ಶನಿವಾರ, ಸೆಪ್ಟೆಂಬರ್ 25, 2021
29 °C

ಬಿಎಸ್‌ವೈ ಹೊಗಳಿಕೆ, ಮೋದಿ–ಶಾ ವಿರುದ್ಧ ಟೀಕೆ: ಕಾಂಗ್ರೆಸ್‌ ನಾಯಕರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್‌ ಯಡಿಯೂರಪ್ಪ ಅವರು ರಾಜೀನಾಮೆ ನೀಡಿರುವುದರ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕರು ಒಂದೆಡೆ ಬಿಎಸ್‌ವೈ ಅವರನ್ನು ಹೊಗಳಿದ್ದರೆ ಮತ್ತೊಂದೆಡೆ ಮೋದಿ ಶಾ ಅವರನ್ನು ಟೀಕಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಬಸವಣ್ಣ, ಭೀಷ್ಮರಿಗೆ ಹೋಲಿಸುವ ಪ್ರಯತ್ನಗಳನ್ನು ಕಾಂಗ್ರೆಸ್‌ ಮತ್ತು ಅದರ ನಾಯಕರು ಮಾಡಿದ್ದಾರೆ.

ಬಲವಂತದ ನಿವೃತ್ತಿ ಕ್ಲಬ್‌ಗೆ ಸೇರಿಸಿದ ಮೋದಿ–ಶಾ: ಸುರ್ಜೇವಾಲ

’ಮೋದಿ ಮತ್ತು ಅಮಿತ್‌ ಶಾ ಅವರು ಯಡಿಯೂರಪ್ಪ ಅವರಿಗೆ ಮಾಡಿದ ಅವಮಾನ, ಅಪಮಾನ, ಹಿಂಸೆಯು ಅವರನ್ನು ರಾಜೀನಾಮೆ ನೀಡುವಂತೆ ಮಾಡಿತು. ಯಡಿಯೂರಪ್ಪ ಅವರನ್ನು ‘ಬಲವಂತದ ನಿವೃತ್ತಿ ಕ್ಲಬ್’ ಸದಸ್ಯರನ್ನಾಗಿ ಮಾಡಿದ್ದಾರೆ. ಮುಂದಿನ ಸಿಎಂ ಅನ್ನು ದೆಹಲಿಯ ನಿರಂಕುಶಾಧಿಕಾರಿಗಳು ನಿರ್ಧಾರಿಸುತ್ತಾರೆ. ಬಿಜೆಪಿಯ ಶಾಸಕರಲ್ಲ ಎಂಬುದು ನಮಗೆ ಗೊತ್ತಿದೆ,‘ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೆವಾಲ ಟ್ವೀಟ್‌ ಮಾಡಿದ್ದಾರೆ.

ಬಸವಣ್ಣರಂತೆ ಬಿಎಸ್‌ವೈ ಅವರನ್ನು ಇಳಿಸಿದರು: ಸತೀಶ್‌

‘ಒತ್ತಡ ತಂತ್ರ ಮಾಡಿ ರಾಜೀನಾಮೆ ಪಡೆಯಲು ಯಶಸ್ವಿಯಾಗಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ ಅವರನ್ನು ಮನುವಾದಿಗಳು ಒತ್ತಡ ಹೇರಿ ಮಂತ್ರಿ ಸ್ಥಾನದಿಂದ ಇಳಿಸಿದ್ದರು. ಅದೇ ಸ್ಥಿತಿ ಯಡಿಯೂರಪ್ಪ ಅವರಿಗೆ ಬಂದಿದೆ. ಇದು ದುಃಖಕರ. ಮನುವಾದಿಗಳು ಆಗಲೂ ಯಶಸ್ವಿಯಾಗಿದ್ದರು; ಈಗಲೂ ಆಗಿದ್ದಾರೆ. ಮನುವಾದಿಗಳ ವಿರುದ್ಧ ಅವರು ಹೋರಾಡಬೇಕು. ಒತ್ತಡದಿಂದ ಇಳಿಸಿದ್ದನ್ನು ಸಹಿಸಿಕೊಳ್ಳಲಾಗುವುದಿಲ್ಲ’ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಯಡಿಯೂರಪ್ಪ ಬಗ್ಗೆ ಹೆಮ್ಮೆ ಇದೆ: ದಿನೇಶ್‌ ಗುಂಡೂರಾವ್‌

ಸಿದ್ದಾಂತ ಹಾಗೂ ಪಕ್ಷ ಬೇರೆಯಾದರೂ ಯಡಿಯೂರಪ್ಪ ಹೋರಾಟದ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. 5ದಶಕಗಳ ಅವರ ರಾಜಕೀಯ ಜೀವನದ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ಬಿಜೆಪಿ ಹೈಕಮಾಂಡ್ ಗೌರವಯುತ ವಿದಾಯಕ್ಕೆ ಅವಕಾಶ ನೀಡಬೇಕಿತ್ತು. ಬಿಎಸ್‌ವೈ ಕಣ್ಣೀರು ಹಾಕಿದ್ದು ನೋಡಿದರೆ, ರಾಜೀನಾಮೆಯ ಹಿಂದೆ ಅಸಾಧ್ಯವಾದ ಒತ್ತಡವಿದ್ದದು ತಿಳಿಯುತ್ತದೆ ಎಂದು ದಿನೇಶ್‌ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಭೀಷ್ಮ ಎಂದು ಉಲ್ಲೇಖ

ಬಿಎಸ್‌ವೈ ಮುಕ್ತ ಬಿಜೆಪಿ ಅಭಿಯಾನದಲ್ಲಿ ಯಶಸ್ವಿಯಾದ ಸಿ.ಟಿ ರವಿ, ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಅಭಿನಂದನೆಗಳು. ಷಡ್ಯಂತ್ರಗಳ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ! ಯಶಸ್ವಿಯಾಗಿ ಅವಧಿ ಪೂರೈಸುತ್ತೇನೆ ಎನ್ನುತ್ತಿದ್ದವರನ್ನು ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲೇ ಕಣ್ಣೀರು ಸುರಿಸುತ್ತಾ ಇಳಿದು ಹೋಗುವಂತೆ ಮಾಡಿದಿರಿ ಎಂದು ಕಾಂಗ್ರೆಸ್‌ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಗೇಲಿ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು