ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂ.ಪ.ನಾಗರಾಜಯ್ಯ ವಿಚಾರಣೆ: ಸಾಹಿತ್ಯ ವಲಯದಲ್ಲಿ ಖಂಡನೆ

Last Updated 22 ಜನವರಿ 2021, 11:54 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಸಾಹಿತಿ ಹಂ.ಪ. ನಾಗರಾಜಯ್ಯ ಅವರ ವಿರುದ್ಧ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಿದ ಪೊಲೀಸರ ನಡೆಗೆ ಸಾಹಿತ್ಯ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

‘ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ ಎಂದು ಹಿರಿಯ ಸಾಹಿತಿಗಳು ಟೀಕಿಸಿದ್ದಾರೆ. ಮಂಡ್ಯದಲ್ಲಿ ಕಳೆದ ಜ.17ರಂದು ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ್ದ ಅವರು, ಕೇಂದ್ರ ಸರ್ಕಾರವನ್ನು ದುರ್ಯೋಧನ, ಗೋಮುಖ ವ್ಯಾಘ್ರಕ್ಕೆ ಹೋಲಿಕೆ ಮಾಡಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ಕಾರ್ಯಕರ್ತರೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಹಂ.ಪ.ನಾ ಅವರನ್ನು ವಿಚಾರಣೆ ನಡೆಸಿದ್ದ ಪೊಲೀಸರು, ಹೇಳಿಕೆ ಪಡೆದು ಕಳುಹಿಸಿದ್ದರು. ಪೊಲೀಸರ ಈ ನಡೆಯ ವಿರುದ್ಧ ಸಾಹಿತ್ಯ ವಲಯದ ಪ್ರಮುಖರು ಸಿಡಿದೆದ್ದಿದ್ದು, ಹಂ.ಪ.ನಾ ಅವರಿಗೆ ನೈತಿಕ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಬರಗೂರು ರಾಮಚಂದ್ರಪ್ಪ, ನ್ಯಾ.ಗೋಪಾಲಗೌಡ, ನ್ಯಾ.ಎ.ಜೆ. ಸದಾಶಿವ, ನ್ಯಾ. ನಾಗಮೋಹನದಾಸ್, ಸಿದ್ಧನಗೌಡ ಪಾಟೀಲ್, ಡಾ.ಜಿ. ರಾಮಕೃಷ್ಣ, ಬಸವರಾಜ ಸಬರದ, ಸುಕನ್ಯಾ ಮಾರುತಿ, ಕೆ. ಶರೀಫ, ಭಕ್ತರಹಳ್ಳಿ ಕಾಮರಾಜ್, ಆರ್‌.ಜಿ. ಹಳ್ಳಿ ನಾಗರಾಜ್, ಗುರುಶಾಂತ್, ಬಿ. ರಾಜಶೇಖರಮೂರ್ತಿ, ಎಚ್.ಆರ್. ಸ್ವಾಮಿ, ಗುಡಿಹಳ್ಳಿ ನಾಗರಾಜ್, ಬಿ. ರಾಜಶೇಖರ ಮೂರ್ತಿ, ಕೆ.ಎಸ್. ವಿಮಲಾ ಸೇರಿದಂತೆ ಹಲವರು ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.

‘85 ವರ್ಷದ ಹಂ.ಪ. ನಾಗರಾಜಯ್ಯ ಅವರನ್ನು ಪೊಲೀಸರು ಮಂಡ್ಯಕ್ಕೆ ಕರೆಸಿಕೊಂಡು ಹೇಳಿಕೆ ಪಡೆದಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾವುದೇ ನೇತಾರರು ಹಾಗೂ ಸರ್ಕಾರವನ್ನು ಮೆಚ್ಚುವ ಸ್ವಾತಂತ್ರ್ಯ ಇರುವಂತೆ ಟೀಕಿಸುವ, ವಿಮರ್ಶಿಸುವ ಸ್ವತಂತ್ರ್ಯವೂ ಇರುತ್ತದೆ. ರೈತರು ನಡೆಸುತ್ತಿರುವ ಚಳವಳಿಗೆ ಸ್ಪಂದಿಸಿ, ಕೇಂದ್ರ ಸರ್ಕಾರವನ್ನು ಪ್ರಶ್ನಸಿದ್ದಾರೆ. ಅದು ಇಷ್ಟವಾಗದವರು ಪ್ರತ್ಯು‌ತ್ತರ ನೀಡಬಹುದಾಗಿತ್ತು. ಆದರೆ, ಪೊಲೀಸ್ ಠಾಣೆಗೆ ಕರೆಸಿಕೊಳ್ಳುವಂತೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಈ ಅನುಚಿತ ವರ್ತನೆಯನ್ನು ಖಂಡಿಸುತ್ತೇವೆ’ ಎಂದು ಸಾಹಿತಿಗಳು ಹಾಗೂ ಪ್ರಗತಿಪರರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT