ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿಗೆ ಮೊದಲೇ ಕೋವಿಡ್ 3ನೇ ಅಲೆ: ಸಾರ್ವಜನಿಕರ ವರ್ತನೆ ಬಗ್ಗೆ ತಜ್ಞರ ಕಳವಳ

ಸಾರ್ವಜನಿಕರ ವರ್ತನೆ ಬಗ್ಗೆ ವೈದ್ಯಕೀಯ ತಜ್ಞರ ಕಳವಳ
Last Updated 14 ಜುಲೈ 2021, 20:24 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ನಿಯಮಗಳನ್ನು ಕಡೆಗಣಿಸಿ ಜನರು ಗುಂಪು ಗುಂಪಾಗಿ ಸೇರುತ್ತಿರುವುದರಿಂದ ನಿರೀಕ್ಷಿತ ಅವಧಿಗೂ ಮುನ್ನವೇ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ತಜ್ಞ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ ತಿಂಗಳ ವೇಳೆಗೆ ಶೇ 60 ರಷ್ಟು ಜನರು ಲಸಿಕೆ ಪಡೆದುಕೊಳ್ಳದಿದ್ದಲ್ಲಿ ಮಕ್ಕಳ ಜತೆಗೆ ವಯಸ್ಕರು ಹಾಗೂ ವೃದ್ಧರು ಕೂಡ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚಿನ ಸಾವು–ನೋವಿಗೆ ಕಾರಣವಾಗಿದೆ. ಮೊದಲ ಅಲೆಯಲ್ಲಿ ವೈರಾಣುವಿನ ಹರಡುವಿಕೆಯ ವೇಗ ಅಷ್ಟಾಗಿ ಇರದಿದ್ದರಿಂದ ಒಂದು ವರ್ಷದ ಅವಧಿಯಲ್ಲಿ 9.73 ಲಕ್ಷ ಮಂದಿ ಕೋವಿಡ್ ಪೀಡಿತರಾಗಿದ್ದರು. ಸೋಂಕಿನ ತೀವ್ರತೆ ಕಡಿಮೆಯಿದ್ದರೂ 12 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಇವರಲ್ಲಿ ಶೇ 75ರಷ್ಟು ಮಂದಿ 60 ವರ್ಷ ಮೇಲ್ಪಟ್ಟವರೇ ಆಗಿದ್ದರು.

ಇದೇ ವರ್ಷ ಮಾರ್ಚ್ ಮೂರನೇ ವಾರದ ಬಳಿಕ ಕಾಣಿಸಿಕೊಂಡ 2ನೇ ಅಲೆಯಲ್ಲಿ ರೂಪಾಂತರಿ ವೈರಾಣು ವೇಗವಾಗಿ ವ್ಯಾಪಿಸಿಕೊಂಡು, ರಾಜ್ಯದ ಜನರನ್ನು ಸಂಕಷ್ಟಕ್ಕೆ ದೂಡಿದೆ. ನಾಲ್ಕು ತಿಂಗಳ ಅವಧಿಯಲ್ಲಿ 19 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದಾರೆ. ಇವರಲ್ಲಿ ಶೇ 54ರಷ್ಟು ಮಂದಿ 20 ರಿಂದ 40 ವರ್ಷದೊಳಗಿನವರು. ಸೋಂಕಿನ ತೀವ್ರತೆಗೆ 23,495 ಮಂದಿ ಮೃತಪಟ್ಟಿದ್ದಾರೆ.

ಜೂನ್ ಅಂತ್ಯಕ್ಕೆ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ. ಮೂರನೇ ಅಲೆಯು ಅಕ್ಟೋಬರ್ ಅಥವಾ ನವೆಂಬರ್ ಬಳಿಕ ಕಾಣಿಸಿಕೊಳ್ಳುವ ಬಗ್ಗೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಲೆಕ್ಕಾಚಾರ ಹಾಕಿದ್ದಾರೆ. ಆ ವೇಳೆಗೆ ಶೇ 60ರಿಂದ ಶೇ 70ರಷ್ಟು ಮಂದಿ ಲಸಿಕೆ ಹಾಕಿಸಿಕೊಂಡರೆ ವೈರಾಣುವಿನ ತೀವ್ರತೆ ಅಷ್ಟಾಗಿ ಬಾಧಿಸದು ಎಂದು ವಿಶ್ಲೇಷಿಸಿದ್ದಾರೆ.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 32 ರಷ್ಟು ಜನ ಈವರೆಗೆ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀಗಾಗಿ, ಅಕ್ಟೋಬರ್–ನವೆಂಬರ್ ಹೊತ್ತಿಗೆ ಶೇ 70ರ ಈ ಗುರಿ ತಲುಪುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 35ರಷ್ಟು ಮಕ್ಕಳಿದ್ದು, ಅವರಿಗೆ ಲಸಿಕೆ ಪ್ರಯೋಗದ ಹಂತದಲ್ಲಿದೆ. ಹೀಗಾಗಿ, 3.4 ಲಕ್ಷ ಮಕ್ಕಳು ಮೂರನೇ ಅಲೆಯಲ್ಲಿ ಸೋಂಕಿತರಾಗುವ ಸಾಧ್ಯತೆ ಬಗ್ಗೆ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

ಮೂರನೇ ಅಲೆಗೆ ಆಮಂತ್ರಣ: ‘ಮೂರನೇ ಅಲೆ ಕಾಣಿಸಿಕೊಳ್ಳುವ ಲಸಿಕೆ ವೇಗ ಪಡೆದುಕೊಳ್ಳುವ ಜತೆಗೆ ಮಕ್ಕಳ ತೀವ್ರ ನಿಗಾ ಘಟಕ ಸೇರಿದಂತೆ ವೈದ್ಯಕೀಯ ಸೌಲಭ್ಯ ಬಲಗೊಳಿಸಬೇಕು. ಮೊದಲ ಅಲೆಯ ಬಳಿಕ ಎಸಗಿದ ತಪ್ಪಿನಿಂದ ಎರಡನೇ ಅಲೆ ತೀವ್ರ ಹಾನಿ ಮಾಡಿತು.ಅದೇ ತಪ್ಪನ್ನು ಈಗಲೂ ಮುಂದುವರಿಸಿದರೆ ಮೂರನೇ ಅಲೆ ಅವಧಿಗೆ ಮುನ್ನವೇ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂಬುದು ತಜ್ಞರ ಅಭಿಮತ.

‘‌ತಪ್ಪುಗಳಿಂದ ಪಾಠ ಕಲಿತುಕೊಳ್ಳಬೇಕು. ಸಭೆ–ಸಮಾರಂಭಗಳನ್ನು ಸದ್ಯ ನಡೆಸಬಾರದು. ಪ್ರವಾಸಿ ಸ್ಥಳಗಳಲ್ಲಿ ಕೂಡ ಜನ ಗುಂಪು ಸೇರದಂತೆ ನಿರ್ಬಂಧ ಹಾಕಬೇಕು. ಆಗಸ್ಟ್ ಬಳಿಕ ವಿವಿಧ ಹಬ್ಬಗಳು ಬರಲಿವೆ. ಆಗ ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮೊಬೈಲ್ ರೀತಿಯೇ ಮುಖಗವಸು ಕೂಡ ನಮ್ಮ ಜತೆಗೆ ಸದಾ ಇರಬೇಕು’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

‘ಎರಡೂ ಡೋಸ್ ಲಸಿಕೆ ಪಡೆದ ಬಳಿಕ ಕೊರೊನಾ ತಗುಲಿದರೂ ಶೇ 98ರಷ್ಟು ಮಂದಿ ಮನೆ ಆರೈಕೆಯಲ್ಲಿಯೇ ಚೇತರಿಸಿಕೊಳ್ಳುತ್ತಾರೆ. ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಾಣು ಕೂಡ ಕಾಣಿಸಿಕೊಳ್ಳುತ್ತಿದೆ. ರೂಪಾಂತರಿ ವೈರಾಣುವಿನ ತೀವ್ರತೆಯನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ’ ಎಂದು
ವಿವರಿಸಿದರು.

ಮೂರನೇ ಅಲೆ: ವಯಸ್ಕರಿಗೂ ಅಪಾಯ

ಕೋವಿಡ್ ಮೂರನೇ ಅಲೆಯು ಮಕ್ಕಳ ಜತೆಗೆ ಲಸಿಕೆ ಪಡೆಯದ 18 ವರ್ಷ ಮೇಲ್ಟಟ್ಟವರಿಗೆ ಕೂಡ ಅಪಾಯವನ್ನು ತಂದೊಡ್ಡಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

‘ರೂಪಾಂತರಗೊಂಡ ಡೆಲ್ಟಾ ವೈರಾಣು ಎರಡನೇ ಅಲೆಯ ಹೊತ್ತಿನಲ್ಲಿ ಸೋಂಕು ವೇಗವಾಗಿ ಹರಡಲು ಕಾರಣವಾಯಿತು. ಈ ಅವಧಿಯಲ್ಲಿ ದೊಡ್ಡ ಪ್ರಮಾಣದ ಲಸಿಕಾ ಅಭಿಯಾನ ಕೂಡ ನಡೆದಿಲ್ಲ. ಹಾಗಾಗಿ, ಜನರು ಈ ವೇಳೆ ಎಚ್ಚರ ತಪ್ಪಿದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಅಲ್ಪಾವಧಿಯಲ್ಲಿ ಎಲ್ಲರಿಗೂ ಲಸಿಕೆ ಒದಗಿಸಲು ಸಾಧ್ಯವಿಲ್ಲ. ಈಗ ಮತ್ತೆ ಕೋವಿಡ್ ಪ್ರಕರಣ ಏರುಗತಿ ಪಡೆದಲ್ಲಿ ಎಲ್ಲ ವಯೋಮಾನದವರು ಅದರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಎಚ್ಚರಿಸಿದರು.

ಡಾ. ಸುದರ್ಶನ್ ಬಲ್ಲಾಳ್
ಡಾ. ಸುದರ್ಶನ್ ಬಲ್ಲಾಳ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT