ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದ ತೊಡಕಿಗೆ ತೊಡಕಾಗದ ವಿವಾದ: ‘ಹಲಾಲ್‌, ಜಟ್ಕಾ’ ಗೊಂದಲ ಮರೆತು ಮಾಂಸ ಖರೀದಿ

ಯುಗಾದಿ ಹಬ್ಬದ ಮಾರನೆ ದಿನದ ಆಚರಣೆ
Last Updated 3 ಏಪ್ರಿಲ್ 2022, 19:33 IST
ಅಕ್ಷರ ಗಾತ್ರ

ಬೆಂಗಳೂರು: ಹಲಾಲ್‌ ಮತ್ತು ಜಟ್ಕಾ ಗೊಂದಲದ ನಡುವೆಯೂ ಬಾಂಧವ್ಯವನ್ನು ಯುಗಾದಿ ಹಬ್ಬ ಉಳಿಸಿದೆ. ರಾಜ್ಯದ ವಿವಿಧೆಡೆ ಮಾಂಸ ಕುರಿತಂತೆ ಇದ್ದ ಹಲಾಲ್‌, ಜಟ್ಕಾದ ಭಿನ್ನಾಭಿಪ್ರಾಯಗಳ ನಡುವೆಯೂ ಜನರು ಸೌಹಾರ್ದವಾಗಿ ಹಬ್ಬ ಆಚರಿಸಿದ್ದಾರೆ.

ಯುಗಾದಿ ಮಾರನೇ ದಿನದ ‘ವರ್ಷದ ತೊಡಕು’ ಸಂಭ್ರಮಕ್ಕೆ ಹಲಾಲ್‌, ಜಡ್ಕಾ ಅಷ್ಟೇನೂ ತೊಡಕಾಗಿಲ್ಲ. ಮಾಂಸದ ಗುಣಮಟ್ಟಕ್ಕೆ ಆದ್ಯತೆ ನೀಡಿ, ಹಿಂದೆ ಖರೀದಿಸುತ್ತಿದ್ದಂತೆ ಪರಿಚಿತರಲ್ಲಿಯೇ ಖರೀದಿ ಮಾಡಿರುವ ಪ್ರಕರಣಗಳು ವರದಿಯಾಗಿವೆ.

ಬೇವು ಬೆಲ್ಲ, ಹೋಳಿಗೆ ಹಂಚಿಕೆ (ಮೈಸೂರು ವರದಿ): ಸೌಹಾರ್ದ ಕರ್ನಾಟಕ ಆಶ್ರಯದಲ್ಲಿ ಶನಿವಾರ ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಸೌಹಾರ್ದ ಯುಗಾದಿ ಆಚರಿಸಲಾಯಿತು. ಮುಸ್ಲಿಂ, ಕ್ರೈಸ್ತ ಸಮುದಾಯದವರಿಗೆ ಬೇವು ಬೆಲ್ಲ, ಹೋಳಿಗೆ ಹಂಚಲಾಯಿತು.

ಸೌಹಾರ್ದ ಕರ್ನಾಟಕ ಮೈಸೂರು ವೇದಿಕೆಯ ವಿವಿಧ ಮುಖಂಡರು ಭಾಗಿಯಾಗಿದ್ದರು. ಎಚ್‌.ಡಿ.ಕೋಟೆ ಪಟ್ಟಣದಲ್ಲಿ ಶನಿವಾರ ಸೌಹಾರ್ದ ಭೋಜನ ಏರ್ಪಡಿಸಲಾಗಿತ್ತು. ಹಿಂದೂ, ಮುಸ್ಲಿಂ ಸ್ನೇಹಿತರು ಜೊತೆಯಲ್ಲಿ ಹೋಳಿಗೆ ಊಟ ಸವಿದರು.ಪುರಸಭೆ ಸದಸ್ಯರಾದ ನಂಜಪ್ಪ‍, ಆಸಿಫ್‌ ಇಕ್ಬಾಲ್‌, ಮಧು, ಮಹಮ್ಮದ್‌ ಶಫಿ ಸೇರಿ ಉಭಯ ಧರ್ಮದ ವಿವಿಧ ಮುಖಂಡರು ಭಾಗವಹಿಸಿದ್ದರು.

ಗುಣಮಟ್ಟದ ಮಾಂಸಕ್ಕೆ ಆದ್ಯತೆ

ಮೈಸೂರು: ಯುಗಾದಿ ‘ವರ್ಷದ ತೊಡಕು’ ಅಂಗವಾಗಿ ಮೈಸೂರು ಭಾಗದಲ್ಲಿ ಭಾನುವಾರ ಜನರು ಗುಣಮಟ್ಟಕ್ಕೆ ಆದ್ಯತೆ ನೀಡಿ ತಮಗಿಷ್ಟವಾದ ಅಂಗಡಿಗಳಲ್ಲಿ ಮಾಂಸ ಖರೀದಿಸಿದರು.

ಹಲಾಲ್‌ ಮಾಂಸವನ್ನು ಹಿಂದೂಗಳು ಖರೀದಿಸಬಾರದು ಎಂದು ಬಜರಂಗದಳ ಕಾರ್ಯಕರ್ತರು ಹಲವೆಡೆ ಪ್ರಚಾರ ಮಾಡಿದ್ದರು. ಈ ವಿಚಾರಕ್ಕೆ ಗಮನ ಕೊಡದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಭಾಗದ ಜನರು ತಾವು ಹಿಂದೆ ಖರೀದಿಸುತ್ತಿದ್ದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಖರೀದಿಯಲ್ಲಿ ತೊಡಗಿದ್ದರು.

ಹಲಾಲ್ ಗೊಂದಲ ಇಲ್ಲ (ಶಿವಮೊಗ್ಗ ವರದಿ): ನಗರದಲ್ಲಿ ಚಂದ್ರದರ್ಶನ ಇಲ್ಲದ ಕಾರಣ ಕೆಲವೆಡೆ ವರ್ಷದ ತೊಡಕು ನಡೆದಿಲ್ಲ. ಇನ್ನು‌ ಕೆಲ ಮಂದಿ ಸಂಪ್ರದಾಯದಂತೆ ಹಬ್ಬದ ಮರು ದಿನ ವರ್ಷದ ತೊಡಕು ಆಚರಿಸಿದ್ದಾರೆ.

ನಗರದ ಟ್ಯಾಂಕ್ ಮೊಹಲ್ಲಾ, ಗಾಂಧಿಬಜಾರ್, ಆರ್.ಎಂ.ಎಲ್. ನಗರ, ವಿನೋಬ ನಗರ, ಹೊಸಮನೆ, ಗೋಪಾಳ ಸೇರಿ ಹಲವು ಬಡಾವಣೆಗಳಲ್ಲಿ ಕೆಲವರು ಬೆಳಿಗ್ಗೆ ಮಟನ್, ಚಿಕನ್ ಖರೀದಿಸಿದ್ದಾರೆ. ಎಲ್ಲಿಯೂ ಹಲಾಲ್ ಗೊಂದಲದ ಬಗ್ಗೆ
ವರದಿಯಾಗಿಲ್ಲ.

ವರ್ಷದ ತೊಡಕು ಸರಾಗ (ಹುಬ್ಬಳ್ಳಿ ವರದಿ): ವರ್ಷದ ತೊಡಕು ಅಂಗವಾಗಿ ಭಾನುವಾರ ಜನರು ಮುಗಿಬಿದ್ದು ಮಾಂಸ ಖರೀದಿಸಿದರು. ಹಲಾಲ್‌ ಕಟ್‌, ಜಟ್ಕಾ ಕಟ್‌ ಭೇದಭಾವವೂ ಕಾಣಲಿಲ್ಲ.ಎಂದಿನಂತೆ ಜನರು ತಮ್ಮಿಷ್ಟದ ಅಂಗಡಿಗಳಲ್ಲಿ ಮಾಂಸ ಖರೀದಿಸಿ ಹಬ್ಬದ ಭೋಜನ ಸವಿದರು.

ಧಾರವಾಡ, ಬೆಳಗಾವಿ, ಕಾರವಾರ, ಹಾವೇರಿ, ಗದಗ, ಬಳ್ಳಾರಿ– ವಿಜಯನಗರ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲೂ ಇದೇ ಸ್ಥಿತಿ ಇತ್ತು.

‘ಗ್ರಾಹಕರು ಒಳ್ಳೆಯ ಮಾಂಸ ಯಾವ ಅಂಗಡಿಗಳಲ್ಲಿ ಸಿಗುತ್ತದೆ ಎಂದು ನೋಡಿ ಖರೀದಿಸುತ್ತಾರೆಯೇ ಹೊರತು, ಕುರಿ ಅಥವಾ ಕೋಳಿಯನ್ನು ಯಾವ ರೀತಿ ಕತ್ತರಿಸಿ ಮಾರಾಟ ಮಾಡುತ್ತಿದ್ದಾರೆ ಎನ್ನುವುದನ್ನಲ್ಲ. ಹಲಾಲ್ ಮತ್ತು ಜಟ್ಕಾ ಮಾಂಸ ಮಾರಾಟದ ಹಗ್ಗಜಗ್ಗಾಟ ನಮ್ಮೂರಲ್ಲಿಲ್ಲ’ ಎಂದು ಗಣೇಶಪೇಟೆಯ ಮಾಂಸದ ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ವಿವಾದಕ್ಕೆ ಕಿವಿಗೊಡದೆ ಮಾಂಸ ಖರೀದಿ

ಬೆಂಗಳೂರು: ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಯುಗಾದಿ ಮಾರನೇ ದಿನದ ‘ವರ್ಷದ ತೊಡಕು’ ಸಂಭ್ರಮಕ್ಕೆ ಹಲಾಲ್‌–ಜಟ್ಕಾ ವಿವಾದ ಅಡ್ಡಿಯಾಗಲಿಲ್ಲ.

ಭಾನುವಾರ ಬೆಳಗ್ಗೆಯಿಂದಲೇ ಮಾಂಸ ಖರೀದಿಗೆ ಮುಗಿಬಿದ್ದ ಜನರು ಹಲಾಲ್‌ ಕಟ್‌ ಮತ್ತು ಜಟ್ಕಾ ಕಟ್‌ ಎಂಬ ಗೊಂದಲ ಇಲ್ಲದೆಯೇ ಹಿಂದಿನಂತೆ ತಮಗೆ ಇಷ್ಟವಾದ ಅಂಗಡಿಗಳಲ್ಲಿಯೇ ಮಾಂಸ ಖರೀದಿಸಿದರು.

ಮುಸ್ಲಿಂ ಸಮುದಾಯದವರ ಮಟನ್ ಸ್ಟಾಲ್‌ಗಳ ಮುಂದೆಯೂ ಜನರ ಉದ್ದನೆಯ ಸಾಲು ಇತ್ತು. ಕೆಲವೆಡೆ ‘ಹಿಂದೂ ಮೀಟ್‌ ಮಾರ್ಟ್‌’, ‘ಜಟ್ಕಾ ಕಟ್‌ ಮಟನ್‌ ಅಂಗಡಿ’ ಎಂದು ಫ್ಲೆಕ್ಸ್‌ ಅಳವಡಿಸಲಾಗಿತ್ತು. ಬಜರಂಗದಳದ ಕಾರ್ಯಕರ್ತರು ಬೇವು–ಬೆಲ್ಲ ಹಂಚಿ ಹಿಂದೂ ಅಂಗಡಿಗಳಲ್ಲೇ ಜಟ್ಕಾ ಕಟ್‌ ಮಾಂಸ ಖರೀದಿಸಲು ಕೋರಿದರು. ಗ್ರಾಹಕರು ತಮಗೆ ಬೇಕಾದೆಡೆ ಮಾಂಸ ಖರೀದಿಸಿದರು.‌ ಕೆಲವು ಕಡೆ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ‘ಸೌಹಾರ್ದ ಯುಗಾದಿ ಕಾರ್ಯಕ್ರಮ’ದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ಜನರು ಬೇವು ಬೆಲ್ಲ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT