ಸೋಮವಾರ, ನವೆಂಬರ್ 28, 2022
20 °C

ಚಿಲುಮೆ ಸಂಸ್ಥೆಯಲ್ಲಿ ‘ಗಂಡಸು’ ಸಚಿವರಿಗೆ ಸೇರಿದ ಚೆಕ್ ದೊರಕಿದ್ದೇಕೆ: ಕಾಂಗ್ರೆಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಸಂಸ್ಥೆಯೊಂದಕ್ಕೆ ಮತದಾರರ ಪಟ್ಟಿ ಪರಿಷ್ಕರಣೆಯ ಅನುಮತಿ ನೀಡಿರುವುದು ಕಾಂಗ್ರೆಸ್‌ –ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. 

ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಿ.ಎನ್‌.ಅಶ್ವತ್ಥನಾರಾಯಣ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. 

‘ಚಿಲುಮೆ ಸಂಸ್ಥೆಯಲ್ಲಿ ಸಚಿವರಿಗೆ ಸಂಬಂಧಿಸಿದ ಚೆಕ್ ದೊರಕಿದ್ದೇಕೆ?, ಸಚಿವರ ಲೆಟರ್ ಹೆಡ್‌ಗೆ ಅಲ್ಲೇನು ಕೆಲಸ? ಆ ‘ಗಂಡು’ ಸಚಿವರಿಗೂ ಚಿಲುಮೆ ಸಂಸ್ಥೆಗೂ ಯಾವ ವ್ಯವಹಾರ? ಬೊಮ್ಮಾಯಿ ಅವರೇ, ಇದಕ್ಕೆಲ್ಲ ಉತ್ತರ ಬೇಕಲ್ಲವೇ? ಸಾಕ್ಷಿ ನಾಶಕ್ಕಾಗಿ ಕೇವಲ ಪೊಲೀಸ್ ತನಿಖೆಗೆ ಬಿಟ್ಟಿದ್ದೀರಾ? ನ್ಯಾಯಾಂಗ ತನಿಖೆಗೆ ಹಿಂದೇಟು ಏಕೆ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

‘ಚಿಲುಮೆ ಸಂಸ್ಥೆಯವರು ಸಮೀಕ್ಷೆಗೆ ಭೇಟಿ ನೀಡಿದ ಮರುದಿನವೇ ಪಟ್ಟಿಯಿಂದ ಮತದಾರರ ಹೆಸರು ಮಾಯವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಸರ್ಕಾರದ ಸಹಕಾರವಿಲ್ಲದೆ ಹೆಸರು ಮಾಯ ಮಾಡಲು ಹೇಗೆ ಸಾಧ್ಯ? ಆ ಸಂಸ್ಥೆಗೆ ಸಮೀಕ್ಷೆಯ ಅನುಮತಿ ಇಲ್ಲ ಎಂದಾದರೆ ಅವರೇಕೆ ಸಮೀಕ್ಷೆ ಮಾಡಲು ಮುಂದಾಗಿದ್ದರು, ಯಾರ ಹಿತಾಸಕ್ತಿಗೆ ಸಮೀಕ್ಷೆ ನಡೆಸುತ್ತಿದ್ದರು’ ಎಂದು ಕಾಂಗ್ರೆಸ್ ಗುಡುಗಿದೆ. 

‘ಪೇಸಿಎಂ ಪೋಸ್ಟರ್ ಅಂಟಿಸಿದ್ದಕ್ಕೆ ತುರಾತುರಿಯಲ್ಲಿ ಪೊಲೀಸ್ ತಂಡ ರಚನೆ, ಸಿಸಿಬಿ ತನಿಖೆ ಎಂದು ಮುತುವರ್ಜಿ ವಹಿಸಿದ ಬೊಮ್ಮಾಯಿ ಅವರೇ, ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿರುವ ಚಿಲುಮೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಹಿಂದೇಟು ಹಾಕುತ್ತಾ ಉಡಾಫೆ ಮಾತಾಡಿಕೊಂಡು ತಿರುಗುತ್ತಿರುವುದೇಕೆ? ಕನಿಷ್ಠ ಎಸ್‌ಐಟಿಯನ್ನೂ ರಚಿಸದಿರುವುದೇಕೆ’ ಎಂದು ಕಾಂಗ್ರೆಸ್ ಟೀಕಿಸಿದೆ. 

‘ಚಿಲುಮೆ ಸಂಸ್ಥೆಗೆ ಅನುಮತಿ ನೀಡಿದ್ದು ಚುನಾವಣಾ ಆಯೋಗ, ಸರ್ಕಾರಕ್ಕೆ ಸಂಬಂಧವಿಲ್ಲ ಎನ್ನುತ್ತಾರೆ ಸಿಎಂ ಮತ್ತು ಬಿಜೆಪಿಗರು. ಸಮೀಕ್ಷೆಗೆ ನಾವು ಅನುಮತಿ ನೀಡಿಲ್ಲ ಎನ್ನುತ್ತದೆ ಚುನಾವಣಾ ಆಯೋಗ. ಬೊಮ್ಮಾಯಿ ಅವರೇ, ಸುಳ್ಳು ಯಾರದ್ದು, ಸತ್ಯ ಯಾರದ್ದು? ಬಿಬಿಎಂಪಿ ಸರ್ಕಾರದ ಹಿಡಿತದಲ್ಲಿ ಇಲ್ಲವೇ? ಕಂದಾಯ ಅಧಿಕಾರಿಗಳ ಸಹಕಾರ ಸಿಕ್ಕಿದ್ದು ಹೇಗೆ? ಯಾಕೆ?’ ಎಂದು ಕಾಂಗ್ರೆಸ್ ಸಾಲುಸಾಲು ಪ್ರಶ್ನೆಗಳನ್ನು ಕೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು