ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಇಲಾಖೆಗೆ ಅನಾರೋಗ್ಯ: ವೈದ್ಯರು, ಶುಶ್ರೂಷಕರ ಕೊರತೆಯಿಂದ ಬಳಲಿದ ಇಲಾಖೆ

ಕಿರಿಯ ಸಿಬ್ಬಂದಿ ಮೇಲೆ ಒತ್ತಡ
Last Updated 20 ಆಗಸ್ಟ್ 2020, 21:50 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳು ವೈದ್ಯರು ಮತ್ತು ಇತರ ಸಿಬ್ಬಂದಿ ಕೊರತೆಯಿಂದ ‘ಅನಾರೋಗ್ಯ’ಕ್ಕೆ ತುತ್ತಾಗಿದ್ದು, ಮಂಜೂರಾದ ಹುದ್ದೆಗಳ ಪೈಕಿ 10,549 ಹುದ್ದೆಗಳು ಖಾಲಿ ಇವೆ.

ಗ್ರಾಮೀಣ ಪ್ರದೇಶ; ಅದರಲ್ಲೂ ಕಲ್ಯಾಣ ಕರ್ನಾಟಕ, ಮಲೆನಾಡು ಪ್ರದೇಶಗಳ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಾಡುತ್ತಿದೆ; ತಜ್ಞ ವೈದ್ಯರು ಇಲ್ಲ ಎಂದು ಪ್ರತಿ ವಿಧಾನಮಂಡಲ ಅಧಿವೇಶನದಲ್ಲೂ ಪಕ್ಷಭೇದ ಮರೆತು ಶಾಸಕರು ಕೂಗೆಬ್ಬಿಸುತ್ತಲೇ ಇದ್ದರು. ಕೋವಿಡ್‌ ಕಾಲದಲ್ಲಿ ಈ ಕೊರತೆ ಆಸ್ಪತ್ರೆಗಳನ್ನು ಬಾಧಿಸುತ್ತಿರುವುದು ಹೆಚ್ಚಿದೆ ಎಂಬ ಅಭಿಪ್ರಾಯ ಇಲಾಖೆ ವಲಯದಲ್ಲೇ ವ್ಯಕ್ತವಾಗಿದೆ.

ಸೋಂಕು ಹರಡುವುದನ್ನು ತಪ್ಪಿಸುವ ಕಾರಣಕ್ಕೆ 50 ವರ್ಷ ಮೇಲ್ಪಟ್ಟ ವೈದ್ಯರು, ಸಿಬ್ಬಂದಿಗೆ ಕೋವಿಡ್‌ ಕೆಲಸದಿಂದ ವಿನಾಯಿತಿ ನೀಡಲಾಗಿದೆ. ಅದೇ ಹೊತ್ತಿಗೆ ಕರ್ತವ್ಯನಿರತ ಕಿರಿಯ ವೈದ್ಯರು ಕೋವಿಡ್‌ ಪೀಡಿತರಾಗುತ್ತಿರುವುದು ವೈದ್ಯಕೀಯ ಸೇವೆಯಲ್ಲಿನ ವ್ಯತ್ಯಯಕ್ಕೆ ಕಾರಣವಾಗಿದೆ.

ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಮಾತ್ರ ನಿರಂತರ ಕೆಲಸದ ಒತ್ತಡದಿಂದ ಕಂಗಾಲಾಗಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಕೆಲವು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಅವಧಿಯನ್ನು ಕೂಡ ಕಡಿತ ಮಾಡಲಾಗಿದೆ. ಕೆಲವು ವೈದ್ಯರು ಒತ್ತಡ, ಖಿನ್ನತೆಗೆ ಒಳಗಾಗಿ ಸೈಕೊ ಥೆರಪಿ ಪಡೆದುಕೊಳ್ಳಲಾರಂಭಿಸಿದ್ದಾರೆ. ನಿರಂತರ ಆರು ಗಂಟೆಗಳ ಕಾಲ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು (ಪಿಪಿಇ ಕಿಟ್) ಹಾಕಿಕೊಂಡಿದ್ದರೂ ಕೆಲವರು ಸೋಂಕಿತರಾಗುತ್ತಿರುವುದರಿಂದ ದಿಕ್ಕುತೋಚದ ಸ್ಥಿತಿ ಎದುರಾಗಿದೆ ಎಂದು ಹೆಸರು ಹೇಳಲಿಚ್ಛಿಸದ ವೈದ್ಯರೊಬ್ಬರು ಹೇಳಿದರು.

‘ಪ್ರಮುಖ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆಗಳು, ಐಸಿಯು, ವೆಂಟಿಲೇಟರ್, ಪರೀಕ್ಷಾ ಪ್ರಯೋಗಾಲಯ ಸೌಲಭ್ಯಗಳನ್ನು ಒದಗಿಸಿದ್ದರೂ, ಅವುಗಳನ್ನು ಬಳಸಲು ತಜ್ಞರಿಲ್ಲ. ಐಸಿಯು, ವೆಂಟಿಲೇಟರ್‌ ಮುಂತಾದ ಉಪಕರಣಗಳು ಅತ್ಯಾಧುನಿಕವಾಗಿದ್ದು, ಅವುಗಳನ್ನು ಹೇಗೆ ಬಳಸಬೇಕು ಎಂಬ ತರಬೇತಿಯನ್ನೂ ನೀಡಿಲ್ಲ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಉಳಿಸಿಕೊಳ್ಳುವ ಸವಾಲು:ಕೊರೊನಾ ಸೋಂಕಿತರಿಗೆ ಐದು ತಿಂಗಳಿನಿಂದ ಎಡಬಿಡದೇ ಸೇವೆ ನೀಡುತ್ತಿರುವುದರಿಂದ ವಿಪರೀತ ದಣಿದಿರುವ ಶುಶ್ರೂಷಕರಲ್ಲಿ ಬಹಳಷ್ಟು ಮಂದಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ‘ಗುಡ್‌ ಬೈ’ ಹೇಳುವ ಸ್ಥಿತಿಗೆ ಬಂದಿದ್ದಾರೆ.

ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 8,471 ಶುಶ್ರೂಷಕರ ಮಂಜೂರಾದ ಹುದ್ದೆಗಳಿವೆ. ಆದರೆ, 5,790ಕಾರ್ಯನಿ‌ರ್ವಹಿಸುತ್ತಿದ್ದಾರೆ. ಕೋವಿಡ್ ಕಾಲದ ಒತ್ತಡವನ್ನು ಗಣನೆಗೆ ತೆಗೆದುಕೊಂಡಾಗ ಇನ್ನೂ ಕನಿಷ್ಠ 10,000 ಶುಶ್ರೂಷಕರ ತುರ್ತು ನೇಮಕದ ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗಳ ಸ್ಥಿತಿ ಭಿನ್ನವಾಗಿಲ್ಲ. 5,949 ಶುಶ್ರೂಷಕರು ಕಾರ್ಯನಿರ್ವಹಿಸುತ್ತಿದ್ದು, ಅಲ್ಲೂ ಕೊರತೆ ಇದೆ.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 800 ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್ಸ್ (ಜಿಡಿಎಂಒ)‌ ಮತ್ತು ಎರಡು ಸಾವಿರಕ್ಕೂ ಹೆಚ್ಚು ತಜ್ಞ ವೈದ್ಯರ ಕೊರತೆ ಇದೆ. ಗುತ್ತಿಗೆ ಆಧಾರದಲ್ಲಿ ತಜ್ಞ ವೈದ್ಯರಿಗೆ ₹ 1.20 ಲಕ್ಷ ಮತ್ತು ಎಂಬಿಬಿಎಸ್‌ ವೈದ್ಯರಿಗೆ ₹80 ಸಾವಿರ ಕೊಡುವುದಾಗಿ ಆರೋಗ್ಯ ಇಲಾಖೆ ಜಾಹೀರಾತು ಪ್ರಕಟಿಸಿತ್ತು. ಅದಕ್ಕೆ ಆಸಕ್ತಿ ತೋರಿಸಿದವರು ಕಡಿಮೆ ಎಂದು ಕರ್ನಾಟಕ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಸಂಘದ ಅಧ್ಯಕ್ಷ ಡಾ.ಜಿ.ಎ.ಶ್ರೀನಿವಾಸ ‘ಪ್ರಜಾವಾಣಿ’ ಗೆ ತಿಳಿಸಿದರು.

‘ವೈದ್ಯರು ಮತ್ತು ಇತರ ಸಿಬ್ಬಂದಿ ಕೊರತೆಯಿಂದ ಕಾರ್ಯನಿರ್ವಹಿಸುವುದೇ ಕಷ್ಟವಾಗಿದೆ. ಈವರೆಗೆ ಕೋವಿಡ್‌ನಿಂದ ಆರು ವೈದ್ಯರು ಮೃತಪಟ್ಟಿದ್ದಾರೆ. ಜನರಲ್‌ ಫಿಸಿಷಿಯನ್‌ಗಳು 24 ಗಂಟೆಯೂ ಕೆಲಸ ಮಾಡಬೇಕಾದ ಸ್ಥಿತಿ ಇದೆ’ ಎಂದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಆರೋಗ್ಯ ಸಚಿವ ಶ್ರೀರಾಮುಲು, ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರಿಗೆ ಕರೆ ಮಾಡಿದರೂ ಲಭ್ಯರಾಗಲಿಲ್ಲ.

ವೈದ್ಯರು, ಶುಶ್ರೂಷಕರ ತಾಪತ್ರಯ
* ಪಿಪಿಇ ಕಿಟ್‌ ಧರಿಸಿ ಆರು ಗಂಟೆ ನಿರಂತರ ಕೆಲಸ
* ಸಿಬ್ಬಂದಿ ಕೊರತೆಯಿಂದ ಕ್ವಾರಂಟೈನ್‌ ವ್ಯವಸ್ಥೆ ಸಮರ್ಪಕವಾಗಿಲ್ಲ
* ಆಸ್ಪತ್ರೆಗಳಲ್ಲೇ ಕ್ವಾರಂಟೈನ್‌ಗೆ ಒಳಪಡಲು ಸೂಕ್ತ ವ್ಯವಸ್ಥೆಯಿಲ್ಲ
*ಪೌಷ್ಟಿಕ ಊಟ–ತಿಂಡಿ, ಕುಡಿಯಲು ಬಿಸಿ ನೀರು ಅಲಭ್ಯ
* ಆರೋಗ್ಯ ಸಿಬ್ಬಂದಿ ಸೋಂಕಿತರಾದರೆ ಚಿಕಿತ್ಸೆಗೆ ಅಲೆದಾಡಬೇಕಾದ ಸ್ಥಿತಿ
*ಕೋವಿಡ್ ಆಸ್ಪತ್ರೆಗಳ ಸಿಬ್ಬಂದಿಗೆ ಮನೆ ಮಾಲೀಕರ ಕಿರುಕುಳ
*ಸಿಬ್ಬಂದಿ ಸೋಂಕಿತರಾದಲ್ಲಿ ರಜೆ ಪಡೆಯದೆಯೇ ಕೆಲಸ ನಿರ್ವಹಿಸುವ ಅನಿವಾರ್ಯ
*ಆರೋಗ್ಯ ಸಿಬ್ಬಂದಿಗೆ ಜೀವಸಂಜೀವಿನಿ ಯೋಜನೆಯಡಿ ನಗದುರಹಿತ ಚಿಕಿತ್ಸೆಗೆ ಅವಕಾಶವಿಲ್ಲ
* ಕುಟುಂಬದ ಸದಸ್ಯರು ಕೊರೊನಾ ಸೋಂಕಿತರಾಗುವ ಆತಂಕ

ನರ್ಸ್‌ಗಳ ವೇತನದಲ್ಲಿ ತಾರತಮ್ಯ
‘ಬೆಂಗಳೂರಿನಲ್ಲಿ ನರ್ಸ್‌ಗಳಿಗೆ ₹ 33 ಸಾವಿರ ವೇತನ ಕೊಡಲಾಗುತ್ತಿದೆ. ಆದರೆ, ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಗುತ್ತಿಗೆ ನರ್ಸ್‌ಗಳಿಗೆ ನೀಡುತ್ತಿರುವುದು ಕೇವಲ ₹ 13 ಸಾವಿರ. ಕೋವಿಡ್ ಆಸ್ಪತ್ರೆಯಲ್ಲಿ ಹೊಸದಾಗಿ ನೇಮಿಸಿಕೊಂಡವರಿಗೆ ₹ 25 ಸಾವಿರ ನೀಡುವುದಾಗಿ ಹೇಳಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮೈಸೂರಿನ ಶುಶ್ರೂಷಕರೊಬ್ಬರು ತಿಳಿಸಿದರು.

ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆ
ಮೈಸೂರು: ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ (43) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋವಿಡ್‌–19 ನಿರ್ವಹಣಾ ಕಾರ್ಯದಲ್ಲಿ ನೀಡುತ್ತಿದ್ದ ‘ಟಾರ್ಗೆಟ್‌’ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಸಂಬಂಧಿಕರು ಆರೋಪಿಸಿದ್ದು, ಇದಕ್ಕಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಪ್ರಶಾಂತ್‌ಕುಮಾರ್‌ ಮಿಶ್ರಾ ಅವರನ್ನು ದೂರಿದ್ದಾರೆ.

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ಪರಿವೀಕ್ಷಕರಾಗಿದ್ದ ಇವರು, ಆರು ತಿಂಗಳಿನಿಂದ ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅವರಿಗೆ ಪತ್ನಿ ಅನಿತಾ, ಏಳು ವರ್ಷದ ಮಗಳಿದ್ದಾರೆ. ಕೋವಿಡ್‌ ಭೀತಿಯಿಂದಾಗಿ, ಪತ್ನಿ ಹೆಬ್ಬಾಳದಲ್ಲಿರುವ ತಮ್ಮ ತವರು ಮನೆಯಲ್ಲಿಮಗಳ ಜತೆ ವಾಸವಿದ್ದರು. ನಾಗೇಂದ್ರ ಮೈಸೂರಿನ ಗಿರಿನಗರದ ನಿವಾಸದಲ್ಲಿ ಒಬ್ಬರೇ ಇದ್ದರು. ಗುರುವಾರ ಬೆಳಿಗ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮನೆಯಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರುಕುಳ ಆರೋಪ, ಶವವಿಟ್ಟು ಪ್ರತಿಭಟನೆ:ಸಿಇಒ ಪ್ರಶಾಂತಕುಮಾರ್ ಮಿಶ್ರಾ ಅವರ ಕಿರುಕುಳದಿಂದಾಗಿಯೇ ಡಾ.ನಾಗೇಂದ್ರ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದು,ಇಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದರು.

‘ಸಿಇಒ ನೀಡುತ್ತಿದ್ದ ಕಾರ್ಯಭಾರದಿಂದಾಗಿ ಒತ್ತಡಕ್ಕೀಡಾಗಿದ್ದರು. ಜೊತೆಗೆ ಸಿಬ್ಬಂದಿ ಕೊರತೆಯಿಂದ ಕಾರ್ಯನಿರ್ವಹಣೆ ಕಷ್ಟ ಆಗುತ್ತಿತ್ತು. ಪ್ರತಿದಿನ 300 ಮಂದಿಗೆ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸುವ ಗುರಿ ನೀಡಲಾಗಿತ್ತು. ಇದನ್ನು ಸಾಧಿಸಲು ಅಗತ್ಯವಿದ್ದಷ್ಟು ಸಿಬ್ಬಂದಿ ಇರಲಿಲ್ಲ. ಗುರಿ ಸಾಧಿಸದಿದ್ದಾಗ ಸಿಇಒ ಏಕವಚನದಲ್ಲಿ‌ ನಿಂದಿಸುತ್ತಿದ್ದರು’ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಸಿಇಒ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಶವಸಂಸ್ಕಾರಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂದು ಪಟ್ಟುಹಿಡಿದರು.

ಮೃತದೇಹದ ಅಂತಿಮ ದರ್ಶನಕ್ಕೆ ಬಂದಿದ್ದ ಸಿಇಒ ಮಿಶ್ರಾ, ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಕೆಲಸದಿಂದ ದೂರ ಉಳಿದ ವೈದ್ಯರು:ಸಿಇಒ ಮಿಶ್ರಾ ಅವರನ್ನು ಅಮಾನತು ಮಾಡುವಂತೆ ಪಟ್ಟುಹಿಡಿದಿರುವ ಜಿಲ್ಲೆಯ ಎಲ್ಲ ಸರ್ಕಾರಿ ವೈದ್ಯರು, ಅಲ್ಲಿಯವರೆಗೆ ಕೆಲಸದಿಂದ ದೂರ ಉಳಿಯುವ ತೀರ್ಮಾನ ತೆಗೆದುಕೊಂಡರು. ಕರ್ನಾಟಕ ಸರ್ಕಾರಿ ವೈದ್ಯಾದಿಕಾರಿಗಳ ಸಂಘ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

**

ತುರ್ತಾಗಿ ನರ್ಸ್‌ಗಳನ್ನು ನೇಮಕ ಮಾಡಿದರೆ ಒಳ್ಳೆಯದು. ತಾತ್ಕಾಲಿಕವಾಗಿ ನೇಮಿಸಿಕೊಂಡವರಿಗೆ ಮುಂದಿನ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು.
-ಡಾ.ಆರ್‌.ಬಾಲಸುಬ್ರಮಣ್ಯಂ, ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ಸಂಸ್ಥಾಪಕ

**

ಕೊರೊನಾ ಯೋಧರು ಅಧಿಕ ಕೆಲಸದಿಂದ ಒತ್ತಡ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗು<br/>ತ್ತಿರುವುದು ಗಮನಕ್ಕೆ ಬಂದಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಡಾ.ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT