ಸೋಮವಾರ, ಸೆಪ್ಟೆಂಬರ್ 27, 2021
28 °C
ಸೋಂಕು ನಿಯಂತ್ರಣ– ನಾಲ್ಕು ತಂಡಗಳನ್ನು ರಚಿಸಿದ ಪಾಲಿಕೆ

ಕೋವಿಡ್‌: ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಕಡ್ಡಾಯ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಪ್ರವಾಸಿಗರು ಕೊರೊನಾ ಸೋಂಕು ಹೊಂದಿಲ್ಲದ ದಾಖಲೆ ಪರಿಶೀಲಿಸಲು ಹಾಗೂ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಬಿಬಿಎಂಪಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದೆ.

‘ಕೇರಳ ಹಾಗೂ ಮಹಾರಾಷ್ಟ್ರದಿಂದ ನಗರಕ್ಕೆ ಬರುವವರು ಕೋವಿಡ್‌ ಹೊಂದಿಲ್ಲ ಎಂಬುದನ್ನು ಧೃಡಪಡಿಸಬೇಕು. ಇದಕ್ಕಾಗಿ 72 ಗಂಟೆಗಳ ಈಚೆಗೆ ಮಾಡಿಸಿರುವ ಕೋವಿಡ್‌ ಪರೀಕ್ಷೆಯ ವರದಿ ಹಾಜರುಪಡಿಸುವುದು ಕಡ್ಡಾಯ. ಕೋವಿಡ್‌ ಲಸಿಕೆ ಹಾಕಿಸಿಕೊಂಡವರೂ ಕೋವಿಡ್‌ ಪರೀಕ್ಷೆಯ ವರದಿ ಹಾಜರುಪಡಿಸಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇರಳ ಅಥವಾ ಮಹಾರಾಷ್ಟ್ರದಿಂದ ಕೋವಿಡ್‌ ಪರೀಕ್ಷೆಯ ವರದಿ ಇಲ್ಲದೆಯೇ ನಗರಕ್ಕೆ ಬರುವವರನ್ನು ಬಿಬಿಎಂಪಿ ಸಿಬ್ಬಂದಿಯೇ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಅವರಿಗೆ ಸೋಂಕು ಇಲ್ಲದಿರುವುದು ದೃಢಪಟ್ಟರೆ ಮಾತ್ರ ಅವರನ್ನು ಬಿಟ್ಟು ಕಳುಹಿಸಲಾಗುತ್ತದೆ. ಕೋವಿಡ್‌ ಪರೀಕ್ಷಾ ವರದಿ ಬರುವವರೆಗೂ ಅವರನ್ನು ಪ್ರತ್ಯೇಕ ವಾಸಕ್ಕೆ ಒಳಪಡಿಸಲಾಗುತ್ತದೆ. ಕೋವಿಡ್‌ ಪರೀಕ್ಷಾ ವರದಿ ಇಲ್ಲದವರು ಪರೀಕ್ಷೆಗೆ ಒಳಪಡಸಲು ಒಪ್ಪದಿದ್ದರೆ ಹಿಂದಕ್ಕೆ ಕಳುಹಿಸಬೇಕಾಗುತ್ತದೆ’ ಎಂದು ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್‌ ತಿಳಿಸಿದರು.

‘ಕಂದಾಯ ವಿಭಾಗ ಹಾಗೂ ಆರೋಗ್ಯ ವಿಭಾಗದ ನಾಲ್ಕು ತಂಡಗಳು ಈ ಎರಡು ರಾಜ್ಯಗಳಿಂದ ಬರುವ ರೈಲುಗಳು ಹಾಗೂ ಬಸ್‌ಗಳ ಮೇಲೆ ನಿಗಾ ಇಡಲಿವೆ. ಮೆಜೆಸ್ಟಿಕ್‌ ಮತ್ತು ಯಶವಂತಪುರ ಬಸ್‌ನಿಲ್ದಾಣಗಳಿಗೆ ಹಾಗೂ ಮೈಸೂರು ರಸ್ತೆ, ಕೆಂಗೇರಿ ಶಾಂತಿನಗರಗಳ ಸ್ಯಾಟಲೈಟ್‌ ಬಸ್‌ ನಿಲ್ದಾಣಗಳಿಗೆ ಈ ಎರಡು ರಾಜ್ಯಗಳಿಂದ ಬರುವ ಬಸ್‌ಗಳ ಪ್ರಯಾಣಿಕರನ್ನು ಬಿಬಿಎಂಪಿ ತಂಡಗಳ ಸಿಬ್ಬಂದಿ ಪರಿಶೀಲನೆ ನಡೆಸಲಿದ್ದಾರೆ. ಯಶವಂತಪುರ, ಕಂಟೋನ್ಮೆಂಟ್‌, ಕೆ.ಆರ್‌.ಪುರ ಹಾಗೂ ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣಗಳಿಗೆ ಈ ಎರಡು ರಾಜ್ಯಗಳಿಂದ ಬರುವ ರೈಲುಗಳ ಪ್ರಯಾಣಿಕರನ್ನೂ ತಪಾಸಣೆಗೆ ಒಳಪಡಿಸಲಿದ್ದಾರೆ’ ಎಂದು ಅವರು ವಿವರಿಸಿದರು.

ಫಲಿತಾಂಶ ತಿಳಿಸುವುದು ಕಡ್ಡಾಯ: ಅನೇಕ ಪ್ರಯೋಗಾಲಯಗಳು ಹಾಗೂ ಖಾಸಗಿ ಆಸ್ಪತ್ರೆಗಳು ಕೋವಿಡ್‌ ಪರೀಕ್ಷೆಯ ಫಲಿತಾಂಶಗಳ ಮಾಹಿತಿಯನ್ನು ಬಿಬಿಎಂಪಿಗೆ ಸಲ್ಲಿಸುವುದಕ್ಕೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌) ಪೋರ್ಟಲ್‌ನಲ್ಲೂ ಅಪ್‌ಲೋಡ್‌ ಮಾಡುವುದಕ್ಕ ಮುನ್ನವೇ ರೋಗಿಗಳಿಗೆ ನೀಡುತ್ತಿವೆ. ಇದನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿದೆ. ಕೋವಿಡ್‌ ಪರೀಕ್ಷೆಯ ಫಲಿತಾಂಶವನ್ನು ತಕ್ಷಣವೇ ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಿ ಬಿಬಿಎಂಪಿ ಮಾಹಿತಿ ನೀಡಬೇಕು ಎಂದು ಬಿಬಿಎಂಪಿ ಸೂಚಿಸಿದೆ.

‘ಚಿಕಿತ್ಸೆ ನಿರ್ಧಾರ ಕೇಂದ್ರದಲ್ಲೇ ತಪಾಸಣೆ ಕಡ್ಡಾಯ’

ಕೋವಿಡ್‌ ದೃಢಪಟ್ಟ ಎಲ್ಲರೂ ಚಿಕಿತ್ಸೆ ನಿರ್ಧಾರ (ಟ್ರಯಾಜ್‌) ಕೇಂದ್ರಗಳಲ್ಲಿ (ಪಿಟಿಸಿ) ಅಥವಾ ಸಂಚಾರ ಟ್ರಯಾಜ್‌ ಘಟಕಗಳಲ್ಲಿ (ಎಂಟಿಯು) ಖುದ್ದಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗುವುದನ್ನು ಬಿಬಿಎಂಪಿ ಕಡ್ಡಾಯಗೊಳಿಸಿದೆ.

ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಆರಂಭಿಕ ಹಂತದಲ್ಲೇ ಕ್ರಮ ಕೈಗೊಂಡರೆ ಈ ರೋಗದಿಂದ ಸಾವಿಗೀಡಾಗುವವರ ಪ್ರಮಾಣವನ್ನು ಕಡಿಮೆ ಮಾಡಬಹುದು ಹಾಗೂ ರೋಗ ಉಲ್ಬಣಗೊಳ್ಳುವುದನ್ನು ತಪ್ಪಿಸಬಹುದು ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ. ಕೆಲವು ಕೊರೋನಾ ಸೋಂಕಿತರು ಪಿಟಿಸಿ ಅಥವಾ ಎಂಟಿಯುವಿನಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಲು ನಿರಾಕರಿಸುತ್ತಿರುವುದು ಕಂಡು ಬಂದಿದೆ. ಸೋಂಕು ನಿಯಂತ್ರಣ ದೃಷ್ಟಿಯಿಂದ ಎಲ್ಲ ಕೊರೊನಾ ಸೊಂಕಿತರೂ ಕಡ್ಡಾಯವಾಗಿ ಪಿಟಿಸಿ ಅಥವಾ ಎಂಟಿಯುಗಳಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ತಪ್ಪಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು