ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಡ್ಡಿ ಹೊರಲು ಸಿದ್ಧರಾದ ನಿಮ್ಮ ಗುಲಾಮಿ‌ ಮನಸ್ಥಿತಿಗೆ ಧಿಕ್ಕಾರ: ಸಿದ್ದರಾಮಯ್ಯ

ಅಕ್ಷರ ಗಾತ್ರ

ಬೆಂಗಳೂರು:ಬಿಜೆಪಿ ಕಾರ್ಯಕರ್ತರು ಸಂಗ್ರಹಿಸಿದ್ದ ಚಡ್ಡಿಗಳನ್ನು ಹೊತ್ತುತಮ್ಮ ಮನೆಯತ್ತ ಮೆರವಣಿಗೆಯಲ್ಲಿ ಸಾಗಿದ ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಅವರ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕೇವಲ ರಾಜಕೀಯ ಜಿದ್ದಾಜಿದ್ದಿಗಾಗಿ ಯಾರ್ಯಾರದೋ ಹಳೆಚಡ್ಡಿ ಹೊತ್ತುಕೊಳ್ಳಲೂ ಸಿದ್ಧರಾದ ನಿಮ್ಮ ಗುಲಾಮಿ‌ ಮನಸ್ಥಿತಿಗೆ ನನ್ನ ಧಿಕ್ಕಾರ ಎಂದು ಗುಡುಗಿದ್ದಾರೆ.

ಆರ್‌ಎಸ್‌ಎಸ್‌ ಅನ್ನು 'ಆರ್ಯರ ಆರ್‌ಎಸ್‌ಎಸ್‌' (AryanRSS) ಎಂದು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ,'ನಿಮ್ಮ ಸಂಘದ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ‌ ಜಾತಿಗಳು ಯಾಕೆ ಇಲ್ಲ? ಎನ್ನುವ ನನ್ನ ಪ್ರಶ್ನೆಗೆ ಆರ್‌ಎಸ್‌ಎಸ್‌ನವರು, ಬಿಜೆಪಿ ಶಾಸಕಛಲವಾದಿ ನಾರಾಯಣ ಸ್ವಾಮಿಯವರ ಮೂಲಕ ಉತ್ತರ ನೀಡಿದ್ದಾರೆ.ಈ‌ ಸಂದೇಶವನ್ನು ಬಿಜೆಪಿಯಲ್ಲಿರುವ ದಲಿತ ಬಂಧುಗಳು ಅರ್ಥಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ' ಎಂದು ಕುಟುಕಿದ್ದಾರೆ.

'ಆರ್‌ಎಸ್‌ಎಸ್‌ಗೆ ಬೆಂಬಲ ನೀಡಲು ಹಳೆ ಚಡ್ಡಿ ಹೊತ್ತು ಕೊಂಡು ಮೆರವಣಿಗೆ ಮಾಡಿದ ನಾರಾಯಣ ಸ್ವಾಮಿಯವರೇ,ನಿಮ್ಮ ಸ್ಥಾನಮಾನ ಏನಿದ್ದರೂ ಇಷ್ಟಕ್ಕೆ ಸೀಮಿತ.ಆ ಸಂಘದ ಉನ್ನತ ಪದಾಧಿಕಾರಕ್ಕೆ ನೀವು ಸದಾ ಅಸ್ಪೃಶ್ಯ ನೆನಪಿರಲಿ' ಎಂದು ಎಚ್ಚರಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ಛಲವಾದಿ ನಾರಾಯಣ ಸ್ವಾಮಿಯವರೇ, ಯಾರ್ಯಾರದೋ ಹಳೆ ಚಡ್ಡಿ ಹೊತ್ತುಕೊಂಡ ನಿಮ್ಮನ್ನು ಕಂಡು‌‌ ಮನಸ್ಸಿಗೆ ನೋವಾಯಿತು.ನಿಮ್ಮನ್ನು ಪಠ್ಯಪುಸ್ತಕ‌ ಪರಿಷ್ಕರಣಾ ಸಮಿತಿಯ ಅಧ್ಯಕ್ಷತೆಯಂತಹ ಸ್ಥಾನದಲ್ಲಿ‌‌ ಕಾಣುವ ಆಸೆ ನನಗೆ' ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, 'ಛಲವಾದಿ ನಾರಾಯಣ ಸ್ವಾಮಿಯವರೇ, ನಿಮ್ಮ ಪ್ರತಿಭಟನೆಯ ಹಕ್ಕನ್ನು ನಾನು ಗೌರವಿಸುತ್ತೇನೆ. ಆದರೆ ಕೇವಲ ರಾಜಕೀಯ ಜಿದ್ದಾಜಿದ್ದಿಗಾಗಿ ಹಳೆಚಡ್ಡಿ ಹೊತ್ತುಕೊಳ್ಳಲೂ ಸಿದ್ಧರಾದ ನಿಮ್ಮ ಗುಲಾಮಿ‌ ಮನಸ್ಥಿತಿಗೆ ನನ್ನ ಧಿಕ್ಕಾರ' ಎಂದು ಛೇಡಿಸಿದ್ದಾರೆ.

ಹಾಗೆಯೇ,'ಛಲವಾದಿ ನಾರಾಯಣ ಸ್ವಾಮಿಯವರೇ, ಸ್ವಾಭಿಮಾನವನ್ನು‌ ಉಸಿರಾಗಿಸಿಕೊಂಡು ಬದುಕಿದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಲ್ಪ ಓದಿ ಸ್ವಾಭಿಮಾನದ ಪಾಠ ಕಲಿಯಬೇಕೆಂದಷ್ಟೇ ‌ನಿಮಗೆ‌ ನಾನು ನೀಡುವ ಸಲಹೆ' ಎಂದು ಕಿವಿಮಾತು ಹೇಳಿದ್ದಾರೆ.

ಪಠ್ಯಪುಸ್ತಕದಲ್ಲಿ ಆರ್‌ಎಸ್‌ಎಸ್‌ ನೀತಿ ಅಳವಡಿಸಲಾಗುತ್ತಿದೆ ಎಂದು ಆರೋಪಿಸಿದ್ದ ಎನ್‌ಎಸ್‌ಯುಐ ಪದಾಧಿಕಾರಿಗಳು,ಜೂ.1 ರಂದು ತಿಪಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮನೆ ಮುಂಭಾಗ ಪ್ರತಿಭಟನೆ ನಡೆಸಿ, ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು.

ಆ ವೇಳೆ ಆರ್‌ಎಸ್‌ಎಸ್‌ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು.

ಅದಕ್ಕೆ ಸಂಭಂಧಿಸಿದಂತೆ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್‌ ನಾಯಕರುಎನ್‌ಎಸ್‌ಯುಐಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಚಡ್ಡಿ ಸುಡುವ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಅದಾದ ಬಳಿಕ ಚಡ್ಡಿ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT