ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮಿತಿ ಹೆಚ್ಚಳಕ್ಕೆ ಕಾಂಗ್ರೆಸ್‌ ಸಭಾತ್ಯಾಗ

ಸಾಲ ಮಾಡದಿದ್ದರೆ ಸರ್ಕಾರ ನಡೆಸುವುದೇ ಕಷ್ಟ: ಸಮರ್ಥನೆ
Last Updated 26 ಸೆಪ್ಟೆಂಬರ್ 2020, 19:11 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ 3ರಷ್ಟು ಮೊತ್ತದ ಸಾಲ ಪಡೆಯುವ ಮಿತಿಯನ್ನು ಶೇ 5ಕ್ಕೆ ಹೆಚ್ಚಿಸುವ ಉದ್ದೇಶದಿಂದ ಮಂಡಿಸಿದ ‘ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ಮಸೂದೆ’ಯನ್ನು ವಿರೋಧಿಸಿ ಕಾಂಗ್ರೆಸ್‌ ಸದಸ್ಯರು ಶನಿವಾರ ವಿಧಾನಪರಿಷತ್‌ನಲ್ಲಿ ಸಭಾತ್ಯಾಗ ಮಾಡಿದರು.

‘ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸಾಲ ಮಾಡಿದರೆ ಹೊರೆ ಇನ್ನಷ್ಟು ಹೆಚ್ಚಾಗಲಿದೆ. ಹೀಗಾಗಿ, ಸಾಲ ತೆಗೆದುಕೊಳ್ಳುವ ಪ್ರಮಾಣವನ್ನು ಶೇ 4ಕ್ಕೆ ಸೀಮಿತಗೊಳಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಆಗ್ರಹಿಸಿದರು. ಆದರೆ, ಅದಕ್ಕೆ ಸರ್ಕಾರ ಒಪ್ಪದಿದ್ದಾಗ, ಪಕ್ಷದ ಇತರ ಸದಸ್ಯರ ಜೊತೆ ಸದನದಿಂದ ಹೊರನಡೆದರು.

ಮುಖ್ಯಮಂತ್ರಿ ಪರವಾಗಿ ಮಸೂದೆ ಮಂಡಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಕೋವಿಡ್‌ನಿಂದ ₹ 65 ಸಾವಿರ ಕೋಟಿ ವರಮಾನ ಕೊರತೆ ಇದೆ. ಸಾಲ ಮಾಡದೆ ಇದ್ದರೆ ಸರ್ಕಾರ ನಡೆಸುವುದೇ ಕಷ್ಟ’ ಎಂದರು.

ಸಾಲ ಮಾಡುವ ಮಾರ್ಗ ಬಿಟ್ಟು ಜಿಎಸ್‌ಟಿಯಿಂದ ಬರಬೇಕಾದ ಬಾಕಿ ಪಡೆಯಲು ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಒತ್ತಾಯಿಸಿದ ವಿರೋಧ ಪಕ್ಷದ ಸದಸ್ಯರು, ‘ನೋಟು ರದ್ಧತಿ, ಅವೈಜ್ಞಾನಿಕ ಜಿಎಸ್‍ಟಿಯಿಂದ ಆರ್ಥಿಕ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರ ಮಾಡಿದ ತಪ್ಪಿಗೆ ನಾವು ಯಾಕೆ ದಂಡ ಕಟ್ಟಬೇಕು. ಸಾಲ ಮಾಡುವುದರಿಂದ ರಾಜ್ಯದ ಜನ ಸಾಲದ ಹೊರೆ ಅನುಭವಿಸಬೇಕಾ’ ಎಂದು ವಾದಿಸಿದರು.

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್, ‘ಸಾಲ ಮಾಡಿ ನಾವು ತುಪ್ಪ ತಿನ್ನುವಂತಾಗಿದೆ’ ಎಂದರು. ‘ನಿಮ್ಮ ಸರ್ಕಾರದ ಅವಧಿಯಲ್ಲಿ ಸಾಲ ಯಾಕೆ ಮಾಡಿದಿರಿ’ ಎಂದು ಮಾಧುಸ್ವಾಮಿ ಪ್ರಶ್ನಿಸಿದರು. ಆಗ, ಜೆಡಿಎಸ್‍ನ ಬಸವರಾಜ ಹೊರಟ್ಟಿ, ‘ನಿಮ್ಮ ಪಕ್ಷದ ನಾಯಕರು ರೈತರ ಸಾಲ ಮನ್ನಾ ಮಾಡಿ ಎಂದು ಪಟ್ಟುಹಿಡಿದು, ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರನ್ನು ಉಸಿರಾಡಲು ಬಿಡಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ‌ ಸಿ.ಎಂ. ಇಬ್ರಾಹಿಂ, ಪಿ.ಆರ್‌. ರಮೇಶ್, ಪ್ರಕಾಶ್ ರಾಥೋಡ್‌, ಆರ್‌.ಬಿ. ತಿಮ್ಮಾಪೂರ‌ ಕೂಡಾ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT