ಭಾನುವಾರ, ಏಪ್ರಿಲ್ 18, 2021
24 °C

ದ್ರೌಪದಿ ಅವಹೇಳನ: ಸಾಹಿತಿ ಭೈರಪ್ಪ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಸಾಹಿತಿ ಎಸ್.ಎಲ್ ಭೈರಪ್ಪ ಅವರು ತಿಗಳ ಸಮುದಾಯದ ಆರಾಧ್ಯ ದೇವತೆ ದ್ರೌಪದಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ತಿಗಳ ವಹ್ನಿಕುಲ ಸಂಘ ಶನಿವಾರ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದೆ. ಭೈರಪ್ಪನವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ.

ಮೈಸೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭೈರಪ್ಪನವರು ತಿಗಳ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅವರು ಸಾರ್ವಜನಿಕವಾಗಿ ತಿಗಳ ಸಮುದಾಯದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಮುದಾಯದ ನಾಯಕರು ಎಚ್ಚರಿಕೆ ನೀಡಿದ್ದಾರೆ. 

‘ಪ್ರತಿ ಸಮುದಾಯಕ್ಕೂ ಅದರದೇ ಆದ ಪುರಾಣ ಮತ್ತು ಐತಿಹಾಸಿಕ ನಂಟು ಇರುತ್ತದೆ. ಆ ನಂಬಿಕೆಗಳ ಮೇಲೆ ಆಯಾ ಸಮುದಾಯದ ಧಾರ್ಮಿಕ ಭಾವನೆ, ಸಂಪ್ರದಾಯ, ಆಚರಣೆಗಳಿರುತ್ತವೆ. ಒಂದು ಸಮುದಾಯದ ಸಂಪ್ರದಾಯದ ಬಗ್ಗೆ ಕೀಳಾಗಿ ಮಾತನಾಡುವುದು ಭೈರಪ್ಪನವರಂಥ ಹಿರಿಯಸಾಹಿತಿಗೆ ಶೋಭೆ ತರುವುದಿಲ್ಲ’ ಎಂದು ತಿಗಳ ವಹ್ನಿಕುಲ ಸಂಘದ ತಾಲ್ಲೂಕು ಅಧ್ಯಕ್ಷ ಗೋಪಾಲಕೃಷ್ಣ ಹೇಳಿದ್ದಾರೆ.

ತಿಗಳ ಸಂಘ ರಾಜ್ಯ ಸಂಘದ ನಿರ್ದೇಶಕ ಎಸ್.ಸಿ.ಚಂದ್ರಪ್ಪ, ಸದಸ್ಯ ಲಕ್ಷ್ಮಣ್, ಸಂಚಾಲಕ ಮುನಿವೀರಣ್ಣ, ತಾಲ್ಲೂಕು ಗೌರವಾಧ್ಯಕ್ಷ ಕೇಶವಪ್ಪ, ಉಪಾಧ್ಯಕ್ಷ ಶಿವರಾಮಪ್ಪ ಮುಂತಾದವರು ಠಾಣೆಗೆ ತೆರಳಿ ದೂರು ನೀಡಿದ ತಂಡದಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.