ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ಅಂತರ, ಮರೆಯಾದ ಮಾಸ್ಕ್‌; ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ

ಮತ ಎಣಿಕೆ ಕೇಂದ್ರಗಳಲ್ಲಿ
Last Updated 30 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಬುಧವಾರ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳ ವ್ಯಾಪಕ ಉಲ್ಲಂಘನೆಗೆ ವೇದಿಕೆಯಾಯಿತು. ಬಹುಪಾಲು ಮತ ಎಣಿಕೆ ಕೇಂದ್ರಗಳ ಆವರಣದಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿ ದೈಹಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧಾರಣೆ ಕುರಿತು ಕಿಂಚಿತ್ತೂ ಆದ್ಯತೆ ನೀಡದಿರುವುದು ಕಂಡುಬಂತು.

ಮತ ಎಣಿಕೆ ಕೇಂದ್ರಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಆದರೆ, ಹೆಚ್ಚಿನ ಕೇಂದ್ರಗಳಲ್ಲಿ ಮಾರ್ಗಸೂಚಿಯನ್ನು ಲೆಕ್ಕಿಸದೇ ಓಡಾಡುತ್ತಿದ್ದುದು ಕಂಡುಬಂತು. ಮತ ಎಣಿಕೆ ಕೇಂದ್ರದ ಒಳಗೂ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಅನೇಕ ಪ್ರಕರಣಗಳು ನಡೆದಿವೆ.

ಮತ ಎಣಿಕೆ ಕೇಂದ್ರದೊಳಕ್ಕೆ ಪ್ರವೇಶಿಸುವ ಅಧಿಕಾರಿಗಳು, ಸಿಬ್ಬಂದಿ, ಅಭ್ಯರ್ಥಿಗಳು ಮತ್ತು ಅವರ ಚುನಾವಣಾ ಏಜೆಂಟರ ದೇಹದ ಉಷ್ಣತೆಯನ್ನು ಥರ್ಮಲ್‌ ಸ್ಕ್ಯಾನರ್‌ ಬಳಸಿ ಪರೀಕ್ಷಿಸುವಂತೆ ಆಯೋಗ ಸೂಚಿಸಿತ್ತು. ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ಮತ್ತು ಸ್ಯಾನಿಟೈಸರ್‌ ಬಳಕೆಯನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ, ಅಭ್ಯರ್ಥಿಗಳು, ಚುನಾವಣಾ ಏಜೆಂಟರು, ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರು ಈ ಮಾರ್ಗಸೂಚಿಗಳ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದುದು ಕಂಡುಬಂತು.

ಕೆಲವು ಜಿಲ್ಲೆಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆ ಮತ ಎಣಿಕೆ ಕೇಂದ್ರದ ಆವರಣ, ಒಳಭಾಗ ಮತ್ತು ಪ್ರವೇಶ ದ್ವಾರಕ್ಕೆ ಸೀಮಿತವಾಗಿತ್ತು. ಕೆಲವು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹತ್ತಾರು ಸಾವಿರ ಜನರು ಮತ ಎಣಿಕೆ ಸ್ಥಳಕ್ಕೆ ಬಂದಿದ್ದರು.

ನಿಯಮ ಮೀರಿ ವಿಜಯೋತ್ಸವ: ಚುನಾವಣೆಯಲ್ಲಿ ಜಯ ಗಳಿಸಿದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುವಂತಿಲ್ಲ ಎಂದು ಅಧಿಸೂಚನೆಯಲ್ಲೇ ರಾಜ್ಯ ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿತ್ತು. ಆದರೆ, ಶೇಕಡ 90ಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳು ನೂರಾರು ಜನರ ಜತೆ ಮೆರವಣಿಗೆಯೊಂದಿಗೆ ವಿಜಯೋತ್ಸವ ಆಚರಿಸಿದ್ದಾರೆ.

ದಂಡವೂ ಇಲ್ಲ: ದೈಹಿಕ ಅಂತರ ಕಾಯ್ದುಕೊಳ್ಳದಿರುವುದು ಮತ್ತು ಮಾಸ್ಕ್ ಧರಿಸದೇ ಇರುವುದನ್ನು ಕಂಡರೂ ಕಾಣದಂತೆ ಬಹುತೇಕ ಅಧಿಕಾರಿಗಳು ಇದ್ದರು. ರಾಜ್ಯದ ಕೆಲವೆಡೆ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ದಂಡ ವಿಧಿಸಿರುವ ಮಾಹಿತಿ ಇದೆ. ಹೆಚ್ಚಿನ ಜಿಲ್ಲೆಗಳಲ್ಲಿ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT