ಶುಕ್ರವಾರ, ಜೂನ್ 25, 2021
21 °C

ಜನರಿಗೆ ಆರ್ಥಿಕ ನೆರವು, ದಿನಸಿ ವಸ್ತುಗಳನ್ನು ಸರ್ಕಾರ ಕೂಡಲೇ ನೀಡಲಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಲಾಕ್‌ಡೌನ್ ಮಾಡುವುದರ ಜತೆಗೆ ಜನರಿಗೆ ನೆರವು ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೋವಿಡ್‌ ಪರಿಸ್ಥಿತಿಯ ನಿರ್ವಹಣೆಗೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಓದಿ: 

‘ರಾಜ್ಯದಲ್ಲಿ ನಿತ್ಯ 50,000 ಪಾಸಿಟಿವ್ ಕೇಸ್‌ಗಳು ದಾಖಲಾಗುತ್ತಿವೆ. ಹೀಗಾಗಿ ಎರಡು ವಾರ ಸಂಪೂರ್ಣ ಲಾಕ್‌ಡೌನ್ ಮಾಡಬೇಕು. ಜನರಿಗೆ ಆರ್ಥಿಕ ನೆರವು ಮತ್ತು ಅಗತ್ಯ ದಿನಸಿ ವಸ್ತುಗಳನ್ನು ಸರ್ಕಾರ ಕೂಡಲೇ ನೀಡಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ’ ಎಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

‘ಆಂಧ್ರ ಪ್ರದೇಶ, ಕೇರಳದಲ್ಲಿ ವಿಶೇಷ ನೆರವಿನ ಪ್ಯಾಕೇಜ್ ನೀಡಿದ್ದಾರೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಲಾಕ್‌ಡೌನ್ ಅವಧಿಯಲ್ಲಿ ದುಡಿಯುವ ವರ್ಗ, ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ನಾನು ನಮ್ಮ ಶಾಸಕರೊಂದಿಗೆ ಮಾತನಾಡಿದ್ದೇನೆ. ಕೆಲವರು ವೈದ್ಯಕೀಯ ನೆರವು ನೀಡುತ್ತಿದ್ದಾರೆ, ಇನ್ನು ಕೆಲವರು ಆಹಾರ ಧಾನ್ಯ, ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಸರ್ಕಾರಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ. ಆದರೆ ಆಸ್ಪತ್ರೆ, ಅಂಬುಲೆನ್ಸ್, ಆಕ್ಸಿಜನ್ ಒದಗಿಸುವುದು ಬಿಜೆಪಿ ಸರ್ಕಾರದ ಜವಾಬ್ದಾರಿ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ.

ಓದಿ: 

‘ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾದ ಬಳಿಕ ಕೋರ್ಟ್ ಮಧ್ಯೆ ಪ್ರವೇಶಿಸಿದೆ. ಅಂದರೆ ದೇಶದಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಿದೆ ಎಂದರ್ಥ. ಈವರೆಗೆ ಸಂಭವಿಸಿರುವ ಸಾವು, ನೋವುಗಳಿಗೆ ಬಿಜೆಪಿ ಪಕ್ಷವೇ ನೇರಹೊಣೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಈವರೆಗೆ ನಮ್ಮ ರಾಜ್ಯಕ್ಕೆ ಅಗತ್ಯ ಪ್ರಮಾಣದ ಆಮ್ಲಜನಕವನ್ನು ಕೇಂದ್ರದ ಬಿಜೆಪಿ ಸರ್ಕಾರ ನೀಡುತ್ತಿಲ್ಲ. ನರೇಂದ್ರ ಮೋದಿ ಸರ್ಕಾರ ರಾಜ್ಯದ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ’ ಎಂದು ಸಿದ್ದರಾಮಯ್ಯ ದೂರಿದ್ದಾರೆ.

‘ಸೋಂಕು ಪರೀಕ್ಷೆ ಹೆಚ್ಚಾದರೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತದೆ, ಆಗ ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಬೇಕಾಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಬಿಜೆಪಿ ಸರ್ಕಾರ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದೆ. ಇದು ಸರ್ಕಾರವೇ ಜನರನ್ನು ಸಾವಿನ ದವಡೆಗೆ ತಳ್ಳಿದಂತೆ’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು