ಬುಧವಾರ, ಮೇ 25, 2022
28 °C

ಕೋವಿಡ್‌ ನಿರ್ಬಂಧ ಸಡಿಲಿಕೆ: ಮುಖ್ಯಮಂತ್ರಿ ನೇತೃತ್ವದಲ್ಲಿ ಶುಕ್ರವಾರ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ಉನ್ನತಮಟ್ಟದ ಸಭೆ ನಡೆಯಲಿದ್ದು, ವಾರಾಂತ್ಯದ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂವಿನಂತಹ ನಿರ್ಬಂಧಗಳ ಸಡಿಲಿಕೆ ಕುರಿತು ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.

ಸುದ್ದಿಗಾರರ ಜತೆ ಬುಧವಾರ ಮಾತನಾಡುವಾಗ ಈ ಕುರಿತು ಸುಳಿವು ನೀಡಿದ ಮುಖ್ಯಮಂತ್ರಿ, ಬಿಗಿಯಾದ ನಿರ್ಬಂಧಗಳನ್ನು ಸಡಿಲಿಸಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಶುಕ್ರವಾರದ ಸಭೆಯಲ್ಲಿ ಪುನರ್‌ ಪರಿಶೀಲಿಸಲಾಗುವುದು ಎಂದರು.

ಈ ಬಾರಿ ಕೋವಿಡ್‌ ತಗುಲಿದವರಲ್ಲಿ ಶೇಕಡ 94ರಷ್ಟು ಮಂದಿ ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿದ್ದು, ಗುಣಮುಖರಾಗುತ್ತಿದ್ದಾರೆ. ಸಾಮಾನ್ಯ ಜ್ವರದಂತೆ ಕೋವಿಡ್‌ ಬಂದು, ವಾಸಿಯಾಗುತ್ತಿದೆ. ಆದ್ದರಿಂದ ದೈನಂದಿನ ಎಲ್ಲ ಚಟುವಟಿಕೆಗಳ ಜತೆಯಲ್ಲೇ ಕೋವಿಡ್‌ ನಿಯಂತ್ರಣ ನಿಯಮಗಳ ಪಾಲನೆಗೆ ಅವಕಾಶ ನೀಡಬೇಕು ಎಂದು ಹೆಚ್ಚು ಜನರುಹೇಳುತ್ತಿದ್ದಾರೆ. ಈ ಕುರಿತು ಪರಿಶೀಲಿಸುವಂತೆ ತಜ್ಞರ ಸಮಿತಿಗೆ ಸೂಚನೆ ನೀಡಲಾಗಿತ್ತು ಎಂದು ಹೇಳಿದರು.

ಈ ಬಾರಿ ಕೋವಿಡ್‌ ತಗುಲಿದವರಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆ ಇದೆ. ಸೋಂಕಿನ ಕುರಿತು ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಕೋವಿಡ್‌ ನಿಯಂತ್ರಣ ಕುರಿತು ಶುಕ್ರವಾರ ಉನ್ನತಮಟ್ಟದ ಸಭೆ ನಡೆಯಲಿದೆ. ಆಗ ತಜ್ಞರು ಸ್ಪಷ್ಟ ಚಿತ್ರಣ ನೀಡಲಿದ್ದಾರೆ. ಬಳಿಕ ಮಾರ್ಗಸೂಚಿ ಪರಿಷ್ಕರಣೆ ಕುರಿತು ನಿರ್ಧಾರ ಮಾಡಲಾಗುವುದು ಎಂದರು.

ಇತರ ರಾಜ್ಯಗಳಲ್ಲಿ ಕೋವಿಡ್‌ ಮೂರನೇ ಅಲೆಯ ಬೆಳವಣಿಗೆ ಮೇಲೆ ತಜ್ಞರು ನಿಗಾ ವಹಿಸಿದ್ದಾರೆ. ಕರ್ನಾಟಕದಲ್ಲಿ ಕೋವಿಡ್‌ನ ಮೂರನೇ ಅಲೆ ವಿಳಂಬವಾಗಿ ಆರಂಭವಾಗಿದೆ. ಹೀಗಾಗಿ ಜನವರಿ ಕೊನೆಯ ವಾರ ಅಥವಾ ಫೆಬ್ರುವರಿ ಮೊದಲ ವಾರ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಏರುಗತಿ ಆರಂಭವಾಗಬಹುದು ಎಂದು ಅಂದಾಜಿಸಿದ್ದಾರೆ. ಮುಂದಿನ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದರು.

ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದ್ದರೂ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯೇ ಇದೆ. ಎಲ್ಲ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸಾ ವಿಭಾಗಗಳನ್ನು ಬಲಪಡಿಸಲು ಸೂಚನೆ ನೀಡಲಾಗಿದೆ. ತಜ್ಞರ ಸಲಹೆಗಳನ್ನು ಆಧರಿಸಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಎಲ್ಲರ ವಿರುದ್ಧವೂ ಕ್ರಮ: ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ವಿಚಾರದಲ್ಲಿ ಪಕ್ಷ, ಸಂಘಟನೆಯ ಹೆಸರಿನಲ್ಲಿ ಭೇದವಿಲ್ಲದೇ ಕ್ರಮ ಜುರುಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೋವಿಡ್‌ನಿಂದ ಗುಣಮುಖರಾದ ಮುಖ್ಯಮಂತ್ರಿ: ತಮಗೆ ಕೋವಿಡ್‌ ಸೋಂಕು ತಗುಲಿದ್ದರಿಂದ 12 ದಿನಗಳ ಪ್ರತ್ಯೇಕವಾಸದ ಅವಧಿ ಪೂರ್ಣಗೊಳಿಸಿ, ಪರೀಕ್ಷೆ ಮಾಡಿಸಿಕೊಂಡಿದ್ದು ‘ನೆಗೆಟಿವ್‌’ ವರದಿ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಕೋವಿಡ್‌ನಿಂದ ಸಂಪೂರ್ಣ ಗುಣಮುಖನಾಗಿದ್ದೇನೆ. ಬುಧವಾರದಿಂದ ದೈನಂದಿನ ಕೆಲಸಗಳಲ್ಲಿ ನೇರವಾಗಿ ಭಾಗವಹಿಸುತ್ತಿದ್ದೇನೆ’ ಎಂದರು.

ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ’ ಎಂದರು.

‘ಶಾಲಾರಂಭ; ತಜ್ಞರ ಸಲಹೆಯೇ ಅಂತಿಮ’

‘ಕೋವಿಡ್‌ ಕಾರಣದಿಂದ ಕೆಲವು ಜಿಲ್ಲೆಗಳಲ್ಲಿ ಮುಚ್ಚಿರುವ ಶಾಲೆಗಳನ್ನು ಪುನರಾರಂಭ ಮಾಡುವುದಕ್ಕೆ ತಜ್ಞರ ಸಲಹೆಯೇ ಅಂತಿಮ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಕೆಲವು ಜಿಲ್ಲೆಗಳಲ್ಲಿ ಮಾತ್ರ ಎಲ್ಲ ಶಾಲೆಗಳನ್ನೂ ಬಂದ್‌ ಮಾಡಲಾಗಿದೆ. ಉಳಿದಂತೆ ಸೋಂಕು ಕಾಣಿಸಿಕೊಂಡ ಶಾಲೆಗಳನ್ನು ಮಾತ್ರ ಬಂದ್‌ ಮಾಡಲಾಗಿದೆ. ತಜ್ಞರು ಒಪ್ಪಿಗೆ ಸೂಚಿಸಿದರೆ ಬೆಂಗಳೂರು ನಗರದಲ್ಲೂ ತಕ್ಷಣ ಶಾಲೆಗಳಲ್ಲಿ ಭೌತಿಕ ತರಗತಿ ಪುನರಾರಂಭ ಮಾಡಲಾಗುವುದು’ ಎಂದರು.

‘ಈವರೆಗಿನ ಅಂಕಿ ಅಂಶಗಳ ಪ್ರಕಾರ, ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಿಲ್ಲ. ಮನೆಗಳಲ್ಲೇ ಇರುವ ಮಕ್ಕಳಿಗೂ ಕೋವಿಡ್‌ ತಗುಲಿರುವ ಉದಾಹರಣೆಗಳಿವೆ. ಮಕ್ಕಳ ಪಾಲಿಗೆ ಶಾಲೆಗಳೇ ಸುರಕ್ಷಿತ ಎಂಬ ಭಾವನೆ ಇದೆ. ತಜ್ಞರು ನೀಡುವ ಸಲಹೆಗಳ ಆಧಾರದಲ್ಲಿ ಯಾವ ವಯಸ್ಸಿನ ಮಕ್ಕಳಿಗೆ ತರಗತಿಗಳನ್ನು ಪುನರಾರಂಭ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು