ಗುರುವಾರ , ಆಗಸ್ಟ್ 11, 2022
27 °C

ಕೋವಿಡ್: ಸಂಪರ್ಕಕ್ಕೆ ಒಳಗಾದವರ ಪರೀಕ್ಷಾ ಪ್ರಮಾಣ ಅಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರ ಸಂಪರ್ಕಕ್ಕೆ ಒಳಗಾದವರು ಶೇ 17ರಷ್ಟು ಮಂದಿಗೆ ಹಾಗೂ ಗುರುತಿಸಲಾದ ಸೋಂಕು ಶಂಕಿತರಲ್ಲಿ ಶೇ 23ರಷ್ಟು ಮಂದಿಗೆ ಮಾತ್ರ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಕೋವಿಡ್ ಕಾರ್ಯಪಡೆಯು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಪರೀಕ್ಷೆಗಳ ಬಗ್ಗೆ ಚರ್ಚಿಸಿತ್ತು. ತಜ್ಞರು ಸೋಂಕಿತರ ಸಂಪರ್ಕಕ್ಕೆ ಒಳಗಾದವರು ಹಾಗೂ ಸಾರಿ (ತೀವ್ರ ಉಸಿರಾಟದ ಸಮಸ್ಯೆ), ಐಎಲ್‌ಐ ಸಮಸ್ಯೆ (ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ) ಇರುವವರನ್ನು ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು ಸೂಚಿಸಿದ್ದರು. ಆದರೆ, ನಿಗದಿತ ಪ್ರಮಾಣದಲ್ಲಿ ಸಂಪರ್ಕಕ್ಕೆ ಒಳಗಾದವರ ಪತ್ತೆ ಹಾಗೂ ಪರೀಕ್ಷೆಗಳು ನಡೆಯುತ್ತಿಲ್ಲ ಎನ್ನುವುದು ಕೋವಿಡ್ ವಾರ್‌ ರೂಮ್ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಬೆಂಗಳೂರು, ಬೀದರ್, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಳಗಾವಿ, ವಿಜಯಪುರ, ಉಡುಪಿ, ಹಾವೇರಿ, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನ.30 ರಿಂದ ಡಿ.9ರ ಅವಧಿಯಲ್ಲಿ 2.9 ಲಕ್ಷ ಮಂದಿ ಸಂಪರ್ಕಕ್ಕೆ ಒಳಗಾದವರ ಪರೀಕ್ಷೆ ನಡೆಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಕೇವಲ 50 ಸಾವಿರ (ಶೇ 17ರಷ್ಟು) ಮಂದಿಯನ್ನು ಪರೀಕ್ಷಿಸಲಾಗಿದೆ. ಈ ಜಿಲ್ಲೆಗಳಲ್ಲಿ 49,688 ಮಂದಿ ಸಾರಿ ಮತ್ತು ಐಎಲ್‌ಐ ಸಮಸ್ಯೆ ಎದುರಿಸುತ್ತಿರುವವರನ್ನು ಗುರುತಿಸಲಾಗಿತ್ತು. ಆದರೆ, ಅವರಲ್ಲಿ ಕೇವಲ 11,232 (ಶೇ 23ರಷ್ಟು) ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

‘ಕೋವಿಡ್‌ ಸಂಪರ್ಕಕ್ಕೆ ಒಳಗಾದವರನ್ನು ಈ ಅವಧಿಯಲ್ಲಿ ಪತ್ತೆ ಮಾಡುವುದು ಆರೋಗ್ಯ ಸಿಬ್ಬಂದಿಗೆ ಸವಾಲಾಗಿದೆ. ಆದರೆ, ಗುರುತಿಸಿದವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಲ್ಲಿ ಅವರಿಂದ ಸೋಂಕು ಹರಡುವಿಕೆ ತಪ್ಪಲಿದೆ. ಇದರಿಂದ ಕೋವಿಡ್ ಎರಡನೇ ಅಲೆಯನ್ನು ತಡೆಯಲು ಕೂಡ ಸಾಧ್ಯ. ರೋಗ ಲಕ್ಷಣ ಹೊಂದಿರುವವರು ತಮಗೆ ತಿಳಿದಿರುವ ವೈದ್ಯರಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಪರೀಕ್ಷೆಗಳಿಂದ ದೂರ ಉಳಿಯುತ್ತಿದ್ದಾರೆ. ಇದು ಕೂಡ ಸಂಪರ್ಕಕ್ಕೆ ಒಳಗಾದವರ ಪ‍ತ್ತೆಗೆ ಸಮಸ್ಯೆಯಾಗಿದೆ. ಈ ಸಂದರ್ಭದಲ್ಲಿ ಜನರು ಅಗತ್ಯ ಸಹಕಾರ ನೀಡಬೇಕು’ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು