ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಅಮೆರಿಕ ಮಾದರಿ ಹೆದ್ದಾರಿ ನಿರ್ಮಾಣ: ಕೇಂದ್ರ ಸಚಿವ ನಿತಿನ್ ಗಡ್ಕರಿ

₹ 3,972 ಕೋಟಿ ಮೊತ್ತದಲ್ಲಿ 238 ಕಿ.ಮೀ. ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ
Last Updated 28 ಫೆಬ್ರುವರಿ 2022, 11:09 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯ ಸರ್ಕಾರವು ತ್ವರಿತವಾಗಿ ಭೂಸ್ವಾಧೀನ ಮಾಡಿಕೊಟ್ಟರೆ, ಅಗತ್ಯ ಅನುಮತಿ ಮೊದಲಾದವುಗಳಲ್ಲಿ ಸಹಕರಿಸಿದರೆ 2024ರ ವೇಳೆಗೆ ಕರ್ನಾಟಕದಲ್ಲೂ ಅಮೆರಿಕಕ್ಕೆ ಸರಿಸಮನಾಗಿ ಹೆದ್ದಾರಿಗಳನ್ನು ನಿರ್ಮಿಸಿಕೊಡಲಾಗುವುದು’ ಎಂದು ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ₹ 3,972 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ವಿವಿಧ 5 ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಇನ್ನಷ್ಟು ಯೋಜನೆ ಸೇರ್ಪಡೆ

‘ಪ್ರತಿ ಕ್ಷೇತ್ರದ ಅಭಿವೃದ್ಧಿಯೂ ರಸ್ತೆ ಸಂಪರ್ಕವನ್ನು ಅವಲಂಬಿಸಿದೆ. ಆದ್ದರಿಂದ ರಸ್ತೆ ಸಂಪರ್ಕ ಜಾಲ ಸದೃಢಗೊಳಿಸಲು ಸರ್ಕಾರ ಬದ್ಧವಾಗಿದೆ. ಭಾರತಮಾಲಾ-2 ಯೋಜನೆಯಲ್ಲಿ ಈ ಭಾಗದ ಇನ್ನಷ್ಟು ಹೆದ್ದಾರಿ ಯೋಜನೆಗಳನ್ನು ಸೇರಿಸಲಾಗುವುದು’ ಎಂದು ಭರವಸೆ ನೀಡಿದರು.

‘9ಸಾವಿರ ಕಿ.ಮೀ. ಉದ್ದದ ಗ್ರೀನ್‌ಫೀಲ್ಡ್ ಹಾಗೂ ಹೆದ್ದಾರಿ ಕಾರಿಡಾರ್ ಯೋಜನೆಯನ್ನು 3 ಲಕ್ಷ ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ ಬೆಂಗಳೂರು-ಚೆನೈ ಯೋಜನೆ ಕೂಡ ಸೇರಿದೆ. ದೆಹಲಿ-ಮುಂಬೈ ಹೆದ್ದಾರಿಯಲ್ಲಿ 120 ಕಿ.ಮೀ.‌ವೇಗದಲ್ಲಿ ವಾಹನ ಚಲಾಯಿಸಬಹುದು. ಇದರಿಂದ ಎರಡು ನಗರಗಳ ನಡುವಿನ ಪ್ರಯಾಣ ಅವಧಿ 12 ಗಂಟೆಗೆ ಇಳಿಕೆಯಾಗಲಿದೆ’ ಎಂದು ತಿಳಿಸಿದರು.

‘ಬೆಂಗಳೂರಿನ ಸಂಚಾರ ದಟ್ಟಣೆ ಹಾಗೂ ನಗರೀಕರಣದ ಒತ್ತಡ ನಿಯಂತ್ರಿಸುವ ದೃಷ್ಟಿಯಿಂದ ಹೆದ್ದಾರಿಗಳ ಪಕ್ಕದಲ್ಲಿ ಭೂಸ್ವಾಧೀನ‌ ಮಾಡಿಕೊಂಡು ಸ್ಮಾರ್ಟ್ ‌ವಿಲೇಜ್ ಹಾಗೂ ಕೈಗಾರಿಕೆ ಸ್ಥಾಪಿಸುವ ಮೂಲಕ ಪರ್ಯಾಯ ಮಾರ್ಗ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಯೋಜನೆ ರೂಪಿಸಿದರೆ ಕೇಂದ್ರದಿಂದ ಎಲ್ಲ ರೀತಿಯ ನೆರವನ್ನೂ ಕೊಡಲಾಗುವುದು’ ಎಂದು ಹೇಳಿದರು.

ಬೆಳವಡಿ ಮಲ್ಲಮ್ಮ ಸ್ಮರಣೆ

‘ರಾಜ್ಯ ಸರ್ಕಾರವು ರಸ್ತೆ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಟ್ಟರೆ ಪ್ರವಾಸೋದ್ಯಮ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು’ ಎಂದರು.

‘ಭಾರತ‌ ಮಾಲಾ-2 ಯೋಜನೆಯಲ್ಲಿ ಪುಣೆ-ಬೆಂಗಳೂರು ರಸ್ತೆಯ ಈಗಿನ ಅಂತರವನ್ನು 100 ಕಿ.ಮೀ. ಕಡಿಮೆಗೊಳಿಸುವ ಯೋಜನೆ ರೂಪಿಸಲಾಗಿದೆ. ಮುಂದೆ ಇದು ಬೆಂಗಳೂರು-ಚೆನೈ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದೆ’ ಎಂದು ವಿವರಿಸಿದರು.

‘ಈಗ ಶಂಕುಸ್ಥಾಪನೆ ನೆರವೇರಿಸಿರುವ ರಾಷ್ಟ್ರೀಯ ಹೆದ್ದಾರಿಗಳಿಂದ ಈ ಭಾಗದ ರಸ್ತೆ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ. ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ರಸ್ತೆ ಸಂಪರ್ಕವನ್ನು ಉತ್ತಮಪಡಿಸಲಿವೆ. ಇದರಿಂದ ಕಬ್ಬು ಸಾಗಣೆ, ಕೈಗಾರಿಕೆಗಳಿಗೆ ಅನುಕೂಲವಾಗಲಿದೆ’ ಎಂದರು.

‘ರಾಣಿ ಬೆಳವಡಿ ಮಲ್ಲಮ್ಮ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ನಡುವಿನ ಸಂಬಂಧವು ಮರಾಠಾ-ಕನ್ನಡಿಗರ ಸಹೋದರತ್ವಕ್ಕೆ ಸಾಕ್ಷಿಯಾಗಿದೆ’ ಎಂದು ಗಡ್ಕರಿ ಬಣ್ಣಿಸಿದರು.

ಜಲಶಕ್ತಿ ಯೋಜನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಕಿತ್ತೂರಿನಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರ ಗಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ‌ಸಂಪೂರ್ಣವಾಗಿ ಜಲಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಬೆಳಗಾವಿ ಜಿಲ್ಲೆಯಿಂದ ಆರಂಭಿಸಲಾಗುವ ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಅನುಷ್ಢಾನಗೊಳಿಸಲಾಗುವುದು. ಆ ಭಾಗದಲ್ಲಿ ಲಭ್ಯವಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು’ ಎಂದು ಘೋಷಿಸಿದರು.

‘ರಾಜ್ಯದ ಎಲ್ಲ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಅಭಿವೃದ್ಧಿಗೆ ಹೊಸ ಆಯಾಮ ಒದಗಿಸಲಾಗುವುದು’ ಎಂದು ತಿಳಿಸಿದರು.

‘ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ವರ್ತುಲ ರಸ್ತೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು’ ಎಂದು ಕೇಂದ್ರ ಸಚಿವರನ್ನು ಕೋರಿದರು.

ಕೋವಿಡ್ ಭೀತಿಯ ನಡುವೆಯೂ ಸಮಾರಂಭದಲ್ಲಿ ನೂರಾರು ಮಂದಿಯನ್ನು ಸೇರಿಸಲಾಗಿತ್ತು. ಮಾಸ್ಕ್‌ ಧರಿಸುವುದು ಮೊದಲಾದ ಮಾರ್ಗಸೂಚಿ ಪಾಲನೆ ಕಂಡುಬರಲಿಲ್ಲ.

ಯಾವ್ಯಾವ ಕಾಮಗಾರಿ?

* ಬೆಳಗಾವಿ- ಸಂಕೇಶ್ವರ ಆರು ಪಥದ ಬೈಪಾಸ್‌ (40 ಕಿ.ಮೀ.)

* ಸಂಕೇಶ್ವರ ಬೈಪಾಸ್‌–ಮಹಾರಾಷ್ಟ್ರ ಗಡಿಯವರೆಗೆ ಆರು ಪಥ (38 ಕಿ.ಮೀ.)

* ಚೋರ್ಲಾ- ಜಾಂಬೋಟಿ- ಬೆಳಗಾವಿ ದ್ವಿಪಥ (70 ಕಿ.ಮೀ.)

* ವಿಜಯಪುರ- ಅಥಣಿ- ಮುರಗುಂಡಿ ದ್ವಿಪಥ (80 ಕಿ.ಮೀ.)

* ಸಿದ್ದಾಪುರ– ವಿಜಯಪುರ ದ್ವಿಪಥ (12 ಕಿ.ಮೀ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT