ಶುಕ್ರವಾರ, ಆಗಸ್ಟ್ 19, 2022
22 °C
ವಿವಿಧ ಜಿಲ್ಲೆಗಳಿಗೆ 900 ವೈದ್ಯರ ನಿಯೋಜನೆ: ಬಿ.ಎಸ್‌.ಯಡಿಯೂರಪ್ಪ

‘ಸ್ನಾತಕೋತ್ತರ ಕೌನ್ಸೆಲಿಂಗ್ ಮುಗಿಸಿದ ವೈದ್ಯರಿಗೆ ಕೋವಿಡ್‌ ನಿರ್ವಹಣೆ ಜವಾಬ್ದಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ಮುಗಿದಿದ್ದು ಇನ್ನೆರಡು ದಿನಗಳಲ್ಲಿ 900ಕ್ಕೂ ಹೆಚ್ಚು ವೈದ್ಯರನ್ನು ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾಗುವುದು. ಇದರಿಂದ ಕೋವಿಡ್-19‌ ನಿಭಾಯಿಸಲು ಸಹಾಯಕವಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ವಿವಿಧ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯಿತಿ ಸಿಇಒಗಳ ಸಭೆಯಲ್ಲಿ ಅವರು ಮಾತನಾಡಿ ಈ ವಿಷಯ ತಿಳಿಸಿದರು. ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಮರಣ ಪ್ರಮಾಣವನ್ನು ತಗ್ಗಿಸುವುದು ಆದ್ಯತೆಯಾಗಬೇಕು ಎಂದೂ ಮುಖ್ಯಮಂತ್ರಿ ತಿಳಿಸಿದರು.

ದಸರಾ ಇರುವುದರಿಂದ ಮೈಸೂರು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇರುವುದರಿಂದ, ಅಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಬೇಕಾಗಿದೆ. ಅಲ್ಲದೆ, ಇತರ ಜಿಲ್ಲೆಗಳಲ್ಲೂ ಕೋವಿಡ್‌ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರೀಕ್ಷೆಗೆ ಅಗತ್ಯವಿರುವ ಕಿಟ್‌ಗಳನ್ನು ಒದಗಿಸಲಾಗುವುದು. ಪ್ರಯೋಗಾಲಯಗಳು ಕಡಿಮೆ ಇದ್ದಲ್ಲಿ ಪಕ್ಕದ ಜಿಲ್ಲೆಗಳ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಬೇಕು ಎಂದು ಸಲಹೆ ನೀಡಿದರು.

ಬೂತ್‌ ಮಟ್ಟದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಟಾಸ್ಕ್‌ಫೋರ್ಸ್‌ಗಳು ಅಂತಹ ಪ್ರದೇಶಗಳನ್ನು ಗುರುತಿಸಬೇಕು. ಆಕ್ಸಿಜನ್‌ ಸಮಸ್ಯೆ ಇದ್ದರೆ, ಹೆಚ್ಚು ಆಕ್ಸಿಜನ್‌ ಲಭ್ಯವಿರುವ ಜಿಲ್ಲೆಗಳಿಂದ ಪಡೆದುಕೊಳ್ಳಬೇಕು. ಎಲ್ಲೂ ವೆಂಟಿಲೇಟರ್‌ಗಳ ಕೊರತೆ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.

ಕೋವಿಡ್‌ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಐಸಿಯುಗಳಲ್ಲಿ ವೆಂಟಿಲೇಟರ್‌ಗಳ ಲಭ್ಯತೆ ಬಗ್ಗೆಯೂ ನಿಗಾ ವಹಿಸಬೇಕು. ಗೃಹ ನಿರ್ಬಂಧದಲ್ಲಿ ಇರುವವರ ಬಗ್ಗೆ ಮೇಲ್ವಿಚಾರಣೆ ಕಟ್ಟುನಿಟ್ಟಾಗಿ ಮಾಡಬೇಕು. ಯಾರೂ ನಿರ್ಲಕ್ಷ್ಯವಹಿಸಬಾರದು ಎಂದು ತಿಳಿಸಿದರು.

ರಾಜ್ಯದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಇದರಿಂದ ಆಗಿರುವ ಹಾನಿಯನ್ನು ಅಂದಾಜು ಮಾಡಿ, ಈಗಾಗಲೇ ಕೇಂದ್ರಕ್ಕೆ ಸಲ್ಲಿಸಿರುವ ಪರಿಹಾರದ ಮನವಿಗೆ ಸೇರಿಸಲಾಗುವುದು. ಜೂನ್‌, ಜುಲೈ ಮಳೆ ಮತ್ತು ಪ್ರವಾಹದಿಂದ ₹ 8,071 ಕೋಟಿ ನಷ್ಟ ಆಗಿದೆ. ಸೂಕ್ತ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕು ಗೊಂಡ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಗೊಬ್ಬರದ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ತುರ್ತು ಪರಿಹಾರವನ್ನು ಕೈಗೊಳ್ಳಲು ಹಣದ ಲಭ್ಯತೆ ಇದೆ. ಮಳೆಯಿಂದ ಹಾನಿಗೊಳಗಾದ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

ತುರ್ತಾಗಿ ಕೈಗೊಳ್ಳಬೇಕಿರುವ ಕೆಲಸಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿ ರೈತರಿಗೆ ಬೆಳೆ ಹಾನಿಗೆ ಪರಿಹಾರ ನೀಡಲು ಆದ್ಯತೆ ಮೇರೆಗೆ ಕೆಲಸ ಮಾಡಬೇಕು ವಿಶೇಷ ಸಂದರ್ಭವಾದ ಕಾರಣ ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.

ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಗೃಹ ಸಚಿವ ಬಸವರಾಜ ಬೊಮ್ಮಾಯಿ,ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ. ವಿ.ರಮಣರೆಡ್ಡಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು