ಶನಿವಾರ, ಜುಲೈ 2, 2022
25 °C

ವಾಹನಗಳ ಮೇಲಿನ ಸರ್ಕಾರಿ ಲಾಂಛನ ತೆರವುಗೊಳಿಸದಿದ್ದರೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಗಮ, ಮಂಡಳಿ ಮತ್ತು ಸರ್ಕಾರದ ಅಧೀನದ ಸಂಸ್ಥೆಗಳ ವಾಹನಗಳ ಮೇಲೆ ಸರ್ಕಾರಿ ಲಾಂಛನ ಬಳಕೆ ಮುಂದುವರಿಸಿದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.

‘ಸರ್ಕಾರದ ಲಾಂಛನ ಇರುವ ನೋಂದಣಿ ಸಂಖ್ಯೆಯ ಫಲಕಗಳನ್ನು ಅಳವಡಿಕೆ ಮಾಡಿದ್ದರೆ ಕೂಡಲೇ ತೆರವುಗೊಳಿಸಿ ಮೇ 24 ರೊಳಗೆ ಮಾಹಿತಿ ಒದಗಿಸಬೇಕು. ವಿಫಲವಾದಲ್ಲಿ ಆಯಾ ನಿಗಮ ಅಥವಾ ಸಂಸ್ಥೆಗಳ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಿ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ನಿಂದನಾ ಕ್ರಮ ಜರುಗಿಸಲಾಗುವುದು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ತಿಳಿಸಿದ್ದಾರೆ.

ಖಾಸಗಿ ಸಂಸ್ಥೆಗಳು ತಮ್ಮ ವಾಹನಗಳ ಮೇಲೆ ಸರ್ಕಾರದ ಲಾಂಛನ ಅಥವಾ ಚಿಹ್ನೆಗಳನ್ನು ಅಳವಡಿಸಿಕೊಂಡಿದ್ದರೆ ತೆರವುಗೊಳಿಸಲು ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು. ಪೊಲೀಸ್ ಇಲಾಖೆಯಲ್ಲಿರುವ ಪೊಲೀಸ್–ಇ–ಆ್ಯಪ್ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಅನಧಿಕೃತ ಫಲಕಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಒದಗಿಸಲು ಸಾರಿಗೆ ಇಲಾಖೆ ವಾಟ್ಸ್‌ ಆ್ಯಪ್ ಸಂಖ್ಯೆ ಒದಗಿಸಬೇಕು. ಸಾರ್ವಜನಿಕರು ಚಿತ್ರ ಸಹಿತ ಮಾಹಿತಿ ಒದಗಿಸಿದರೆ ಕೂಡಲೇ ನೋಟಿಸ್ ಜಾರಿ ಮಾಡಿ ಲಾಂಛನ ತೆರವುಗೊಳಿಸಬೇಕು. ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಿಆರ್‌ಪಿಸಿ ಕಾಯ್ದೆಯಡಿ ಆದೇಶ ಹೊರಡಿಸಿ ವಾಹನಗಳಿಗೆ ಫ್ಯಾನ್ಸಿ ನಂಬರ್‌ ಫಲಕ ತಯಾರಿಕೆ ಮತ್ತು ಅಳವಡಿಕೆ ನಿಷೇಧಿಸಿದೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.