ಭಾನುವಾರ, ಏಪ್ರಿಲ್ 11, 2021
27 °C
ಜಮೀರ್‌ ಮಾತಿಗೆ ಸಿದ್ದರಾಮಯ್ಯ ಮಣೆ– ಆರೋಪ

ಸಿದ್ದರಾಮಯ್ಯ ವಿರುದ್ಧ ಅಸಮಾಧಾನ: ರೋಷನ್‌, ಇಬ್ರಾಹಿಂ ಹಾದಿಯಲ್ಲಿ ತನ್ವೀರ್‌ ಸೇಠ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರು ಮಹಾನಗರಪಾಲಿಕೆ ಮೇಯರ್‌ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಕಾಂಗ್ರೆಸ್‌ ಕೈಜೋಡಿಸಲು ಶಾಸಕ ತನ್ವೀರ್‌ ಸೇಠ್ ಕಾರಣ ಎನ್ನಲಾಗಿದ್ದು, ಸಿದ್ದರಾಮಯ್ಯ ಜತೆ ಚರ್ಚಿಸದೆ ನಡೆದ ಈ ಬೆಳವಣಿಗೆ ಕಾಂಗ್ರೆಸ್‌ ಪಕ್ಷದಲ್ಲಷ್ಟೆ ಅಲ್ಲ, ಆ ಪಕ್ಷದ ಮುಸ್ಲಿಂ ನಾಯಕರ ಮಧ್ಯೆಯೂ ಭಾರಿ ಚರ್ಚೆಗೆ ಕಾರಣವಾಗಿದೆ.

ಮುಸ್ಲಿಂ ಸಮುದಾಯದ ನಾಯಕನಾಗಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿರುವ ಪಕ್ಷದ ಶಾಸಕ ಜಮೀರ್ ಅಹ್ಮದ್ ಖಾನ್ ಮಾತನ್ನು ಸಿದ್ದರಾಮಯ್ಯ ಕೇಳುತ್ತಿದ್ದಾರೆ ಎಂಬುವುದು ಕೆಲವರ ಆರೋಪ. ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ಗೆ ಸೇರಿದ್ದ ಜಮೀರ್, ಸಿದ್ದರಾಮಯ್ಯ ಆಪ್ತ ಬಳಗ ಸೇರಿಕೊಂಡ ಬಳಿಕ ರೋಷನ್‌ ಬೇಗ್, ಸಿ.ಎಂ. ಇಬ್ರಾಹಿಂ ಸೇರಿದಂತೆ ಹಳೇ ಸ್ನೇಹಿತರು ದೂರವಾದರು ಎಂಬ ಮಾತುಗಳು ಕಾಂಗ್ರೆಸ್‌ನಲ್ಲಿದೆ. ಇತ್ತೀಚೆಗೆ ಸಿದ್ದರಾಮಯ್ಯ ದೆಹಲಿ ಪ್ರವಾಸದ ಸಂದರ್ಭದಲ್ಲಿಯೂ ಜಮೀರ್ ಜತೆಗಿದ್ದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ತನ್ವೀರ್ ಸೇಠ್, ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅಣತಿ ಮೀರಿ ನಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ‘ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ತನ್ವೀರ್‌ ಅವರು ತಮ್ಮ ನಿಲುವು ಸಮರ್ಥಿಸಿಕೊಂಡಿದ್ದಾರೆ. ಅವರ ಬೆಂಬಲಿಗರೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದಾರೆ.

ಸಿ.ಎಂ. ಇಬ್ರಾಹಿಂ ಮತ್ತು ಸಿದ್ದರಾಮಯ್ಯ ಬಹುತೇಕ ಒಂದೇ ನಿಲುವು, ಸಿದ್ದಾಂತ ಹೊಂದಿದವರು. ಹಿಂದಿನ ಸಿದ್ದರಾಮಯ್ಯ ಇದೀಗ ಬದಲಾಗಿದ್ದಾರೆ ಎಂದು ಇಬ್ರಾಹಿಂ ಇತ್ತೀಚೆಗೆ ನೋವು ತೋಡಿಕೊಂಡದ್ದರು. ಇದೀಗ ತನ್ವೀರ್ ಸೇಠ್ ಕೂಡಾ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ದಾರೆ.

‘ಜಮೀರ್‌ ಮಾತಿಗೆ ಸಿದ್ದರಾಮಯ್ಯ ಮಣೆ ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ರೋಷನ್‌ ಬೇಗ್, ಇಬ್ರಾಹಿಂ, ಇದೀಗ ತನ್ವೀರ್ ಸೇಠ್ ಅವರು ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡು ದೂರವಾಗಿದ್ದಾರೆ ಎಂಬುವುದು ಕೆಲವರ ಆರೋಪ. ಇನ್ನು ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಯು.ಟಿ. ಖಾದರ್ ತಟಸ್ಥ ನಿಲುವು ಹೊಂದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಡಿ.ಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು