಸುಮಾರು ₹ 60,000 ಕೋಟಿ ಮೊತ್ತದ ಷೇರು ಮಾರುಕಟ್ಟೆ ಹಗರಣದಲ್ಲಿ ಭಾಗಿಯಾಗಿರುವ ಆರೋಪವಿದೆ. ‘ಕೋ ಲೊಕೇಷನ್‌ ಅಂಡ್‌ ಡಾರ್ಕ್‌ ಫೈಬರ್‌’ ಹೆಸರಿನ ಹಗರಣದ ಕುರಿತು ಸಿಬಿಐ ತನಿಖೆ ಆರಂಭವಾಗಿದ್ದು, ಯಾವುದೇ ಪ್ರಗತಿಯಾಗಿಲ್ಲ. ತನಿಖೆ ಚುರುಕುಗೊಳಿಸುವಂತೆಯೂ ಪತ್ರದಲ್ಲಿ ಒತ್ತಾಯಿಸಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು