ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಕೋವಿಡ್ ಪರೀಕ್ಷೆಗೆ ನೆಟ್‌ವರ್ಕ್‌ ತೊಡಕು; ಆರೋಗ್ಯ ಸಿಬ್ಬಂದಿ, ಜನರ ಪರದಾಟ

ಗ್ರಾಮಾರೋಗ್ಯ
Last Updated 29 ಮೇ 2021, 20:08 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಈಗ ದೊಡ್ಡ ನಗರಗಳಿಂದ ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಿಗೆ ತನ್ನ ಕಬಂಧಬಾಹುಗಳನ್ನು ಚಾಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ ಇರುವುದರಿಂದ ಕೋವಿಡ್‌ ಪೀಡಿತರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳೇನು, ಚಿಕಿತ್ಸೆಗೆ ಇರುವ ಕೊರತೆಗಳೇನು ಎಂಬ ವಸ್ತುಸ್ಥಿತಿಯ ಚಿತ್ರಣ ನೀಡಲು ಪ್ರಜಾವಾಣಿ ಸ್ಥಳಕ್ಕೆ ಭೇಟಿ ನೀಡಿ ಸರಣಿ ವರದಿಗಳನ್ನು ನೀಡುತ್ತಿದೆ.

***

ಬೀದರ್‌: ತೆಲಂಗಾಣ ಹಾಗೂ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಔರಾದ್, ಕಮಲನಗರ, ಬಸವಕಲ್ಯಾಣ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಕಾರಣ ಜನರಿಗೆ ವೈದ್ಯಕೀಯ ಸೌಲಭ್ಯ ಸಕಾಲದಲ್ಲಿ ದೊರೆಯುತ್ತಿಲ್ಲ.

‘ಪ್ರಜಾವಾಣಿ’ ತಂಡ ಜಿಲ್ಲೆಯ ಮಧ್ಯಭಾಗದ ಹಳ್ಳಿಗಳು, ಗಡಿಗೆ ಹೊಂದಿಕೊಂಡಿರುವ ಗ್ರಾಮಗಳಿಗೆ ಭೇಟಿ ನೀಡಿದಾಗ, ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಜನ ಪರದಾಟುತ್ತಿರುವುದು ಕಂಡುಬಂತು.

‘ಆರ್‌ಟಿಪಿಸಿಆರ್‌ ಪರೀಕ್ಷೆಗೆ ಜನರ ವಿವರವನ್ನು ಆ್ಯಪ್‌ನಲ್ಲಿ ದಾಖಲು ಮಾಡಬೇಕು. ನೆಟ್‌ವರ್ಕ್‌ ಬಂದ ಮೇಲೆಯೇ ನೋಂದಣಿ ಆಗುತ್ತಿರುವ ಕಾರಣ ಪರೀಕ್ಷೆಯೂ ತಡವಾಗುತ್ತಿದೆ. ನಮ್ಮೂರಿನವರು ಕೋವಿಡ್‌ ಪರೀಕ್ಷೆಗೆ 7 ಕಿ.ಮೀ. ದೂರದ ಚಿಂತಾಕಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕು. ಗ್ರಾಮದಲ್ಲಿ ಒಬ್ಬರಿಗೆ ಮಾತ್ರ ಸೋಂಕು ತಗುಲಿತ್ತು. ತಕ್ಷಣ ಅವರಿಗೆ ಚಿಕಿತ್ಸೆ ಕೊಡಲಾಗಿದೆ. ಆದರೆ, ಉಳಿದವರ ಪರೀಕ್ಷೆಯೇ ನಡೆದಿಲ್ಲ’ಎಂದುಔರಾದ್‌ ತಾಲ್ಲೂಕಿನ ಗುಡಪಳ್ಳಿ ನಿವಾಸಿ ಬಂಡೆಪ್ಪ ನಾಗಲಗೆತ್ತೆ ಬೇಸರ ವ್ಯಕ್ತಪಡಿಸಿದರು.

‘ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ದಿನಕ್ಕೆ 20 ಜನರ ಹೆಸರು ನೋಂದಣಿ ಮಾಡಲೂ ಕಷ್ಟವಾಗುತ್ತಿದೆ. ಕೆಲ ಗ್ರಾಮಗಳಲ್ಲಿ ದಿನವಿಡೀ ಕುಳಿತರೂ ನೆಟ್‌ವರ್ಕ್‌ ಬರುವುದಿಲ್ಲ’ ಎಂದು ವೈದ್ಯಕೀಯ ಸಿಬ್ಬಂದಿ ಅಳಲು ತೋಡಿಕೊಂಡರು.

‘ಈ ಸಮಸ್ಯೆ ಮಧ್ಯೆಯೂ ನಮ್ಮ ಸಿಬ್ಬಂದಿ ಪ್ರಯಾಸಪಟ್ಟು ನೋಂದಣಿ ಮಾಡಿಕೊಂಡು ಕೋವಿಡ್‌ ಪರೀಕ್ಷೆ ಮಾಡುತ್ತಿದ್ದಾರೆ. ಶೇ 60ರಷ್ಟು ಜನ ಸ್ವಯಂ ಪ್ರೇರಣೆಯಿಂದ ಕೋವಿಡ್‌ ಪರೀಕ್ಷೆಗೆ ಬರುತ್ತಿದ್ದಾರೆ. ಉಳಿದವರಿಗೆ ತಿಳಿವಳಿಕೆ ನೀಡಲು ಹರಸಾಹಸ ಮಾಡಬೇಕಾಗಿದೆ’ ಎಂದು ಕಮಲನಗರ ಸಮುದಾಯ‌‌‌‌ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗಾಯತ್ರಿ ವಿವರಿಸಿದರು.

ಬೀದರ್ ಜಿಲ್ಲೆ ಕಮಲನಗರ ತಾಲ್ಲೂಕಿನ ಠಾಣಾಕುಶನೂರಿನಲ್ಲಿ ಅಂತರ ಕಾಯ್ದುಕೊಳ್ಳದೆ ಸಂಚರಿಸುತ್ತಿದ್ದ ಜನ
ಬೀದರ್ ಜಿಲ್ಲೆ ಕಮಲನಗರ ತಾಲ್ಲೂಕಿನ ಠಾಣಾಕುಶನೂರಿನಲ್ಲಿ ಅಂತರ ಕಾಯ್ದುಕೊಳ್ಳದೆ ಸಂಚರಿಸುತ್ತಿದ್ದ ಜನ

‘ಆಯಾ ಪ್ರದೇಶದಲ್ಲಿ ಯಾವ ನೆಟ್‌ವರ್ಕ್‌ ಸರಿ ಇರುತ್ತದೆಯೋ ಆ ಕಂಪನಿಗಳ ಸಿಮ್‌ ಕಾರ್ಡ್‌ ಬಳಸಲು ಅವಕಾಶ ನೀಡಿದ್ದೇವೆ. ತುರ್ತು ವೇಳೆ 'ರ‍್ಯಾಟ್' (ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್) ಮೂಲಕ ಸ್ಥಳದಲ್ಲಿಯೇ ಕೋವಿಡ್ ಪರೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ವಿ.ಜಿ.ರೆಡ್ಡಿ ಹೇಳುತ್ತಾರೆ.

‘ಲಾಕ್‌ಡೌನ್‌ ಇರುವ ಕಾರಣ ಜನ ಪಿಎಚ್‌ಸಿಗೆ ಬಂದು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿಯ ಆರ್‌ಎಂಪಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ವೈದ್ಯರ ಸಲಹೆ ಇಲ್ಲದೇ ಔಷಧಿ ಅಂಗಡಿಗಳಲ್ಲಿಮಾತ್ರೆ ಖರೀದಿಸುತ್ತಿದ್ದಾರೆ. ಈ ಕಾರಣಕ್ಕೆ ಸೋಂಕು ತೀವ್ರಗೊಳ್ಳುತ್ತಿದೆ. ನಾಲ್ವರಲ್ಲಿ ಒಬ್ಬರಿಗೆ ಲಕ್ಷಣ ರಹಿತ ಕೋವಿಡ್ ಬಂದು ಹೋಗಿದೆ’ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು.

ಬೀದರ್‌ ಸಮೀಪದ ಜನವಾಡ, ಕೊಳಾರ (ಕೆ), ಆಣದೂರ, ಬುಧೇರಾ ಗ್ರಾಮದಲ್ಲಿ ಏಪ್ರಿಲ್‌ನಲ್ಲಿ ಸೋಂಕಿತರ ಪ್ರಮಾಣ ಅಧಿಕ ಇತ್ತು. ಈಗ ಕಡಿಮೆಯಾಗಿದೆ. ‘ಜನವಾಡ ‍ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 15 ಜನರಿಗೆ ಕೋವಿಡ್‌ ತಗುಲಿತ್ತು. ಈಗ ಎಲ್ಲರೂ ಗುಣಮುಖರಾಗಿದ್ದಾರೆ’ ಎಂದು ಜನವಾಡ ಪಿಎಚ್‌ಸಿ ನರ್ಸ್‌ ಸುಲ್ತಾನಾ ಬೇಗಂ ಹೇಳಿದರು.

ಎಚ್ಚರ ವಹಿಸದ ಗ್ರಾಮಸ್ಥರು: ಭಾಲ್ಕಿ ತಾಲ್ಲೂಕಿನ ನಾವದಗಿ, ಬೀದರ್‌ ತಾಲ್ಲೂಕಿನ ಅಮಲಾಪುರ, ಔರಾದ್‌ ತಾಲ್ಲೂಕಿನ ಸಂತಪುರ, ಕಮಲನಗರ ತಾಲ್ಲೂಕಿನ ಬಳತ (ಕೆ), ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ, ಹುಮನಾಬಾದ್‌ ತಾಲ್ಲೂಕಿನ ಕುಮಾರಚಿಂಚೋಳಿ, ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಜನ ಅಲ್ಲಲ್ಲಿ ಗುಂಪು ಗುಂಪಾಗಿ ಸೇರಿರುವುದು ಕಂಡು ಬಂತು.

ಸಿಬ್ಬಂದಿ ಕೊರತೆ
ಔರಾದ್, ಕಮಲನಗರ ಗಡಿಯಲ್ಲೇ ಎಂಟು ಚೆಕ್‌ಪೋಸ್ಟ್‌ ಸ್ಥಾಪಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ತಪಾಸಣೆಗೆ ನಿಯೋಜಿಸಲಾಗಿದೆ. ಈ ಸಿಬ್ಬಂದಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಹಾಗೂ ಆರ್‌ಟಿ–ಪಿಸಿಆರ್‌ಗೆ ಮಾದರಿ ಸಂಗ್ರಹಿಸಬೇಕಿರುವ ಕಾರಣ ಪಿಎಚ್‌ಸಿಗಳಲ್ಲಿ ಗ್ರಾಮೀಣ ಜನತೆಗೆ ಸಕಾಲದಲ್ಲಿ ವೈದ್ಯಕೀಯ ಸೇವೆ ದೊರಕುತ್ತಿಲ್ಲ ಎಂದು ವನಮಾರಪಳ್ಳಿ ಗ್ರಾಮಸ್ಥರು ಹೇಳುತ್ತಾರೆ. ಇದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳೂ ಒಪ್ಪಿಕೊಳ್ಳುತ್ತಾರೆ.

ಜಿಲ್ಲೆಯಲ್ಲಿ ಐದೇ ಸಿಟಿಸ್ಕ್ಯಾನ್‌ ಯಂತ್ರ
ಬ್ರಿಮ್ಸ್‌ ಹಾಗೂ ನಗರದ ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿರುವ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಮಾತ್ರ ಎಚ್‌ಆರ್‌ಸಿಟಿ (ಹೈ-ರೆಸಲ್ಯೂಷನ್ ಕಂಪ್ಯೂಟೆಡ್ ಟೊಮೊಗ್ರಫಿ) ಮಾಡುವ ಸಾಮರ್ಥ್ಯ ಇದೆ. ಬ್ರಿಮ್ಸ್‌ನಲ್ಲಿ ನಿತ್ಯ ಸರಾಸರಿ 60 ರೋಗಿಗಳ ಸ್ಕ್ಯಾನಿಂಗ್‌ ಮಾಡಲಾಗುತ್ತಿದೆ.

‘ಜಿಲ್ಲೆಯ ನಾಲ್ಕು ತಾಲ್ಲೂಕು ಆಸ್ಪತ್ರೆ, ಎಂಟು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಆರಂಭಿಸಲಾಗಿದೆ.ಆಮ್ಲಜನಕ ಹಾಗೂ ಮಾತ್ರೆಗಳ ಕೊರತೆ ಇಲ್ಲ. ಗುಣಮುಖ ಪ್ರಮಾಣ ಶೇ 95ರಷ್ಟಿದೆ’ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣಾರೆಡ್ಡಿ.

***

ಕೋವಿಡ್‌ ಪೀಡಿತ ನನ್ನ ತಾಯಿಯನ್ನು ಹುಮನಾಬಾದ್‌ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದೆ.25 ದಿನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ವೈದ್ಯರು ಉತ್ತಮ ಸೇವೆ ನೀಡಿದ್ದಾರೆ.
-ನಾಗಾರೆಡ್ಡಿ, ಬೇನ್‌ಚಿಂಚೋಳಿ ಗ್ರಾಮಸ್ಥ

***

ಭಾಲ್ಕಿ ತಾಲ್ಲೂಕಿನ ನಾವದಗಿಯಲ್ಲಿ ಏಪ್ರಿಲ್‌ನಲ್ಲಿ 20 ಮಂದಿ ಸಾವಿಗೀಡಾಗಿದ್ದಾರೆ. ಇಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಒಂದು ಸಮುದಾಯವರು ಕೋವಿಡ್ ಲಸಿಕೆ ಪಡೆದಿದ್ದಾರೆ. ಇನ್ನೊಂದು ಸಮುದಾಯದವರು ಲಸಿಕೆ ಪಡೆದಿಲ್ಲ.
-ರೇವಣಯ್ಯ ಸ್ವಾಮಿ, ಗ್ರಾಮದ ಹಿರಿಯ

***

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಪ್ರತಿ ಮಾರ್ಗದಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಿ ಸೋಂಕಿತರು ಜಿಲ್ಲೆಯೊಳಗೆ ಪ್ರವೇಶಿಸದಂತೆ ನಿಗಾ ವಹಿಸಲಾಗಿದೆ.
-ರಮೇಶ ಪೆದ್ದೆ, ಕಮಲನಗರ ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT