ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಸಾವಿಗೆ ಸಿಗದ ದೃಢೀಕರಣ

ತಂತ್ರಾಂಶದಲ್ಲಿ ಆರ್‌ಎಟಿ, ಆರ್‌ಟಿಪಿಸಿಆರ್‌ ವರದಿಗೆ ಮಾತ್ರ ಮನ್ನಣೆ
Last Updated 14 ಜುಲೈ 2021, 20:14 IST
ಅಕ್ಷರ ಗಾತ್ರ

ಬಾಗಲಕೋಟೆ: ಸಿಟಿ ಸ್ಕ್ಯಾನ್‌ನಲ್ಲಿ ಕೋವಿಡ್‌ ಲಕ್ಷಣಗಳು ಪತ್ತೆಯಾಗಿ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದವರ ಮಾಹಿತಿ ಆರೋಗ್ಯ ಇಲಾಖೆಯ ತಂತ್ರಾಂಶದಲ್ಲಿ ದಾಖಲಾಗುತ್ತಿಲ್ಲ. ಇದು ರಾಜ್ಯ ಸರ್ಕಾರ ಕೋವಿಡ್ ಸಾವಿಗೆ ಘೋಷಿಸಿರುವ ₹ 1 ಲಕ್ಷ ಪರಿಹಾರ ಪಡೆಯಲು ಅಡ್ಡಿಯಾಗಲಿದೆಯೇ ಎಂಬ ಆತಂಕ ರೋಗಿಗಳ ಅವಲಂಬಿತರಿಗೆ ಎದುರಾಗಿದೆ.

ರ್‍ಯಾಪಿಡ್‌ ಆ್ಯಂಟಿಜನ್ ಟೆಸ್ಟ್ (ಆರ್‌ಎಟಿ) ಅಥವಾ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರು ಮಾತ್ರ ಈಗ ಕೋವಿಡ್ ಸೋಂಕಿತರೆಂದು ಪರಿಗಣಿತರಾಗಿ ಇಲಾಖೆಯ ತಂತ್ರಾಂಶದಲ್ಲಿ ಅವರ ಹೆಸರಿ
ನಲ್ಲಿ ಪಾಸಿಟಿವ್ ಸಂಖ್ಯೆ (ಪಿ–ನಂಬರ್) ನಮೂದಾಗುತ್ತದೆ.

ಆ ಎರಡೂ ಪರೀಕ್ಷೆಗಳ ಫಲಿತಾಂಶ ನೆಗೆಟಿವ್ ಬಂದು ಸಿಟಿ ಸ್ಕ್ಯಾನ್‌ ವೇಳೆ ದೃಢಪಟ್ಟವರಿಗೆ ಪಿ–ನಂಬರ್ ಕೊಡುತ್ತಿಲ್ಲ. ಕೋವಿಡ್‌ನಿಂದ ಸತ್ತವರ ಪಟ್ಟಿಯಲ್ಲೂ ಪರಿಗಣಿಸುತ್ತಿಲ್ಲ. ಮರಣ ಪ್ರಮಾಣಪತ್ರದಲ್ಲೂ ಕೋವಿಡ್‌ನಿಂದ ಆದ ಸಾವು ಎಂದು ನಮೂದಾಗುತ್ತಿಲ್ಲ.

ಬಾಗಲಕೋಟೆ ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇ ಅಲೆ ಸೇರಿ ಜುಲೈ 12ರವರೆಗೆ ಒಟ್ಟು 323 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ. ಇದುಆರ್‌ಎಟಿ ಅಥವಾ ಆರ್‌ಟಿಪಿಸಿಆರ್ ಪರೀಕ್ಷೆಗಳಲ್ಲಿ ಬಂದ ಪಾಸಿಟಿವ್ ವರದಿಯನ್ನಷ್ಟೇ ಆಧರಿಸಿದೆ.

‘ಕೋವಿಡ್ ಮೊದಲನೇ ಅಲೆಯ ವೇಳೆ ಸೋಂಕಿನ ಪತ್ತೆಗೆ ಆರ್‌ಎಟಿ ಹಾಗೂ ಆರ್‌ಟಿಪಿಸಿಆರ್‌ ಪರೀಕ್ಷೆಗಳೇ ಸಾಕಾಗಿದ್ದವು. ಆದರೆ ಎರಡನೇ ಅಲೆಯ ವೇಳೆ ಹೆಚ್ಚಿನ ಸಂದರ್ಭಗಳಲ್ಲಿ ಕೊರೊನಾ ವೈರಸ್‌ನ ಜಾಡು ಸಿಟಿ ಸ್ಕ್ಯಾನಿಂಗ್‌ ವರದಿಯಲ್ಲಿ ಪತ್ತೆಯಾಗಿದೆ’ ಎಂದು ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಹೇಳುತ್ತಾರೆ.

‘ಪತ್ನಿ ಶ್ರೀದೇವಿ ಮೇ 28ರಂದು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸಾವು ಕೋವಿಡ್‌ನಿಂದ ಆಗಿದೆ ಎಂಬ ಉಲ್ಲೇಖ ಪ್ರಮಾಣ ಪತ್ರದಲ್ಲಿ ಇರಲಿಲ್ಲ. ವೈದ್ಯರ ಬಳಿ ಬೇರೆ ಬರೆಸಿಕೊಂಡು ಬಂದಿದ್ದೇನೆ. ಪರಿಹಾರ ನೀಡಲು ಅದನ್ನು ಪರಿಗಣಿಸಲಾಗುತ್ತದೆಯೇ’ ಎಂದು ಬಾಗಲಕೋಟೆ ನಿವಾಸಿ ರಾಚಯ್ಯ ಹಿರೇಮಠ ಪ್ರಶ್ನಿಸುತ್ತಾರೆ.

ಇಲಾಖೆಗೆ ಪತ್ರ ಬರೆದಿದ್ದೇವೆ: ಡಿಎಚ್‌ಒ

ಕೋವಿಡ್‌ನಿಂದ ಆದ ಸಾವಿನ ವಿಚಾರದಲ್ಲಿ ಆಗಿರುವ ಗೊಂದಲ ಪರಿಹರಿಸುವಂತೆ ಇಲಾಖೆಗೆ ಪತ್ರ ಬರೆದಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಹೇಳುತ್ತಾರೆ.

‘ಸಿಟಿ ಸ್ಕ್ಯಾನ್‌ನಲ್ಲಿ ಕೋವಿಡ್‌ ಲಕ್ಷಣ ಕಂಡುಬಂದು ನಂತರ ಸಾವನ್ನಪ್ಪಿರುವ 70 ಪ್ರಕರಣ ನನ್ನ ಗಮನಕ್ಕೆ ಬಂದಿವೆ. ಖಾಸಗಿ ಆಸ್ಪತ್ರೆಗಳಲ್ಲಿನ ಸಾವಿನ ವರದಿ ಪರಿಶೀಲಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚಲಿದೆ. ಹೀಗಾಗಿ ಸಮಸ್ಯೆ ಪರಿಹಾರಕ್ಕೆ ಕೋರಿದ್ದೇವೆ’ ಎನ್ನುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT