ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯ 100 ಗ್ರಾಮಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ

ಡಾ.ಅನಿಲ್‌ಕುಮಾರ್ ನೇತೃತ್ವದಲ್ಲಿ ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳಲ್ಲಿ ಕಾರ್ಯ
Last Updated 9 ಮೇ 2021, 19:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ ಒಟ್ಟು 100 ಗ್ರಾಮಗಳಲ್ಲಿ ಕೋವಿಡ್ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಲು ವೈದ್ಯ ಡಾ.ಅನಿಲ್‌ಕುಮಾರ್ ಆವುಲಪ್ಪ ಮುಂದಾಗಿದ್ದಾರೆ. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿಯೂ ಈ ಎರಡೂ ತಾಲ್ಲೂಕಿನ 200 ಹಳ್ಳಿಗಳಲ್ಲಿ ಅವರು ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿದ್ದರು.

ರೈಟ್ ಟು ಲಿವ್‌ ಫೌಂಡೇಷನ್, ರೋಟರಿ ಸ್ಪಂದನ, ಯಂಗ್ ಲಿವ್‌ ಫೌಂಡೇಶನ್, ಡಿವೈಎಫ್‌ಐ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಬಾಗೇಪಲ್ಲಿ ತಾಲ್ಲೂಕು ಫಾರ್ಮಾಸಿಸ್ಟ್ ಅಸೋಸಿಯೇಷನ್ ಇವರ ಕಾರ್ಯಕ್ಕೆ ಕೈ ಜೋಡಿಸಿವೆ.

ಕೋವಿಡ್ ಗುಣಲಕ್ಷಣಗಳು ಇದ್ದರೂ ಗ್ರಾಮೀಣ ಜನರು ಆರಂಭದಲ್ಲಿಯೇ ವೈದ್ಯರ ಬಳಿಗೆ ತೆರಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ದೂರುಗಳಿವೆ. ರಕ್ತದಲ್ಲಿ ಆಮ್ಲಜನಕ ಪ್ರಮಾಣದ ಬಗ್ಗೆಯೂ ಅರಿವು ಇರುವುದಿಲ್ಲ. ಈ ಎಲ್ಲ ದೃಷ್ಟಿಯಿಂದ ಪ್ರಾಥಮಿಕ ಹಂತದಲ್ಲಿಯೇ ರೋಗಿಗಳನ್ನು ಗುರುತಿಸುವ ಕೆಲಸವನ್ನು ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಮಾಡಲಿವೆ.

ಕನಿಷ್ಠ ಶಿಕ್ಷಣ ಪಡೆದಿರುವ, ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಾಮೀಟರ್ ಬಗ್ಗೆ ತಿಳಿವಳಿಕೆಯುಳ್ಳ ಆಯಾ ಗ್ರಾಮಗಳ ಇಬ್ಬರು ಅಥವಾ ಮೂವರು ಸ್ವಯಂಸೇವಕರು ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವರು.

‘ಗ್ರಾಮಗಳ ಅರಳಿಕಟ್ಟೆ ಸೇರಿದಂತೆ ಯಾವುದಾದರೂ ಒಂದು ಸ್ಥಳದಲ್ಲಿ ಈ ಸ್ವಯಂಸೇವಕರು ನಿತ್ಯ ಕುಳಿತುಕೊಳ್ಳುವರು. ಪಲ್ಸ್ ಆಕ್ಸಿಮೀಟರ್, ಥರ್ಮಾಮೀಟರ್ ಹಾಗೂ ಕೋವಿಡ್‌ನ ಪ್ರಾಥಮಿಕ ಗುಣಲಕ್ಷಣಗಳ ಚಿಕಿತ್ಸೆಗೆ ಅಗತ್ಯವಿರುವ ಮಾತ್ರೆಗಳು ಇವರ ಬಳಿ ಇರಲಿವೆ’ ಎಂದು ಡಾ.ಅನಿಲ್‌ಕುಮಾರ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ಹಳ್ಳಿಗಳಲ್ಲಿ ಜನರು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆಗೆ ಬರುವ ಮನಸ್ಸು ಮಾಡುತ್ತಿಲ್ಲ. ಲಕ್ಷಣಗಳು ಕಾಣಿಸಿಕೊಂಡ ಐದಾರು ದಿನಗಳ ತರುವಾಯ ಆಸ್ಪತ್ರೆಗೆ ಬರುತ್ತಾರೆ. ಅಷ್ಟರಲ್ಲಿ ರೋಗ ತೀವ್ರವಾಗಿರುತ್ತದೆ. ಸಾವುಗಳು ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿ ಚಿಕಿತ್ಸೆ ನೀಡಲು ಈ ಕೇಂದ್ರಗಳನ್ನು ಆರಂಭಿಸುತ್ತಿರುವುದಾಗಿ ಹೇಳಿದರು.

‘ಆಮ್ಲಜನಕ, ಜ್ವರವನ್ನು ಪರೀಕ್ಷಿಸಲಾಗುತ್ತದೆ. ರೋಗ ಲಕ್ಷಣಗಳಿದ್ದವರ ಬಗ್ಗೆ ದೂರವಾಣಿ ಮೂಲಕ ಸ್ವಯಂ ಸೇವಕರು ನಮಗೆ ಮಾಹಿತಿ ನೀಡುವರು. ಯಾವ ಮಾತ್ರೆಗಳನ್ನು ನೀಡಬೇಕು ಎಂದು ಸೂಚಿಸುತ್ತೇವೆ. ಅವರ ಮಾಹಿತಿಯನ್ನು ಪುಸ್ತಕದಲ್ಲಿ ನೋಂದಾಯಿಸಿಕೊಳ್ಳುತ್ತೇವೆ. ಬಾಗೇಪಲ್ಲಿಯಲ್ಲಿ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸಿದ್ಧ ಮಾಡಿದ್ದೇವೆ. ಇಲ್ಲಿಗೆ ಸರ್ಕಾರ ಆಮ್ಲಜನಕ ಪೂರೈಸಿದರೆ ನಮ್ಮ ಕೆಲಸಕ್ಕೆ ಅನುಕೂಲವಾಗಲಿದೆ’ ಎಂದು ಅವರು ಹೇಳುತ್ತಾರೆ.

ಇಂದು ಚಾಲನೆ
ಕೋವಿಡ್ ಪ್ರಥಮ ಚಿಕಿತ್ಸಾ ಕೇಂದ್ರಗಳಿಗೆಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರು ಸೋಮವಾರ (ಮೇ 10) ಬೆಳಿಗ್ಗೆ 8ರಿಂದ 9 ಗಂಟೆಯ ನಡುವೆ ಚಾಲನೆ ನೀಡುವರು. ರೈಟ್ ಟು ಲಿವ್‌ ಫೌಂಡೇಶನ್ ಸಂಸ್ಥಾಪಕ ರಘುರಾಮ್
ಕೋಟೆ ಪಾಲ್ಗೊಳ್ಳುವರು. ಜೂಮ್ ಆ್ಯಪ್ ಬಳಸಿ ಕಾರ್ಯಕ್ರಮ ವೀಕ್ಷಿಸಬಹುದು. ಜೂಮ್ ಮೀಟಿಂಗ್ ಐಡಿ–96341370932. ಪಾಸ್‌ವರ್ಡ್–720761.

*
ರೈಟ್ ಟು ಲಿವ್‌ ಫೌಂಡೇಷನ್‌ನಿಂದ ಪಲ್ಸ್ ಆಕ್ಸಿಮೀಟರ್, ಥರ್ಮಾಮೀಟರ್ ದೊರೆಯುತ್ತಿದೆ. ಎರಡನೇ ಹಂತದಲ್ಲಿ ಮತ್ತಷ್ಟು ಹಳ್ಳಿಗಳಲ್ಲಿ ಕೇಂದ್ರಗಳು ಆರಂಭವಾಗಲಿವೆ.
-ಡಾ.ಅನಿಲ್‌ಕುಮಾರ್, ವೈದ್ಯ

–ಡಾ.ಅನಿಲ್‌ಕುಮಾರ್ ಆವುಲಪ್ಪ
–ಡಾ.ಅನಿಲ್‌ಕುಮಾರ್ ಆವುಲಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT