ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ವರಪ್ಪ ನಾಳೆ ರಾಜೀನಾಮೆ 

Last Updated 14 ಏಪ್ರಿಲ್ 2022, 13:14 IST
ಅಕ್ಷರ ಗಾತ್ರ

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿರುವ ಆರೋಪಕ್ಕೆ ಗುರಿಯಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ನಾಳೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಗುರುವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಶುಕ್ರವಾರ (ನಾಳೆ) ಸಂಜೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಈಶ್ವರಪ್ಪಹೇಳಿದ್ದಾರೆ.

ಕಾಮಗಾರಿಗಳ ಬಾಕಿ ಬಿಲ್‌ ಮೊತ್ತ ಬಿಡುಗಡೆಗೆ ಶೇಕಡ 40ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಬೆಳಗಾವಿಯ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಸಂತೋಷ್‌ ಪಾಟೀಲ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

‘ಬೆಳಗಾವಿಯ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾನು ಮಾಡಿರುವ ಕಾಮಗಾರಿಗಳ ಬಿಲ್‌ ಮಂಜೂರಾತಿಗೆ ಈಶ್ವರಪ್ಪ ಶೇಕಡ 40ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪ ಮಾಡಿದ್ದ ಸಂತೋಷ್, ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಪತ್ತೆಯಾಗಿತ್ತು. ಈ ಸಂಬಂಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಬುಧವಾರ ಎಫ್‌ಐಆರ್‌ ದಾಖಲಿಸಿದ್ದು, ಈಶ್ವರಪ್ಪ ಅವರನ್ನೇ ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಅವರ ಆಪ್ತರಾದ ಬಸವರಾಜ್‌ ಮತ್ತು ರಮೇಶ್‌ ಇತರ ಆರೋಪಿಗಳು.

ಗುತ್ತಿಗೆದಾರ ಸಂತೋಷ್‌ ಪಾಟೀಲ
ಗುತ್ತಿಗೆದಾರ ಸಂತೋಷ್‌ ಪಾಟೀಲ

ಗುತ್ತಿಗೆದಾರ ಸಂತೋಷ್‌ ಪಾಟೀಲ ಸಾವಿನ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ವರದಿ ಬಂದ ಬಳಿಕವೇ ಮುಂದಿನ ಕ್ರಮ ಜರುಗಿಸಲಾಗುವುದು. ಅಲ್ಲಿಯವರೆಗೂ ಯಾವುದೇ ಕ್ರಮವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜತೆಮಾತನಾಡಿದ ಬೊಮ್ಮಾಯಿಅವರು, ‘ಸಂತೋಷ್‌ ಆತ್ಮಹತ್ಯೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆ ವರದಿ ಬರುವವರೆಗೂ ಯಾವುದೇ ಕ್ರಮವಿಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಆ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದರು.

ಪ್ರತಿಭಟನೆ ನಡುವೆ ಗುತ್ತಿಗೆದಾರ ಸಂತೋಷ್ ಪಾಟೀಲ ಅಂತ್ಯಕ್ರಿಯೆ

ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಸ್ವಗ್ರಾಮ ಬಡಸ ಕೆ.ಎಚ್.ನಲ್ಲಿರುವ ಅವರ ಜಮೀನಿನಲ್ಲಿ, ವೀರಶೈವ ಲಿಂಗಾಯತ ಸಂಪ್ರದಾಯದಂತೆ ಗುರುವಾರ ಬೆಳಿಗ್ಗೆ ನಡೆಯಿತು.

‘ಕುಟುಂಬಕ್ಕೆ ಪರಿಹಾರ ಸಿಗುವವರೆಗೂ ಅಂತ್ಯಕ್ರಿಯೆ ನಡೆಸಬಾರದು’ ಎಂದು ಕೆಲವರು ಮತ್ತು ‘ಅಂತ್ಯಕ್ರಿಯೆ ಜರುಗಲಿ, ನಂತರ ಹೋರಾಡೋಣ’ ಎಂದು ಕೆಲವರು ಹೇಳಿದ್ದರಿಂದ ಗೊಂದಲ ಉಂಟಾಯಿತು. ಬಂಧುಗಳಲ್ಲೇ ಭಿನ್ನ ಅಭಿಪ್ರಾಯಗಳು ವ್ಯಕ್ತವಾದವು. ಕಾಂಗ್ರೆಸ್‌ ಬೆಂಬಲಿತರಲ್ಲಿ ಕೆಲವರು ಪ್ರತಿಭಟನೆಯನ್ನೂ ನಡೆಸಿದರು. ಇದರ ನಡುವೆಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಿಜೆಪಿ ಕಾರ್ಯಕರ್ತರಾಗಲಿ, ಮುಖಂಡರಾಗಲಿ ಪಾಲ್ಗೊಳ್ಳದಿದ್ದಕ್ಕೆ ಕುಟುಂಬದವರಿಂದ ಆಕ್ರೋಶ ವ್ಯಕ್ತವಾಯಿತು. ಮೃತದೇಹಕ್ಕೆ ಕೇಸರಿ ಶಾಲು ಹಾಕಲಾಗಿತ್ತು.

ಕಾಂಗ್ರೆಸ್‌ನವರಿಂದ ಪ್ರತಿಭಟನೆ

ಅಂತ್ಯಕ್ರಿಯೆ ಸ್ಥಳದಲ್ಲೂ ಒಂದು ಗುಂಪು ವಿರೋಧ ವ್ಯಕ್ತಪಡಿಸಿತು. ‘ಊರಿನಲ್ಲಿ ಎರಡು ಮದುವೆಗಳಿವೆ. ಕುಟುಂಬದವರು, ಹೆಣ್ಣು ಮಕ್ಕಳು ಎರಡು ದಿನಗಳಿಂದ ಊಟ ಮಾಡಿಲ್ಲ. ಹೀಗಾಗಿ, ಅಂತ್ಯಕ್ರಿಯೆ ವಿಳಂಬ ಮಾಡುವುದು ಬೇಡ’ ಎಂದು ಕೆಲವರು ಹೇಳಿದರು. ಅದಕ್ಕೆ ಲಕ್ಷ್ಮಿ ಹೆಬ್ಬಾಳಕರ, ಚನ್ನರಾಜ, ಅಡಿವೇಶ ಮೊದಲಾದವರು ಆಕ್ಷೇಪ ವ್ಯಕ್ತಪಡಿಸಿದರು. ಅಡಿವೇಶ ಅವರು ಗುಂಡಿ ತೆಗೆದಿದ್ದ ಮಣ್ಣಿನ ಮೇಲೆ ನಿಂತು, ನನ್ನ ಸಮೇತ ಗುಂಡಿ ಮುಚ್ಚಿಬಿಡಿ ಎಂದು ಬೆದರಿಕೆ ಒಡ್ಡಿದರು. ಬಿಜೆಪಿ ನಾಯಕರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ನಗರದಲ್ಲೇ ಇರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಸ್ಥಳಕ್ಕೆ ಬರಲಿ. ಅವರ ಪಕ್ಷದ ಕಾರ್ಯಕರ್ತನ ಸಾವಿಗೆ ನ್ಯಾಯ ದೊರಕಿಸಿಕೊಡಲಿ’ ಎಂದು ಒತ್ತಾಯಿಸಿದರು.

ಇವನ್ನೂ ಓದಿ
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT