ಮೇಕೆದಾಟು ಯೋಜನೆ: ಕಾಂಗ್ರೆಸ್ ನಿಮ್ಮೊಂದಿಗಿದೆ, ಕಾಮಗಾರಿ ಆರಂಭಿಸಿ -ಡಿಕೆಶಿ

ಮಂಗಳೂರು: ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮಿಳುನಾಡು ಸಿಎಂಗೆ ಮನವಿ ಮಾಡುತ್ತಿದ್ದಾರೆ. ಡಬಲ್ ಎಂಜಿನ್ ಸರ್ಕಾರದಿಂದ ಸಂಧಾನಕ್ಕೆ ಹೋಗುತ್ತಿರುವುದು ರಾಜ್ಯಕ್ಕೆ ಗೌರವ ತರುವಂಥದ್ದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ತಮಿಳುನಾಡಿನಲ್ಲಿ ಯಾವುದೇ ಸರ್ಕಾರವಿರಲಿ, ರಾಜ್ಯದ ವಿಷಯದಲ್ಲಿ ಒಂದಾಗುತ್ತಿದ್ದಾರೆ. ಯಡಿಯೂರಪ್ಪ ಅವರಿಗೂ ರಾಜಕೀಯ ಬದ್ಧತೆ ಇರಬೇಕು. ರಾಜ್ಯದ ಹಿತ ಕಾಪಾಡಬೇಕು. ನಾವು ನಿಮ್ಮ ಜೊತೆ ಇರುತ್ತೇವೆ. ಕೂಡಲೇ ಟೆಂಡರ್ ಕರೆದು, ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಜಾಗ, ನಮ್ಮ ಭೂಮಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ. ಕೆಲಸ ಮಾಡುವುದನ್ನು ಬಿಟ್ಟು ತಮಿಳುನಾಡಿನ ಜೊತೆ ಮಾತುಕತೆ ನಡೆಸುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.
ಮೇಕೆದಾಟು ವಿಚಾರ ರಾಜ್ಯ, ಬೆಂಗಳೂರಿಗೆ ಮಹತ್ವದ್ದು. ನಮ್ಮ ಸರ್ಕಾರ ಇದ್ದಾಗ ಯೋಜನೆ ರೂಪಿಸಲಾಗಿತ್ತು. ಪರಿಸರ ಸಚಿವಾಲಯದಿಂದ ಅನುಮತಿ ಸಿಕ್ಕಿದೆ. ಅದು ನಮ್ಮ ಯೋಜನೆ. ತಮಿಳುನಾಡಿನ ಪಾಲನ್ನು ಕೇಳುತ್ತಿಲ್ಲ. ನಮ್ಮ ಜಮೀನು ಇದಕ್ಕೆ ಬಳಸಲಾಗುತ್ತಿದೆ. ಶೇ 95 ರಷ್ಟು ಜಮೀನು ನನ್ನ ಕ್ಷೇತ್ರದ್ದಾಗಿದೆ.ಇದು ನಮ್ಮ ಆಂತರಿಕ ವಿಚಾರ. 3 ವರ್ಷದಲ್ಲಿ ಜಲಾಶಯ ನಿರ್ಮಿಸಿ, ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಯೋಜನೆಯಾಗಿದೆ ಎಂದು ತಿಳಿಸಿದರು.
ಮೊಗವೀರ ಸಮಾಜದ ಕುಂದುಕೊರತೆ ವಿಚಾರಿಸಲು ಈ ಪ್ರವಾಸ ಕೈಗೊಳ್ಳಲಾಗಿದೆ. ಸಂಘದ ಪ್ರಮುಖರ ಜೊತೆ ಸಭೆ ನಡೆಸಲಾಗಿದೆ. ಸಮಸ್ಯೆಗಳು ಏನು? ಪರಿಹಾರ ಏನು ಎಂಬುದರ ಬಗ್ಗೆ ವರದಿ ಪಡೆದಿದ್ದೇನೆ. ಪಕ್ಷದ ಚಿನ್ಹೆಯನ್ನು ಹಾಕದೇ ರಾಜಕೀಯ ರಹಿತವಾಗಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಬಿಜೆಪಿಯವರು ಎಲ್ಲರ ವಿಶ್ವಾಸ ಗಳಿಸಿ, ಗೆಲುವು ಸಾಧಿಸಿದ್ದಾರೆ. ಆದರೆ, ಈಗ ಅವರ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಸಬ್ಸಿಡಿ ಸಿಗುತ್ತಿಲ್ಲ. ಮೀನುಗಾರರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಿಲ್ಲ. ಸಿಆರ್ ಜೆಡ್ ಮಿತಿಯನ್ನು ಬೇರೆ ರಾಜ್ಯಗಳ ಮಾದರಿಯಲ್ಲಿಯೇ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಮೀನುಗಾರರ ಸಾಲಕ್ಕೆ ಸರ್ಕಾರವೇ ಜವಾಬ್ದಾರಿ ವಹಿಸಬೇಕು. ಸಬ್ಸಿಡಿ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಹರೀಶ್ ಕುಮಾರ್, ರಮಾನಾಥ ರೈ, ಯು.ಟಿ. ಖಾದರ್, ಐವನ್ ಡಿಸೋಜ, ಧ್ರುವನಾರಾಯಣ, ಮಿಥುನ್ ರೈ, ಜೆ.ಆರ್. ಲೋಬೊ, ಪಿ.ವಿ. ಮೋಹನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.