ಶುಕ್ರವಾರ, ಮಾರ್ಚ್ 31, 2023
24 °C
ಮೂರನೇ ಅಲೆ: ಸಲಹಾ ಸಮಿತಿ ಎಚ್ಚರಿಕೆ ಕಡೆಗಣನೆ

ರಾಜ್ಯದ 19 ಜಿಲ್ಲೆಗಳಲ್ಲಿ ಸರಾಸರಿಗಿಂತ ಕಡಿಮೆ ಕೋವಿಡ್ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿ ಹತ್ತು ಲಕ್ಷ ಜನರಿಗೆ ನಡೆಸಲಾಗುತ್ತಿರುವ ಕೋವಿಡ್ ಪರೀಕ್ಷೆಗಳ ಸಂಖ್ಯೆಯು 19 ಜಿಲ್ಲೆಗಳಲ್ಲಿ ರಾಜ್ಯದ ಸರಾಸರಿ 21,151ಕ್ಕಿಂತ ಕಡಿಮೆಯಿದೆ.

ರಾಯಚೂರಿನಲ್ಲಿ ಕನಿಷ್ಠ (6,496) ಹಾಗೂ ದಕ್ಷಿಣ ಕನ್ನಡದಲ್ಲಿ ಗರಿಷ್ಠ ಪರೀಕ್ಷೆ (39,578) ನಡೆಸಲಾಗುತ್ತಿದೆ. ರಾಜ್ಯ ಕೋವಿಡ್ ವಾರ್‌ ರೂಮ್ ಬೆಂಗಳೂರನ್ನು ಹೊರತುಪಡಿಸಿ, ಉಳಿದ 29 ಜಿಲ್ಲೆಗಳಲ್ಲಿ ಕಳೆದ 10 ದಿನಗಳಲ್ಲಿ ನಡೆಸಲಾದ ಪರೀಕ್ಷೆಗಳ ಆಧಾರದಲ್ಲಿ ವಿಶ್ಲೇಷಣೆ ಮಾಡಿದೆ. ಕೋವಿಡ್ ಮೂರನೇ ಅಲೆಯು ಅಕ್ಟೋಬರ್ ಅಥವಾ ನವೆಂಬರ್ ಬಳಿಕ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಲೆಕ್ಕಾಚಾರ ಹಾಕಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ಹಾಗೂ ಸಂಪರ್ಕ ಪತ್ತೆ ಕಾರ್ಯ ನಡೆಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 

ಕಳೆದ ವರ್ಷಾಂತ್ಯಕ್ಕೆ ಎರಡನೇ ಅಲೆಯ ಎಚ್ಚರಿಕೆ ನೀಡಿದ್ದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರು, ಪ್ರತಿನಿತ್ಯ ಸರಾಸರಿ 1.50 ಲಕ್ಷ ಪರೀಕ್ಷೆಗಳನ್ನು ನಡೆಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಮಾರ್ಚ್‌ ತಿಂಗಳಲ್ಲಿ ಹೊಸ ಪ್ರಕರಣಗಳು ಏರಿಕೆ ಕಂಡ ಕಾರಣ ಕೆಲ ದಿನಗಳು ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿತ್ತು.  ಏಪ್ರಿಲ್ ಕಡೆಯ ವಾರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿಯ ಆಸುಪಾಸಿಗೆ ತಲುಪಿತ್ತು. ಆ ವೇಳೆ ಪರೀಕ್ಷೆಗಳ ಸಂಖ್ಯೆಯ ಸಂಖ್ಯೆಯನ್ನು 1.90 ಲಕ್ಷಕ್ಕೆ ಏರಿಕೆ ಮಾಡಲಾಗಿತ್ತು.

10 ಜಿಲ್ಲೆಗಳಲ್ಲಿ ಅಧಿಕ: ಮೇ ತಿಂಗಳಲ್ಲಿ ಸೋಂಕು ದೃಢ ಪ್ರಮಾಣವು ಶೇ 40ರ ಗಡಿಗೆ ಏರಿಕೆಯಾದಾಗ ಪರೀಕ್ಷೆಗಳ ಸಂಖ್ಯೆಯನ್ನು 93 ಸಾವಿರಕ್ಕೆ ಇಳಿಕೆ ಮಾಡಲಾಗಿತ್ತು. ಈಗ ಶೇ 5 ರೊಳಗಡೆ ದೃಢ ಪ್ರಮಾಣವಿದ್ದು, ಪ್ರತಿನಿತ್ಯ ಸರಾಸರಿ 1.50 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಆದರೆ, 10 ಜಿಲ್ಲೆಗಳಲ್ಲಿ ಮಾ‌ತ್ರ ಅಧಿಕ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಹಾಗೂ ಜನರ ಹಿಂಜರಿಕೆಯೇ ಕೆಲ ಜಿಲ್ಲೆಗಳಲ್ಲಿ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನಲಾಗುತ್ತಿದೆ.

ಪ್ರತಿ 10 ಲಕ್ಷ ಮಂದಿಗೆ ಬಳ್ಳಾರಿ (7,236), ಬೆಳಗಾವಿ (8,063), ವಿಜಯಪುರ (8,135), ಕಲಬುರ್ಗಿ (8,313 ) ಹಾಗೂ ಕೊಪ್ಪಳ (8,323) ಜಿಲ್ಲೆಯಲ್ಲಿ 10 ಸಾವಿರಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಕೊಡಗು (37,288), ಮೈಸೂರು (31,091), ಮಂಡ್ಯ (27,000), ಚಿಕ್ಕಮಗಳೂರು (25,853), ಬೆಂಗಳೂರು ಗ್ರಾಮಾಂತರ (25,794) ಹಾಗೂ ಹಾಸನದಲ್ಲಿ (25,699) 25 ಸಾವಿರಕ್ಕೂ ಅಧಿಕ ಪರೀಕ್ಷೆಗಳು ನಡೆಯುತ್ತಿವೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು