ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್ ತಡೆಗೆ ರಾಜ್ಯದಲ್ಲಿ ಕಠಿಣ ನಡೆ: ಶಾಲಾ ಮಕ್ಕಳ ಪೋಷಕರಿಗೆ ಲಸಿಕೆ ಕಡ್ಡಾಯ

ಓಮೈಕ್ರಾನ್ ಪ್ರಸರಣ ತಡೆಗೆ ರಾಜ್ಯದಲ್ಲಿ ಹೊಸ ಮಾರ್ಗಸೂಚಿ: ಏನೇನಿದೆ?
Last Updated 4 ಡಿಸೆಂಬರ್ 2021, 9:59 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರ ತಳಿ ಓಮೈಕ್ರಾನ್‌ನ ಎರಡು ಪ್ರಕರಣ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಪತ್ತೆಯಾಗಿರುವ ಬೆನ್ನಲ್ಲೇ, ಕೋವಿಡ್‌ ಹರಡುವುದನ್ನು ತಡೆಯುವತ್ತ ಸರ್ಕಾರ ಕಠಿಣ ಹೆಜ್ಜೆಗಳನ್ನಿಟ್ಟಿದೆ.

ಓಮೈಕ್ರಾನ್‌ ದೃಢಪಟ್ಟಿರುವುದು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಅದನ್ನು ನಿಯಂತ್ರಿಸುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದರು. ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಆರೋಗ್ಯ ಕ್ಷೇತ್ರದ ತಜ್ಞರು ಸಭೆಯಲ್ಲಿ ಭಾಗಿಯಾಗಿದ್ದರು. ಕೋವಿಡ್ ನಿಗ್ರಹಕ್ಕೆ ಪೂರಕವಾಗಿ ಹೊಸ ಮಾರ್ಗಸೂಚಿಯನ್ನೂ ಸರ್ಕಾರ ಹೊರಡಿಸಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ ಅವರು, ಕೊರೊನಾ ಹರಡುವಿಕೆ ತಡೆಗಾಗಿ ಮತ್ತೆ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುವುದು ಎಂದರು.

ಕೋವಿಡ್‌ ಪರೀಕ್ಷಾ ಸಾಮರ್ಥ್ಯವನ್ನು ಪ್ರತಿನಿತ್ಯ 60 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಮೂರನೇ ಅಲೆ ಬಂದರೆ ಅದನ್ನು ಎದುರಿಸಲು ಆರೋಗ್ಯ ಇಲಾಖೆ ಚಿಕಿತ್ಸಾ ಸೌಲಭ್ಯವನ್ನು ಸಿದ್ಧತೆ ಮಾಡಿಕೊಳ್ಳಬೇಕು. ಆಮ್ಲಜನಕ ಹೊಂದಿದ ಹಾಸಿಗೆಗಳು ಮತ್ತು ಆಮ್ಲಜನಕ ತಯಾರಿಕಾ ಘಟಕಗಳನ್ನು ಸಜ್ಜುಗೊಳಿಸಲು ತೀರ್ಮಾನಿಸಲಾಯಿತು. ಆಮ್ಲಜನಕದ ಲಭ್ಯತೆ, ಸಾಗಾಣಿಕೆ, ಪೂರೈಕೆ ಜಾಲ ಸಕ್ರಿಯಗೊಳಿಸಲಾಗುವುದು ಹಾಗೂ ಔಷಧಗಳ ಲಭ್ಯತೆಯನ್ನು ಖಾತರಿಪಡಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಶಾಲೆಗಳಲ್ಲಿ ಸದ್ಯಕ್ಕೆ ತರಗತಿಗಳನ್ನು ಯಥಾಸ್ಥಿತಿ ಮುಂದುವರೆಸಲಾಗುವುದು. ಆದರೆ ಶಾಲೆಗಳಲ್ಲಿ ತೀವ್ರ ನಿಗಾವಹಿಸಲು ಸೂಚಿಸಲಾಗಿದೆ. ಕೇರಳದಿಂದ ಬಂದ ವಿದ್ಯಾರ್ಥಿಗಳಿಂದ ಸಮಸ್ಯೆ ಆಗುತ್ತಿದ್ದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಓಮೈಕ್ರಾನ್‌ ಜತೆಗೆ ಈಗಾಗಲೇ ಕಂಡು ಬಂದಿರುವ ಡೆಲ್ಟಾ ವೈರಾಣು ಸೋಂಕಿನ ಕುರಿತೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಅಶೋಕ ಹೇಳಿದರು.

ದಕ್ಷಿಣ ಆಫ್ರಿಕಾದಿಂದ ಬಂದ ಓಮೈಕ್ರಾನ್‌ ಸೋಂಕಿತ ವ್ಯಕ್ತಿಯ ಎರಡು ಪರೀಕ್ಷಾ ವರದಿಗಳಲ್ಲಿ ಭಿನ್ನತೆ ಕಂಡು ಬಂದಿರುವ ಬಗ್ಗೆ ಕೂಲಂಕಶ ತನಿಖೆ ನಡೆಸುವಂತೆ ಸಭೆಯಲ್ಲಿ ಹೈಗ್ರೌಂಡ್ಸ್‌ ಪೊಲೀಸರಿಗೆ ಸೂಚಿಸಲಾಯಿತು ಎಂದರು.

ಭಾರತ ಸರ್ಕಾರಕ್ಕೆ ಪತ್ರ ಬರೆದು, ರಾಷ್ಟ್ರೀಯ ಜೀವ ವಿಜ್ಞಾನಗಳ ಸಂಸ್ಥೆಯ(ಎನ್‌ಸಿಬಿಎಸ್‌) ಪ್ರಯೋಗಾಲಯ ಓಮೈಕ್ರಾನ್‌ ನಡೆಸಿರುವ ಅಧ್ಯಯನದ ವಿವರವಾದ ವರದಿ ಒದಗಿಸುವಂತೆಯೂ ಮನವಿ ಮಾಡಲು ತೀರ್ಮಾನಿಸಲಾಗಿದೆ. ಐಎಎಸ್‌ ಅಧಿಕಾರಿ ಶಿಲ್ಪಾ ನಾಗ್ ಅವರನ್ನು ಕೋವಿಡ್‌ ವಿಚಕ್ಷಣಾ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.

ತರಬೇತಿ: ‘ಮೊದಲೆರಡು ಅಲೆಯಲ್ಲಿ ಚಿಕಿತ್ಸೆ ಒದಗಿಸಲು ದಾದಿಯರ ಕೊರತೆ ಉಂಟಾಗಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಈ ಬಾರಿ ಅಂತಿಮ ವರ್ಷದ ನರ್ಸಿಂಗ್, ಪ್ಯಾರಾಮೆಡಿಕಲ್‌ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 18 ಸಾವಿರ ವಿದ್ಯಾರ್ಥಿಗಳಿಗೆ ಒಂದು ತಿಂಗಳ ತರಬೇತಿ ನೀಡಲಾಗುವುದು’ ಎಂದು ಆರೋಗ್ಯ ಹಾಗೂ ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ನಿರ್ಬಂಧದ ಮಾರ್ಗಸೂಚಿ

*ಶಾಲಾ–ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು, ಉತ್ಸವ ಮತ್ತು ಕಾರ್ಯಕ್ರಮಗಳಿಗೆ 2022 ರ ಜನವರಿ 15 ರವರೆಗೆ ನಿರ್ಬಂಧ.

* ಶಾಲಾ–ಕಾಲೇಜು ವಿದ್ಯಾರ್ಥಿಗಳ ಪೋಷಕರಿಗೆ ಎರಡು ಡೋಸ್‌ ಕೋವಿಡ್‌ ಲಸಿಕೆ ಕಡ್ಡಾಯ

*ಮದುವೆ, ಸಭೆ, ಸಮಾರಂಭ, ಸಮ್ಮೇಳನಗಳಲ್ಲಿ 500 ಜನರಿಗೆ ಮಾತ್ರ ಅವಕಾಶ. ಕೋವಿಡ್‌ ಮಾರ್ಗಸೂಚಿ ಪಾಲಿಸುವುದು ಆಯೋಜಕರ ಜವಾಬ್ದಾರಿ.

*ಎರಡು ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಮಾಲ್‌ಗಳು, ಚಿತ್ರಮಂದಿರಗಳಿಗೆ ಪ್ರವೇಶ.

* ಆರೋಗ್ಯ ಕಾರ್ಯಕರ್ತರು, 65 ವರ್ಷಮೇಲ್ಪಟ್ಟವರು ಮತ್ತು ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ.

* ಸರ್ಕಾರಿ ನೌಕರರು ಎರಡು ಡೋಸ್‌ ಲಸಿಕೆ ಪಡೆಯಲೇಬೇಕು.

* ಮಾಸ್ಕ್‌ ಧರಿಸದೇ ಇರುವವರಿಗೆ ಬಿಬಿಎಂಪಿ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಕೇಂದ್ರಗಳಲ್ಲಿ ₹250 ಮತ್ತು ಉಳಿದ ಕಡೆಗಳಲ್ಲಿ ₹100 ದಂಡ.

3ನೇ ಅಲೆ: ಚಿಕಿತ್ಸೆಗೆ ಸರ್ಕಾರ ಸಜ್ಜು

ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಿಸಲು ಮಕ್ಕಳ ತೀವ್ರ ನಿಗಾ ಘಟಕ (ಐಸಿಯು), ಹಾಸಿಗೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವೈದ್ಯಕೀಯ ಕಾಲೇಜುಗಳ ನಿರ್ದೇಶಕರಿಗೆ ಆರೋಗ್ಯ ಹಾಗೂ ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್ ಸೂಚಿಸಿದರು.

ಓಮೈಕ್ರಾನ್ ಕಾಣಿಸಿಕೊಂಡಿರು ಬೆನ್ನಲ್ಲೇ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಜೊತೆಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆತನಾಡಿದ ಅವರು, ‘ಜಿಲ್ಲಾಮಟ್ಟದಲ್ಲಿ ತೃತೀಯ ಹಂತದ ಆರೋಗ್ಯ ಸೇವೆ ನೀಡಲು 21 ವೈದ್ಯಕೀಯ ಕಾಲೇಜುಗಳಿವೆ. ಹೊಸ ತಳಿಯ ವೈರಾಣು ಕಾಣಿಸಿಕೊಂಡವರಿಗೆ ನೀಡಬೇಕಾದ ಚಿಕಿತ್ಸೆ ಬಗ್ಗೆ ಚರ್ಚಿಸಲಾಗಿದೆ’ ಎಂದರು.

‘ಮೊದಲೆರಡು ಅಲೆಯಲ್ಲಿ ಚಿಕಿತ್ಸೆ ಒದಗಿಸಲು ದಾದಿಯರ ಕೊರತೆ ಉಂಟಾಗಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಈ ಬಾರಿ ಅಂತಿಮ ವರ್ಷದ ನರ್ಸಿಂಗ್, ಪ್ಯಾರಾಮೆಡಿಕಲ್‌ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 18 ಸಾವಿರ ವಿದ್ಯಾರ್ಥಿಗಳಿಗೆ ಒಂದು ತಿಂಗಳ ತರಬೇತಿ ನೀಡಲಾಗುವುದು’ ಎಂದು ಹೇಳಿದರು.

* ರಾತ್ರಿ ಕರ್ಫ್ಯೂ ವಿಧಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೊಸ ವರ್ಷಾಚರಣೆ ಬಗ್ಗೆ ಮುಂದೆ ನಿರ್ಧಾರ ತೆಗೆದುಕೊಳ್ಳಲಾಗುವುದು

–ಆರ್‌. ಅಶೋಕ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT