ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಭಯ ಬಿಟ್ಟು ಬೀದಿಗಿಳಿದ ಜನ – ಮೂರನೇ ಅಲೆಯ ತೂಗುಗತ್ತಿ

ಆರೋಗ್ಯ ವ್ಯವಸ್ಥೆ ಸುಧಾರಣೆಗೆ ₹1,500 ಕೋಟಿ ಕ್ರಿಯಾ ಯೋಜನೆ
Last Updated 12 ಜುಲೈ 2021, 20:43 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಆರ್ಭಟ ಕೊಂಚ ಕಡಿಮೆ ಆಗುತ್ತಿದ್ದಂತೆ ರಾಜ್ಯದಲ್ಲಿ ಸಾರ್ವಜನಿಕರ ಓಡಾಟದ ಭರಾಟೆ ಹೆಚ್ಚಾಗಿದೆ. ಮೂರನೇ ಅಲೆಯೆಂಬ ಕತ್ತಿ ನೆತ್ತಿ ಮೇಲೆ ತೂಗುತ್ತಿದ್ದರೂ ಭಯವೇ ಇಲ್ಲದಂತೆ ಬೀದಿಗಿಳಿದಿದ್ದಾರೆ.

ಇದಕ್ಕೆ ಸಾಕ್ಷ್ಯ ಎಂಬಂತೆ ಶನಿವಾರ ಮತ್ತು ಭಾನುವಾರ ರಾಜ್ಯದ ಬಹುತೇಕ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ತುಂಬಿ ತುಳುಕಿದ್ದವು. ಬೆಂಗಳೂರು ಸೇರಿ ಪ್ರಮುಖ ನಗರಗಳ ಮಾರುಕಟ್ಟೆ ಪ್ರದೇಶಗಳು, ರಸ್ತೆಗಳು ಜನರಿಂದ ಗಿಜಿಗುಡುತ್ತಿದ್ದವು. ಕಳೆದ ಮೂರು ತಿಂಗಳ ಭೀಕರ ಪರಿಸ್ಥಿತಿಯನ್ನೂ ಮರೆತ ಜನರು ಕನಿಷ್ಠ ಅಂತರವನ್ನೂ ಕಾಪಾಡಿಕೊಳ್ಳಲಿಲ್ಲ.

‘ಕೋವಿಡ್‌ ಮೂರನೇ ಅಲೆ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ ವೇಳೆ ಅಪ್ಪಳಿಸಬಹುದು. ಸಾರ್ವಜನಿಕರು ಎಲ್ಲೂ ಗುಂಪು ಸೇರದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ನಿರ್ದೇಶನ ನೀಡಿ ಪತ್ರ ಬರೆದಿದೆ. ಅನಿವಾರ್ಯ ಇಲ್ಲದಿದ್ದರೆ ಮನೆಯಿಂದ ಹೊರಗೆ ಹೋಗಬೇಡಿ ಎಂದು ನೀಡುತ್ತಿರುವ ಸಲಹೆಗಳನ್ನೂ ಕಿವಿಗೆ ಹಾಕಿಕೊಳ್ಳುವ ಸ್ಥಿತಿಯಲ್ಲಿ ಜನರು ಇಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಎರಡನೇ ಅಲೆ ನಿರ್ವಹಣೆಯಲ್ಲಿ ಎಡವಿದ್ದ ರಾಜ್ಯ ಸರ್ಕಾರ ಮೂರನೇ ಅಲೆ ಎದುರಿಸಲು ಈಗಲೇ ಸಿದ್ಧತೆಗಳನ್ನು ಆರಂಭಿಸಿದೆ. ಎರಡೂ ಅಲೆಗಳಲ್ಲಿ ಎದುರಾದ ಗಂಭೀರ ಸಮಸ್ಯೆಗಳನ್ನು ಗಮನದಲ್ಲಿಕೊಂಡು ಕಾರ್ಯತಂತ್ರ ರೂಪಿಸುತ್ತಿದೆ. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಮಕ್ಕಳ ಚಿಕಿತ್ಸೆಗಾಗಿ ವಿಶೇಷ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಗಮನ ಹರಿಸಿದೆ.

ಏನೆಲ್ಲಾ ಸಿದ್ಧತೆ: ‘ಮೂರನೇ ಅಲೆ ಎದುರಿಸಲು ₹1,500 ಕೋಟಿ ವೆಚ್ಚದ ಕ್ರಿಯಾ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ’ ಎಂದು ಕೋವಿಡ್‌ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

‘ಇದರಡಿ ಆರೋಗ್ಯ ಮೂಲಸೌಕರ್ಯ, ಗ್ರಾಮೀಣ ಆರೋಗ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದೂ ತಿಳಿಸಿದರು.

‘ಪ್ರತಿಯೊಂದು ತಾಲ್ಲೂಕು ಆಸ್ಪತ್ರೆಗಳಲ್ಲೂ 50 ಹಾಸಿಗೆಗಳ ಐಸಿಯುಗಳ (ತೀವ್ರ ನಿಗಾ ಘಟಕ) ಸ್ಥಾಪನೆ, ಜಿಲ್ಲಾ ಕೇಂದ್ರಗಳಲ್ಲಿ ತಲಾ 100 ಹಾಸಿಗೆಗಳ ಐಸಿಯುಗಳ ಸ್ಥಾಪಿಸಲಾಗುವುದು. ಜತೆಗೆ ವೈದ್ಯಕೀಯ ಆಮ್ಲಜನಕ ತಯಾರಿಕಾ ಘಟಕಗಳು, ಎಲ್‌ಎಂಒ ಸ್ಟೋರೇಜ್‌ ಟ್ಯಾಂಕ್‌ಗಳು, ಯುಪಿಎಸ್‌ಗಳ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

‘ಕೋವಿಡ್‌ ಕಾರ್ಯಪಡೆ ಅಧೀನದಲ್ಲಿ ಜಿನೋಮ್‌ ಸಿಕ್ವೆನ್ಸಿಂಗ್‌ ಸ್ಥಾಯಿ ಸಮಿತಿಯೊಂದನ್ನು ರಚಿಸಲಾಗಿದೆ. ಮೂರನೇ ಅಲೆ ನಿರ್ವಹಣೆಯ ಬಗ್ಗೆ ವೈದ್ಯರಿಗೂ ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ಕೋವಿಡ್‌ ನಿರ್ವಹಣೆಯ ಕೌಶಲವನ್ನು ಯುವ ಜನರಿಗೆ ನೀಡಲಾಗುತ್ತಿದೆ. ಇವರ ಸೇವೆಯನ್ನು ಮೂರನೇ ಅಲೆ ಬಂದಾಗ ಬಳಸಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

ರೂಪಾಂತರ, ಹಬ್ಬುವಿಕೆಯ ಮೇಲೆ ಕಣ್ಗಾವಲು:ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ವೈರಾಣುವಿನ ಜಿನೋಮ್‌ ಸೀಕ್ವೆನ್ಸಿಂಗ್‌ಗಾಗಿ (ವಂಶವಾಹಿ ಅನುಕ್ರಮಣಿಕೆ) ಗಂಟಲು ದ್ರವ ಸ್ಯಾಂಪಲ್‌ ಹೆಚ್ಚಿನ ಸಂಖ್ಯೆ ಜನರಿಂದ ಸಂಗ್ರಹಿಸಿ ಕಳುಹಿಸಲು ಸೂಚನೆ ನೀಡಲಾಗಿದೆ.

ರೋಗ ಲಕ್ಷಣ ಕಾಣಿಸಿಕೊಂಡ ಸ್ಥಳದಿಂದ ಕನಿಷ್ಠ 150 ಸ್ಯಾಂಪಲ್‌ಗಳನ್ನು 15 ದಿನಗಳಿಗೊಮ್ಮೆ ಕಳಿಸಿಕೊಡಬೇಕು. ವಿದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಸೋಂಕು ಇದ್ದರೆ ಅವರ ಸ್ಯಾಂಪಲ್‌ ಕೂಡ ಪಡೆದು ಕಡ್ಡಾಯವಾಗಿ ಕಳಿಸಬೇಕು. ಸೋಂಕಿಗೆ ಒಳಗಾದ ಮಕ್ಕಳು ಮತ್ತು ಇತರರ ಸ್ಯಾಂಪಲ್‌ಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಕಳಿಸಬೇಕು. ಜಿನೋಮ್‌ ಸೀಕ್ವೆನ್ಸಿಂಗ್‌ ನಿಮ್ಹಾನ್ಸ್‌ನಲ್ಲಿ ನಡೆಸಲಾಗುತ್ತದೆ.

ಮತ್ತೊಂದು ದುರಂತದತ್ತ: ಡಾ.ಬಲ್ಲಾಳ್ ಎಚ್ಚರಿಕೆ:‘ಎರಡನೇ ಅಲೆಯ ಸೋಂಕಿತರ ಸಂಖ್ಯೆ ಕಡಿಮೆ ಆಗಿರಬಹುದು, ಆದರೆ ಅಲೆ ಮುಗಿದಿಲ್ಲ. ಕಳೆದ ಎರಡು ದಿನಗಳ ಜನರ ವರ್ತನೆ ನೋಡಿದಾಗ, ಬೇಜವಾಬ್ದಾರಿಯಿಂದಲೇ ವರ್ತಿಸುತ್ತಿದ್ದಾರೆ ಎಂದು ನೋವಿನಿಂದಲೇ ಹೇಳಬೇಕಾಗುತ್ತದೆ’ ಎನ್ನುತ್ತಾರೆ ರಾಜ್ಯ ಸರ್ಕಾರ ರಚಿಸಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ವೈದ್ಯ ಡಾ. ಸುದರ್ಶನ ಬಲ್ಲಾಳ್‌.

‘ಮೂರನೇ ಅಲೆ ಎಂಬುದು ‘ಟೈಂಬಾಂಬ್‌’ನಂತೆ ಸ್ಫೋಟಗೊಳ್ಳಲು ಕ್ಷಣ ಗಣನೆಯಾಗುತ್ತಿದೆ. ಸಾರ್ವಜನಿಕರ ವರ್ತನೆ ಅದಕ್ಕೆ ಆಸ್ಪದ ನೀಡುತ್ತಿದ್ದು, ಮುಂದಿನ ಮಹಾ ದುರಂತಕ್ಕೆ ಕಾರಣವಾಗಬಹುದು. ಲಾಕ್‌ಡೌನ್‌ನಿಂದ ಕೋವಿಡ್‌ ನಿಯಂತ್ರಣಕ್ಕೆ ಬಂದಿದೆ. ಸರ್ಕಾರ ಪ್ರತಿ ಬಾರಿಯೂ ಲಾಕ್‌ಡೌನ್‌ ಮಾಡಲು ಆಗಲ್ಲ. ಲಾಕ್‌ಡೌನ್‌ನಿಂದ ದಿನ ₹35,000 ಕೋಟಿಯಷ್ಟು ನಷ್ಟ ಆಗುತ್ತದೆ. ಜನ ಜೀವನ ಮತ್ತೆ ಪ್ರಪಾತಕ್ಕೆ ಹೋಗುತ್ತದೆ ಎಂಬ ಪ್ರಜ್ಞೆ ಜನರಲ್ಲಿ ಬರಬೇಕು. ವಿವೇಕದಿಂದ ಕೋವಿಡ್‌ ಸಮರದಲ್ಲಿ ಕೈಜೋಡಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ಅತಿ ಕಡಿಮೆ ಸಮಯದಲ್ಲಿ ಎಲ್ಲರಿಗೂ ಕೋವಿಡ್‌ ಲಸಿಕೆ ನೀಡುವುದೂ ಅಸಂಭವ. ಲಸಿಕೆ ಇಲ್ಲದೆ ಎಲ್ಲರೂ ಸುರಕ್ಷಿತರಲ್ಲ. ಇದನ್ನು ಎಲ್ಲರೂ ಗಮನಿಸಬೇಕು. ಹೆಚ್ಚು ಸೂಕ್ಷ್ಮತೆಯಿಂದ ವರ್ತಿಸಬೇಕು’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT