ಮಂಗಳವಾರ, ಏಪ್ರಿಲ್ 20, 2021
32 °C

ಬಿಜೆಪಿ ಸಚಿವರ ನಡೆ ಹೇಸಿಗೆ ಮೂಡಿಸುತ್ತದೆ: ಬ್ರಿಜೇಶ್ ಕಾಳಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಉದ್ಯೋಗದ ಆಮಿಷ ಒಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್‌ ವಕ್ತಾರ ಬ್ರಿಜೇಶ್‌ ಕಾಳಪ್ಪ ಒತ್ತಾಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಜೆಯೊಳಗೆ ರಮೇಶ್‌ ಜಾರಕಿಹೊಳಿ ರಾಜೀನಾಮೆ ಕೊಟ್ಟೇ ಕೊಡುತ್ತಾರೆ. ರಾಜೀನಾಮೆ‌ ಕೊಡುವಂಥ ಪರಿಸ್ಥಿತಿ ಇದೆ’ ಎಂದರು.

’ರಮೇಶ್‌ ಜಾರಕಿಹೊಳಿ ಯುವತಿ ಜೊತೆ ಇರುವ ಸಿ.ಡಿ ಹೊರಬಂದಿದೆ. ಈ ಹಿಂದೆ, ಅರವಿಂದ ಲಿಂಬಾವಳಿ ಅವರ ಬಗ್ಗೆಯೂ ಸಿ.ಡಿ ಹೊರ‌ಬಂದಿತ್ತು. ಅದು ಏನಾಯಿತು ಎಂದು ಗೊತ್ತಿಲ್ಲ. ಆದರೂ ಅರವಿಂದ ಲಿಂಬಾವಳಿ ಈಗ ಸಚಿವರಾಗಿದ್ದಾರೆ. ಸರ್ಕಾರದ ಕೆಲಸ‌ ದೇವರ ‌ಕೆಲಸ‌ ಎಂದು ಹೇಳುತ್ತೇವೆ. ಆದರೆ, ಬಿಜೆಪಿ‌‌ ಸಚಿವರ ನಡೆ ನೋಡಿದಾಗ ತುಂಬಾ ಹೇಸಿಗೆ ಮೂಡಿಸುತ್ತದೆ’ ಎಂದರು.

‘ಅತಿ‌ ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ರಮೇಶ್ ಹೇಳಿರುವುದು ಕೂಡಾ ಸಿ.ಡಿಯಲ್ಲಿದೆ. ಆ ಮಾತನ್ನು ಅವರು ಸಾರ್ವಜನಿಕವಾಗಿ ಹೇಳಬೇಕಿತ್ತು. ರಾಜೀನಾಮೆ ನೀಡಿ‌ ಹೊರಬಂದು ಹೀಗೆ ಹೇಳಬೇಕಿತ್ತು. ಭ್ರಷ್ಟರ ಜೊತೆ ರಮೇಶ್ ಇದ್ದಾರಾ. ಪ್ರಲ್ಹಾದ ಜೋಷಿ ಮುಂದೆ‌ ಮುಖ್ಯಮಂತ್ರಿ ಆಗುತ್ತಾರೆಂದೂ ಅವರೇ ಹೇಳುತ್ತಾರೆ. ಅಂದರೆ‌, ಯಡಿಯೂರಪ್ಪ ಬಗ್ಗೆ ಸಚಿವರಿಗೆ ಯಾವ ರೀತಿಯ ಅಭಿಪ್ರಾಯ ಇದೆ ಅನ್ನೋದು ಗೊತ್ತಾಗುತ್ತದೆ’ ಎಂದರು.

‘ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವರು. ಕಾವೇರಿ,‌ ಮಹಾದಾಯಿ ವ್ಯಾಜ್ಯವಿದೆ. ಅದರ ಬಗ್ಗೆ ಕೇಂದ್ರದ ಸಚಿವರ ಜೊತೆ ಮಾತನಾಡಲು ಅವರು ದೆಹಲಿಗೆ ಹೋಗಬೇಕಾಗುತ್ತದೆ. ಅವರು ಯಾವ ಮುಖ ಇಟ್ಟುಕೊಂಡು ಹೋಗುತ್ತಾರೆ. ಅಧಿಕಾರಿಗಳು, ಕೇಂದ್ರ ಸಚಿವರು ಯಾವ ರೀತಿ ನೋಡುತ್ತಾರೆ ಹೇಳಿ? ಇವರನ್ನು ಗಂಭೀರವಾಗಿ ಪರಿಗಣಿಸುತ್ತಾರಾ? ರಾಜ್ಯದ ‌ಹಿತಾಸಕ್ತಿ ಕಾಪಾಡಬೇಕೆಂದರೆ ರಮೇಶ್‌ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದೇ ಇದ್ದರೆ ಅವರಿಂದ ರಾಜ್ಯಕ್ಕೆ ಹಾನಿ ಆಗಲಿದೆ’ ಎಂದರು.

‘ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯನ್ನು ಬಳಸಿಕೊಂಡಿದ್ದಾರೆ. ಸಚಿವರು ಯುವತಿಗೆ ಸುಳ್ಳು ಆಶ್ವಾಸನೆ ನೀಡಿ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ. ಆಮಿಷವೊಡ್ಡಿದರೂ ಅತ್ಯಾಚಾರವಾಗಲಿದೆ’ ಎಂದೂ ಹೇಳಿದರು.

‘ಇದೇ ರೀತಿ ಸಂಜಯ್ ಜೋಷಿ ಅವರ ಸಿ.ಡಿ ಈ ಹಿಂದೆ ಬಿಡುಗಡೆ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಅದನ್ನು ಗಂಭೀರವಾಗಿ ಪರಿಗಣಿಸಿದ್ದರು. ಅವರಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ಸಿಗದಂತೆ ನೋಡಿಕೊಂಡಿದ್ದರು. ರಮೇಶ್‌ ಜಾರಕಿಹೊಳಿ ಸಿ.ಡಿಯನ್ನೂ ಗಂಭೀರವಾಗಿ ಪರಿಗಣಿಸುತ್ತಾರೆ ಎಂಬ ವಿಶ್ವಾಸ ಇದೆ’ ಎಂದೂ ಹೇಳಿದರು.

ಇದನ್ನೂ ಓದಿ... ಮಾನ ಮರ್ಯಾದೆ ಇದ್ದರೆ ಜಾರಕಿಹೊಳಿಯಿಂದ ರಾಜೀನಾಮೆ ಪಡೆಯಲಿ–ಸಿದ್ದರಾಮಯ್ಯ

ನ್ಯಾಯಾಂಗ ತನಿಖೆ ನಡೆಸಬೇಕು: ಕೆಪಿಸಿಸಿ ವಕ್ತಾರ ಸಂಕೇತ ಏಣಗಿ ಮಾತನಾಡಿ, ‘ಕರ್ನಾಟಕ ಭವನ ವಿಧಾನಸೌಧ ಇದ್ದಂತೆ. ಅಂಥ ಜಾಗದಲ್ಲಿ ಸಚಿವರು ಕಾಮದಾಹ ತೀರಿಸಿಕೊಂಡಿದ್ದಾರೆ. ಕೂಡಲೇ ಸಿ.ಡಿ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಪೊಲೀಸರು‌ ಭರವಸೆ ಉಳಿಸಿಕೊಂಡಿಲ್ಲ. ಸಚಿವರು ಅಧಿಕಾರದಲ್ಲಿ ಇದ್ದರೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ’ ಎಂದರು.

‘ಸಚಿವರಿಂದ ಮುಖ್ಯಮಂತ್ರಿ ತುರ್ತಾಗಿ ರಾಜೀನಾಮೆ ಪಡೆಯಬೇಕು. ಇಲ್ಲದೇ‌ ಇದ್ದರೆ ರಾಜ್ಯಪಾಲರು, ರಾಷ್ಟ್ರಪತಿಗಳನ್ನು ಭೇಟಿ ಮಾಡಿ ದೂರು ನೀಡುತ್ತೇವೆ. ರಮೇಶ್‌ ಜಾರಕಿಹೊಳಿ ಪ್ರಭಾವಿ ಸಚಿವರು. ಹೀಗಾಗಿ ಸಂತ್ರಸ್ತ ಯುವತಿಗೆ ರಕ್ಷಣೆ ನೀಡಬೇಕು’ ಎಂದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆಯೇ ಭ್ರಷ್ಟ ಎಂದು ಸಚಿವರು ಹೇಳಿದ್ದಾರೆ. ಇದು ಗಂಭೀರ ಆರೋಪ. ಮುಖ್ಯಮಂತ್ರಿ ಅಧಿಕಾರದಲ್ಲಿ ಹೇಗೆ‌ ಮುಂದುವರೆಯುತ್ತಾರೆ. ಇವರಿಗೆ ನೈತಿಕತೆ ಏನಾದರೂ ಇದೆಯಾ? ಈ ಬಗ್ಗೆಯೂ  ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು