ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ‌ ಮಟ್ಟ ಕಾಂಗ್ರೆಸ್ ಪದಾಧಿಕಾರಿಗಳ ಬದಲಾವಣೆಗೆ‌ ಒತ್ತು: ಡಿ.ಕೆ. ಶಿವಕುಮಾರ್‌

Last Updated 21 ಜೂನ್ 2021, 8:04 IST
ಅಕ್ಷರ ಗಾತ್ರ

ನವದೆಹಲಿ: ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಪಾಲಿಕೆ‌ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸನ್ನದ್ಧಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ‌ ಮಟ್ಟದ ಪದಾಧಿಕಾರಿಗಳನ್ನು ಬದಲಿಸುವ ಚಿಂತನೆ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ಶಿವಕುಮಾರ್ ಹೇಳಿದರು.

ಪಕ್ಷದ ಜಿಲ್ಲಾ ಘಟಕದಲ್ಲಿ ಹಾಗೂ ಬ್ಲಾಕ್ ಮಟ್ಟದಲ್ಲಿ ಅಧ್ಯಕ್ಷರು, ಪದಾಧಿಕಾರಿಗಳನ್ನು ಬದಲಿಸಲಾಗುವುದು‌ ಎಂದು ಅವರು ಸೋಮವಾರ‌ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಹಾಗೂ ಪಕ್ಷ‌ ಸಂಘಟನೆ ವಿಷಯದಲ್ಲಿ ವಿಫಲರಾಗಿರುವ ಅರ್ಧದಷ್ಟು ಜಿಲ್ಲೆಗಳ ಅಧ್ಯಕ್ಷರನ್ನು ಬದಲಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

'ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಎಲ್ಲ ಮುಖಂಡರೂ ಪಕ್ಷದ‌ ಕರೆಗೆ ಓಗೊಟ್ಟು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ನಮ್ಮಲ್ಲಿ ವ್ಯಕ್ತಿಪೂಜೆಗೆ ಮಹತ್ವ ಇಲ್ಲ. ಬದಲಿಗೆ, ಪಕ್ಷವೇ ನಮಗೆ‌ ಮುಖ್ಯ' ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ.‌ ಆದರೂ ಕೆಲವರು ಮುಖ್ಯಮಂತ್ರಿ ವಿಷಯದಲ್ಲಿ ಹೇಳಿಕೆ‌ ನೀಡುತ್ತಿದ್ದಾರೆ. ಈ ಬಗ್ಗೆ ಮಹತ್ವ ನೀಡುವ ಅಗತ್ಯ ಇಲ್ಲ ಎಂದು ಅವರು ಹೇಳಿದರು.

ಆಡಳಿತಾರೂಢ ಬಿಜೆಪಿ ಶಾಸಕರು, ಸಚಿವರು ಮುಖ್ಯಮಂತ್ರಿ ಬದಲಾವಣೆಗೆ ಆಗ್ರಹಿಸುತ್ತಿದ್ದಾರೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಆಡಳಿತಾರೂಢ ಪಕ್ಷಕ್ಕೆ‌ ಸಂಬಂಧಿಸಿದ‌ ವಿಷಯ. ಕಾಂಗ್ರೆಸ್ ಮುಖಂಡರು ಆ ಬಗ್ಗೆ ಆಲೋಚಿಸುವ ಅಗತ್ಯವಿಲ್ಲ. ಮುಖ್ಯಮಂತ್ರಿ ನೇಮಕವು ಆಯಾ ಹೈಕಮಾಂಡ್ ಗಳಿಗೆ‌ ಬಿಟ್ಟ ವಿಚಾರ. ಆಗದ ವಿಷಯದ‌ ಬಗ್ಗೆ ತಲೆ‌ ಕೆಡಿಸಿಕೊಳ್ಳಬೇಕಿಲ್ಲ ಎಂದು ಅವರು ಒತ್ತಿಹೇಳಿದರು.

ಸದನ ಸಮಿತಿ ರಚಿಸಿ: ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ‌ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಂಟಿ ಸದನ‌ ಸಮಿತಿ ರಚಿಸಿ ತನಿಖೆ‌ ನಡೆಸುವಂತೆ ಪಕ್ಷ ಆಗ್ರಹಿಸಿದೆ. ವಿಧಾನ ಮಂಡಲದ ವರ್ಚುವಲ್ ಅಧಿವೇಶನ ನಡೆಸುವಂತೆಯೂ ಆಗ್ರಹಿಸಲಾಗಿದೆ ಎಂದು ಅವರು ವಿವರಿಸಿದರು.

'ದೆಹಲಿ ಭೇಟಿಯ ವೇಳೆ ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಪಕ್ಷ‌ ಸಂಘಟನೆ ಹಾಗೂ ಪದಾಧಿಕಾರಿಗಳ ಬದಲಾವಣೆ ಕುರಿತು ಚರ್ಚಿಸಿ‌ ಒಪ್ಪಿಗೆ ಪಡೆಯುವೆ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT