ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಸರ್ಕಾರ ಬೀಳಿಸಲು ಪೆಗಾಸಸ್ ನೆರವು: ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ

Last Updated 20 ಜುಲೈ 2021, 20:29 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪೆಗಾಸಸ್ ಗೂಢಚರ್ಯೆ ನೆರವಿನೊಂದಿಗೆ ಕರ್ನಾಟಕದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡವಿರುವ ಕುರಿತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.

ಎಐಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಜೋಡಿಯೇ ರಾಜ್ಯದ ಮೈತ್ರಿ ಸರ್ಕಾರ ಕೆಡವಲು ಪೆಗಾಸಸ್ ನೆರವು ಪಡೆದಿದೆ ಎಂದು ದೂರಿದರು.

ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಉರುಳಿಸಲೂ ಇದೇ ಮಾರ್ಗ ಅನುಸರಿಸಿರುವ ಸಾಧ್ಯತೆ ಇದೆ. ಇದೀಗ ಮಹಾರಾಷ್ಟ್ರದಲ್ಲಿನ ಮೈತ್ರಿ ಸರ್ಕಾರ ಕೆಡವುವ ಪ್ರಯತ್ನವನ್ನೂ ಪೆಗಾಸಸ್ ಗೂಢಚರ್ಯೆ ನೆರವಿನಿಂದಲೇ ನಡೆಸಿರುವ ಸಾಧ್ಯತೆ ಇದೆ. ಈ ಕುರಿತು ಸಮಗ್ರ ತನಿಖೆ ನಡೆದಲ್ಲಿ ಅಕ್ರಮ ಬಹಿರಂಗಗೊಳ್ಳಲಿದೆ ಎಂದು ಅವರು ಹೇಳಿದರು.

ಸಂಸತ್‌ನ ಉಭಯ ಸದನಗಳಲ್ಲಿ ಈ ಕುರಿತು ಧ್ವನಿ ಎತ್ತಲಾಗುವುದು. ದೇಶದ ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ ಗುರುವಾರ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡು, ಆಯಾ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಬಿಜೆಪಿ ಸರ್ಕಾರದ ಗೂಢಚರ್ಯೆಯು ಜನಸಾಮಾನ್ಯರ ಮಲಗುವ ಕೋಣೆ ಹಾಗೂ ಬಚ್ಚಲು ಮನೆಯನ್ನು ಪ್ರವೇಶಿಸಿರುವುದು ಕಳವಳ ಮೂಡಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದರು.

ಇಸ್ರೇಲ್ ಮೂಲದ ಪೆಗಾಸಸ್ ಕಣ್ಗಾವಲು ತಂತ್ರಾಂಶದ ಬಳಕೆಯ ವಿರುದ್ಧ ಫ್ರಾನ್ಸ್ ಸರ್ಕಾರ ಈಗಾಗಲೇ ತನಿಖೆಗೆ ಆದೇಶಿಸಿದೆ. ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿರುವ ಪ್ರಧಾನಿ ಮೋದಿ ವಿರುದ್ಧವೇ ತನಿಖೆ ನಡೆಯುವ ಅಗತ್ಯವಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಜನ ಶಾಸಕರನ್ನು ಖರೀದಿಸಿ, ಅಕ್ರಮವಾಗಿ ಸರ್ಕಾರ ರಚಿಸಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ವರಿಷ್ಠರ ಬೆಂಬಲವೂ ಇತ್ತು ಎಂಬುದು ಈಗ ಸಾಬೀತಾದಂತಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಸರ್ಕಾರದ ನಾಟಕ ಈಗ ಬಹಿರಂಗಗೊಂಡಿದೆ. ನ್ಯಾಯಾಂಗ ತನಿಖೆಯ ಮೂಲಕವೇ ಪೆಗಾಸಸ್‌ ಗೂಢಚರ್ಯೆ ಪ್ರಕರಣ ಬಯಲಿಗೆ ಬರಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ವಿವಿಧ ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸಲು ಪೆಗಾಸಸ್ ಕಣ್ಗಾವಲು ತಂತ್ರಾಂಶದ ನೆರವು ಪಡೆಯುವ ಮೂಲಕ ಮೋದಿ ಮತ್ತು ಅಮಿತ್‌ ಶಾ ಜೋಡಿ ಹೊಸ ಕಲೆಯನ್ನು ಪ್ರದರ್ಶಿಸಿದೆ ಎಂದು ಲೋಕಸಭೆಯ ಕಾಂಗ್ರೆಸ್ ಗುಂಪಿನ ನಾಯಕ ಅಧೀರ್ ರಂಜನ್ ಚೌಧರಿ ವ್ಯಂಗ್ಯವಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಈ ಸಂದರ್ಭ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT