ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ | ಒಂದು ಗಂಟೆಯೊಳಗೆ ಪರೀಕ್ಷೆಗೆ ಸೂಚನೆ

Last Updated 14 ಆಗಸ್ಟ್ 2020, 21:18 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಆ್ಯಂಟಿಜೆನ್ ಪರೀಕ್ಷೆ ಸಂಬಂಧ ಸಂಗ್ರಹಿಸಿದ ಗಂಟಲ ದ್ರವದ ಮಾದರಿಗಳನ್ನು ಒಂದು ಗಂಟೆಯೊಳಗೆ ಪರೀಕ್ಷೆ ನಡೆಸಬೇಕು ಎಂದು ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್‌ ಕುಮಾರ್ ಪಾಂಡೆ ಸೂಚಿಸಿದ್ದಾರೆ.

ಸೋಂಕಿತರನ್ನು ಬೇಗ ಪತ್ತೆ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಆ್ಯಂಟಿಜೆನ್ ಪರೀಕ್ಷೆ ನಡೆಸಲಾಗುತ್ತಿದೆ. ಪ್ರತಿನಿತ್ಯ 25 ಸಾವಿರಕ್ಕೂ ಅಧಿಕ ಮಂದಿಗೆ ಈ ಪರೀಕ್ಷೆ ನಡೆಯುತ್ತಿದ್ದು, ಲಕ್ಷಣ ರಹಿತ ವ್ಯಕ್ತಿಗಳಿಗೆ ಋಣಾತ್ಮಕ ಫಲಿತಾಂಶ ಬಂದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದಾಗಿ ಪ್ರಯೋಗಾಲಯಗಳ ಮೇಲಿನಹೊರೆ ಕಡಿಮೆಯಾಗಿದೆ.ರೋಗನಿರ್ಣಯದ ಫಲಿತಾಂಶವನ್ನು ತ್ವರಿತವಾಗಿ ಪಡೆಯಲು ಇದು ಅನುಕೂಲಕಾರಿಯಾಗಿದೆ. ಪರೀಕ್ಷೆ ನಡೆಸಿದ ಸುಮಾರು ಅರ್ಧಗಂಟೆಯಲ್ಲಿ ಇದರ ಫಲಿತಾಂಶ ಒದಗಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೋವಿಡ್‌ ಪೀಡಿತರೊಂದಿಗೆ ಸಂಪರ್ಕ ಹೊಂದಿರುವವರು, ಹಿರಿಯ ನಾಗರಿಕರು, ಅಸ್ವಸ್ಥಗೊಂಡವರಿಗೆ ಆ್ಯಂಟಿಜೆನ್ ಪರೀಕ್ಷೆ ನಡೆಸಲಾಗುವುದು. ಈ ಮೂಲಕ ಸೋಂಕು ಹರಡುವಿಕೆಯನ್ನು ತಡೆಗಟ್ಟಲಾಗುತ್ತದೆ. ಪ್ರಯೋಗಾಲಯಗಳು, ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳು ಪರೀಕ್ಷೆಯ ಧನಾತ್ಮಕ ಹಾಗೂ ಋಣಾತ್ಮಕ ಫಲಿತಾಂಶವನ್ನು ಕಡ್ಡಾಯವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್‌) ಪೋರ್ಟಲ್‌ನಲ್ಲಿ ದಾಖಲಿಸಬೇಕು. ಖಾಸಗಿ ಪ್ರಯೋಗಾಲಯಗಳು ವೈಯಕ್ತಿಕ ಸುರಕ್ಷತಾ ಸಾಧನದ ವೆಚ್ಚವನ್ನು (ಪಿಪಿಇ ಕಿಟ್) ಒಳಗೊಂಡು ಪ್ರತಿ ಪರೀಕ್ಷೆಗೆ ₹ 700 ಶುಲ್ಕವನ್ನು ಮಾತ್ರ ಪಡೆಯಬೇಕು.

ಹೆಚ್ಚಿನ ಹಣ ವಸೂಲಿ ಮಾಡಿದಲ್ಲಿ ಕಾನೂನುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.ಸೋಂಕು ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಿಂದ ಎರಡು ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ವ್ಯಕ್ತಿ ಸೋಂಕಿತರಾಗಿಲ್ಲ ಎಂದು ವರದಿ ಬಂದಲ್ಲಿ ಇನ್ನೊಂದು ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು.

ಗಂಟಲು ದ್ರವ ಸಂಗ್ರಹ ಮಾಡುವ ಕೇಂದ್ರಗಳು ಲಕ್ಷಣ ಸಹಿತ ಹಾಗೂ ಲಕ್ಷಣ ರಹಿತ ವ್ಯಕ್ತಿಗಳ ಮಾದರಿಗಳನ್ನು ಮಿಶ್ರಣ ಮಾಡಬಾರದು. ಲಕ್ಷಣ ಇರುವವರು ಫಲಿತಾಂಶ ಬರುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT