ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಐಎಎಲ್‌ ಕೋವಿಡ್‌ ಆರೈಕೆ ಕೇಂದ್ರ ಆರಂಭ

150 ಹಾಸಿಗೆಗಳ ಸುಸಜ್ಜಿತ ಕೇಂದ್ರಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ
Last Updated 19 ಮೇ 2021, 16:40 IST
ಅಕ್ಷರ ಗಾತ್ರ

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್‌) ಆವರಣದಲ್ಲಿ ಕೆಐಎ ಫೌಂಡೇಷನ್‌ ಮತ್ತು ಫೇರ್‌ಫ್ಯಾಕ್ಸ್‌ ಫೈನಾನ್ಷಿಯಲ್‌ ಹೋಲ್ಡಿಂಗ್ಸ್‌ ಸಹಯೋಗದಲ್ಲಿ ಸ್ಥಾಪಿಸಿರುವ 150 ಹಾಸಿಗೆಗಳ ಸುಸಜ್ಜಿತವಾದ ಕೋವಿಡ್‌ ಆರೈಕೆ ಕೇಂದ್ರ ಬುಧವಾರದಿಂದ ಕಾರ್ಯಾರಂಭ ಮಾಡಿದೆ.

ವಿಮಾನ ನಿಲ್ದಾಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೋವಿಡ್‌ ಆರೈಕೆ ಕೇಂದ್ರವನ್ನು ಉದ್ಘಾಟಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಕೆಐಎ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹರಿ ಮರಾರ್‌, ಗ್ರೀನ್‌ಕೊ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಅನಿಲ್‌ ಕುಮಾರ್‌ ಚಲಮಲ ಶೆಟ್ಟಿ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಕೊಹ್ಲಿ ಉಪಸ್ಥಿತರಿದ್ದರು.

ವಿಮಾನ ನಿಲ್ದಾಣದ ಕಾರ್ಗೊ ಟರ್ಮಿನಲ್‌ ಸಮೀಪ ಆರಂಭಿಸಿರುವ ಆರೈಕೆ ಕೇಂದ್ರ 3,500 ಚದರ ಅಡಿ ವಿಸ್ತೀರ್ಣ ಹೊಂದಿದೆ. 150 ಹಾಸಿಗೆಗಳನ್ನು ಅಳವಡಿಸಿದ್ದು, ಕಡಿಮೆ ರೋಗಲಕ್ಷಣವುಳ್ಳ ಕೋವಿಡ್‌ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿ ನಿಮಿಷಕ್ಕೆ 10 ಲೀಟರ್‌ ಸಾಮರ್ಥ್ಯದ 95 ಆಮ್ಲಜನಕ ಸಾಂದ್ರಕಗಳು ಮತ್ತು ಪ್ರತಿ ನಿಮಿಷಕ್ಕೆ 5 ಲೀಟರ್‌ ಸಾಮರ್ಥ್ಯದ 55 ಆಮ್ಲಜನಕ ಸಾಂದ್ರಕಗಳನ್ನು ಕೇಂದ್ರದಲ್ಲಿ ಇರಿಸಲಾಗಿದೆ.

ರೋಗಲಕ್ಷಣ ಇಲ್ಲದೇ ಇರುವವರು ಮತ್ತು ರಕ್ತದಲ್ಲಿ ಆಮ್ಲಜನಕದ ಪ್ರಮಾಣದಲ್ಲಿ ಇಳಿಕೆಯಾಗದೇ ಇರುವ ಕಡಿಮೆ ರೋಗಲಕ್ಷಣ ಇರುವ ಸೋಂಕಿತರು ಇಲ್ಲಿಗೆ ದಾಖಲಾಗಲು ಅವಕಾಶವಿದೆ. ರೋಗಿಗಳು ತಮ್ಮ ಆಧಾರ್‌ ಕಾರ್ಡ್‌ ಮತ್ತು ಆಸ್ಪತ್ರೆಯ ಶಿಫಾರಸು ಪತ್ರದೊಂದಿಗೆ ಜಿಲ್ಲಾ ನೋಡಲ್‌ ಅಧಿಕಾರಿಗಳಾದ ಸಣ್ಣಪ್ಪಯ್ಯ (944811661) ಅಥವಾ ಡಾ. ಸಂಜಯ್‌ (9538279991) ಅವರನ್ನು ಸಂಪರ್ಕಿಸಬಹುದು ಎಂದು ಕೆಐಎಎಫ್‌ ತಿಳಿಸಿದೆ.

ಹಿರಿಯ ವೈದ್ಯರಾದ ಡಾ. ನರೇಶ್ ಶೆಟ್ಟಿ, ಡಾ. ನಂದಕುಮಾರ್‌ ಜೈರಾಂ ಮತ್ತು ಡಾ. ಅಲೆಕ್ಸಾಂಡರ್‌ ಥಾಮಸ್‌ ಈ ಆರೈಕೆ ಕೇಂದ್ರಕ್ಕೆ ಸಲಹೆ ನೀಡುವರು. ದಿನದ 24 ಗಂಟೆ ವೈದ್ಯರು, ನರ್ಸ್‌ಗಳ ಸೇವೆ ಲಭ್ಯ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಸ್ಥಳಾಂತರಿಸಲು ನಗರದ ಏಳು ಪ್ರಮುಖ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.

200 ಆಮ್ಲಜನಕ ಸಾಂದ್ರಕ ಹಸ್ತಾಂತರ

ಸೌರ ವಿದ್ಯುತ್‌, ಪವನ ವಿದ್ಯುತ್‌ ಮತ್ತು ಜಲ ವಿದ್ಯುತ್‌ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಗ್ರೀನ್‌ಕೊ ಸಮೂಹವು ಪ್ರತಿ ನಿಮಷಕ್ಕೆ 10 ಲೀಟರ್‌ ಸಾಮರ್ಥ್ಯದ 200 ಆಮ್ಲಜನಕ ಸಾಂದ್ರಕಗಳನ್ನು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸುವುದಕ್ಕಾಗಿ ದೇಣಿಗೆಯಾಗಿ ನೀಡಿದೆ.

ಗ್ರೀನ್‌ಕೊ ವ್ಯವಸ್ಥಾಪಕ ನಿರ್ದೇಶಕ ಅನಿಲ್‌ ಕುಮಾರ್‌ ಚಲಮಲ ಶೆಟ್ಟಿ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಕೊಹ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಈ ಯಂತ್ರಗಳನ್ನು ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT