ಬುಧವಾರ, ಮಾರ್ಚ್ 3, 2021
30 °C

ಬ್ರಿಟನ್ ವಲಸಿಗರು: ಸೋಂಕಿತರ ಸಂಖ್ಯೆ 48ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯಕ್ಕೆ ಬ್ರಿಟನ್‌ನಿಂದ ಬಂದವರಲ್ಲಿ ಮತ್ತೊಬ್ಬರು ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಅಲ್ಲಿಂದ ಮರಳಿದವರಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.

ಕಳೆದ ಡಿ.9 ರ ಬಳಿಕ 5,647 ಮಂದಿ ಬ್ರಿಟನ್‌ನಿಂದ ಇಲ್ಲಿಗೆ ಬಂದಿದ್ದಾರೆ. ಅಲ್ಲಿಂದ ಬಂದವರಲ್ಲಿ ಈವರೆಗೆ 14 ಮಂದಿಯಲ್ಲಿ ರೂಪಾಂತರ ವೈರಾಣು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಭಾನುವಾರ 745 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.31 ಲಕ್ಷ ದಾಟಿದೆ. ಸೋಂಕಿತರಲ್ಲಿ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,166ಕ್ಕೆ ತಲುಪಿದೆ.

ಕೋವಿಡ್ ಪೀಡಿತರಲ್ಲಿ ಮತ್ತೆ 855 ಮಂದಿ ಗುಣಮುಖರಾಗಿದ್ದು, ಇದರಿಂದಾಗಿ ಚೇತರಿಸಿಕೊಂಡವರ ಸಂಖ್ಯೆ 9.11 ಲಕ್ಷಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು ಮತ್ತಷ್ಟು ಇಳಿಕೆ ಕಂಡಿದ್ದು, ಸದ್ಯ 8,580 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 178 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಒಂದೇ ದಿನ 98 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ತಿಂಗಳು 17 ದಿನಗಳಲ್ಲಿ 17.87 ಲಕ್ಷ ಮಂದಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈವರೆಗೆ 1.59 ಕೋಟಿ ಮಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ಕಳೆದ 14 ದಿನಗಳ ಅವಧಿಯಲ್ಲಿ 55 ಸಾವಿರ ನೇರ ಹಾಗೂ 62 ಸಾವಿರ ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ಬೆಂಗಳೂರಿನಲ್ಲಿ 464 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.94 ಲಕ್ಷಕ್ಕೆ ತಲುಪಿದೆ. ಮೈಸೂರಿನಲ್ಲಿ ಮತ್ತೆ 14 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ 53 ಸಾವಿರ ದಾಟಿದೆ. ದಕ್ಷಿಣ ಕನ್ನಡದಲ್ಲಿ 31, ತುಮಕೂರಿನಲ್ಲಿ 26, ಬೆಳಗಾವಿಯಲ್ಲಿ 24, ಕಲಬುರ್ಗಿಯಲ್ಲಿ 21 ಪ್ರಕರಣಗಳು ವರದಿಯಾಗಿವೆ. ಮೈಸೂರಿನಲ್ಲಿ 2, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಂದು ಮರಣ ಪ್ರಕರಣ ಹೊಸದಾಗಿ ವರದಿಯಾಗಿದೆ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.