ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆಮಾಡಲು ನೇಮಿಸಿರುವ ‘ಸ್ಕ್ರೀನಿಂಗ್ ಸಮಿತಿ’ ಗುರುವಾರ ತಡರಾತ್ರಿಯವರೆಗೂ ಸಭೆ ನಡೆಸಿದ್ದು, ಬಾಕಿ ಉಳಿದಿರುವ 100 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದೆ.
ಮೊದಲ ಹಂತದಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ. ಬಾಕಿ ಉಳಿದಿರುವ 100 ಕ್ಷೇತ್ರಗಳ ಪೈಕಿ 37 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕಳೆದ ವಾರ ಅಂತಿಮಗೊಳಿಸಲಾಗಿತ್ತು. ಉಳಿದ 67 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ದೊಡ್ಡಬಳ್ಳಾಪುರ ಸಮೀಪದ ರೆಸಾರ್ಟ್‌ನಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಸಭೆ ತಡರಾತ್ರಿಯವರೆಗೂ ನಡೆಯಿತು.
ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ್ ಸೇರಿದಂತೆ ಹಲವು ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಅರಸೀಕೆರೆಯ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಕಾಂಗ್ರೆಸ್ ‘ಸ್ಕ್ರೀನಿಂಗ್ ಸಮಿತಿ’ ಸಭೆಗೆ ಹಾಜರಾಗಿದ್ದಾರೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ಕಾಂಗ್ರೆಸ್‌ಗೆ ಮರಳಲು ನಿರ್ಧರಿಸಿದ್ದಾರೆ. ಅವರನ್ನು ಮೊಳಕಾಲ್ಮುರು ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಮರಳಿರುವ ಬಾಬುರಾವ್ ಚಿಂಚನಸೂರ್ ಅವರನ್ನು ಗುರುಮಠಕಲ್‌ನಿಂದ ಕಣಕ್ಕಿಳಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಗೊತ್ತಾಗಿದೆ.
ದೇವರ ಹಿಪ್ಪರಗಿಗೆ ಎಸ್.ಆರ್. ಪಾಟೀಲ, ಧಾರವಾಡ ಉತ್ತರಕ್ಕೆ ಮೋಹನ್ ಲಿಂಬಿಕಾಯಿ, ಬೊಮ್ಮನಹಳ್ಳಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಯಲಹಂಕಕ್ಕೆ ಕೇಶವ ರಾಜಣ್ಣ ಹೆಸರು ಮುಂಚೂಣಿಯಲ್ಲಿವೆ. ಪಿ.ಜಿ.ಆರ್. ಸಿಂಧ್ಯ ಅವರ ಹೆಸರನ್ನು ಪದ್ಮನಾಭನಗರ ಕ್ಷೇತ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
‘ಶಾಸಕರನ್ನು ಕರೆದೊಯ್ಯುವಾಗ ನೈತಿಕತೆ ಎಲ್ಲಿತ್ತು?’
ಬೆಂಗಳೂರು: ‘ಬಿಜೆಪಿ ಶಾಸಕರಿಗೆ ಕರೆಮಾಡಿ ಆಹ್ವಾನ ನೀಡುತ್ತಿದ್ದಾರೆ ಎಂದು ನಮ್ಮ ವಿರುದ್ಧ ಆರೋಪ ಮಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ, 18 ಶಾಸಕರ ಮನೆ ಬಾಗಿಲು ತಟ್ಟಿ ಕರೆದೊಯ್ಯುವಾಗ ನೈತಿಕತೆ ಎಲ್ಲಿ ಹೋಗಿತ್ತು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಗುಬ್ಬಿ ಮಾಜಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಗುರುವಾರ ಪತ್ರಿಕಾಗೋಷ್ಠಿ
ಯಲ್ಲಿ ಮಾತನಾಡಿ, ‘ಬಿಜೆಪಿಗೆ ಬಹುಮತ ಇಲ್ಲದಿದ್ದರೂ ‘ಆಪರೇಷನ್ ಕಮಲ’ ನಡೆಸಿ ನಾಲ್ಕು ವರ್ಷ ಅಧಿಕಾರ ಅನುಭವಿಸಿದ್ದೀರಿ. ಈಗ ಜನರು ನಿಮ್ಮ ದುರಾಡಳಿತಕ್ಕೆ ಕೊನೆಹಾಡಲು ನಿರ್ಧರಿಸಿದ್ದಾರೆ’ ಎಂದರು.
ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯರಾಗಿದ್ದ ಕಾಂತರಾಜು, ಮನೋಹರ್, ಶಾಸಕ ಶ್ರೀನಿವಾಸ ಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಈಗ ಎಸ್.ಆರ್. ಶ್ರೀನಿವಾಸ್ ಪಕ್ಷ ಸೇರಿದ್ದಾರೆ. ಮಧು ಬಂಗಾರಪ್ಪ, ದೇವೇಂದ್ರಪ್ಪ ಕೂಡ ಕಾಂಗ್ರೆಸ್‌ಗೆ ಬಂದಿದ್ದಾರೆ. 2018ರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳಾಗಿದ್ದ ಹಲವರು ಸೇರಿದಂತೆ ಜೆಡಿಎಸ್‌ನ 37 ಮುಖಂಡರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಎಲ್ಲರನ್ನೂ ಹಂತ ಹಂತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.