ಬುಧವಾರ, ಏಪ್ರಿಲ್ 14, 2021
31 °C
ಪೊಲೀಸ್ ಇಲಾಖೆ– ಶೇ 90ರಷ್ಟು ನಾಗರಿಕರಿಗೆ ಸಕಾರಾತ್ಮಕ ಭಾವನೆ

ಪೊಲೀಸ್–ಜನರ ನಡುವಿನ ತಡೆಗೋಡೆ ಕಳಚಿದ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು:‘ಕೊರೊನಾ ಬಂದ ನಂತರ ಸಮಾಜದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಇದ್ದ ತಡೆಗೋಡೆ ಉರುಳಿತು. ಕೊರೊನಾ ಪರಿಸ್ಥಿತಿಯು ಪೊಲೀಸರ ಅಂತಃಕರಣ ಏನೆಂಬುದನ್ನು ತೋರಿಸಲು ಅವಕಾಶ ಒದಗಿಸಿತು’ ಎಂದು ಐಪಿಎಸ್‌ ಅಧಿಕಾರಿ ಇಶಾ ಪಂತ್ ತಿಳಿಸಿದರು.

ಜನಾಗ್ರಹ ಸಂಸ್ಥೆಯು ‘ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಬೆಂಗಳೂರಿನಲ್ಲಿ ಪೊಲೀಸಿಂಗ್‌’ ಕುರಿತು ಬುಧವಾರ ಹಮ್ಮಿಕೊಂಡಿದ್ದ ಆನ್‌ಲೈನ್ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಪೊಲೀಸರ ಕುರಿತು ಜನರ ಗ್ರಹಿಕೆಯಲ್ಲೂ ಕೊರೊನಾ ಸಕಾರಾತ್ಮಕ ಭಾವನೆ ಮೂಡಿಸಿದೆ. ಒಂದು ಕೆಲಸವನ್ನು ಪರಿಣಾಮಕಾರಿ ಮಾಡಬೇಕಾದರೆ, ಅದಕ್ಕೆ ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹಾಗೂ ಸಂವಹನ ಅಗತ್ಯ ಎಂಬುದು ಪೊಲೀಸರಿಗೆ ಅರಿವಾಗಿದೆ. ಜನರ ಜೊತೆಗಿನ ನಮ್ಮ ವರ್ತನೆಯಲ್ಲೂ ಬದಲಾವಣೆಯ ಅಗತ್ಯವಿದೆ’ ಎಂದರು.

ಬೆಂಗಳೂರು ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಒಕ್ಕೂಟದ ವಿಕ್ರಂ ರೈ,‘ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ನಿರಂತರ ಸಂಪರ್ಕವನ್ನು ವಾರ್ಡ್‌ ಮತ್ತು ಪೊಲೀಸ್‌ ಠಾಣೆಯ ಮಟ್ಟಕ್ಕೆ ಒಯ್ಯಬೇಕು’ ಎಂದರು.

‘ಮಹಿಳೆಯರು ತುಳಿತಕ್ಕೆ ಒಳಗಾಗಿರುವುದು ಹಾಗೂ ಪೊಲೀಸರ ಜೊತೆ ಚರ್ಚೆ ನಡೆಸಲು ಆತ್ಮವಿಶ್ವಾಸದ ಕೊರತೆ ಇರುವುದು ನಾವು ಅಲ್ಪಸಂಖ್ಯಾತರ ಜೊತೆ ಕೆಲಸ ಮಾಡಿದಾಗ ತಿಳಿಯಿತು. ಪೊಲೀಸರು ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ದಿಯಾಘರ್ ಸಂಸ್ಥೆಯ ಸ್ಥಾಪಕಿ ಸರಸ್ವತಿ ಪದ್ಮನಾಭನ್ ಹೇಳಿದರು.

ಹಸಿರುದಳದ ನಳಿನಿ ಶೇಖರ್, ಸಂಚಾರ ವಿಭಾಗದ (ಪೂರ್ವ) ಎಸಿಪಿ ಎಂ.ಸಿ.ಕವಿತಾ, ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್‌ ಆ್ಯಂಡ್‌ ಅನಾಲಿಸಿಸ್‌ ವಿಂಗ್‌ (ರಾ) ನಿವೃತ್ತ ಮುಖ್ಯಸ್ಥ ಪಿ.ಕೆ.ಎಚ್‌.ತಾರಕನ್, ಏರಿಯಾ ಸುರಕ್ಷಾ ಮಿತ್ರಾದ ದೀಪಕ್‌ ಕುಮಾರ್ ಮಾತನಾಡಿದರು.

ಕೋವಿಡ್‌ ಪ್ರಸರಣದ ಬಳಿಕ ಶೇ 90ರಷ್ಟು ನಾಗರಿಕರು ಪೊಲೀಸ್ ಇಲಾಖೆಯ ಬಗ್ಗೆ ಹೆಚ್ಚು ಸಕಾರಾತ್ಮಕ ಭಾವನೆ ಹೊಂದಿರುವುದು ಜನಾಗ್ರಹ ಸಂಸ್ಥೆಯು ಹ್ಯಾನ್ಸ್ ಸೀಡೆಲ್ ಸ್ಟಿಫ್ಟಂಗ್ ಸಂಸ್ಥೆಯ ಸಹಯೋಗದಲ್ಲಿ ನಡೆಸಿದ ಅಧ್ಯಯನದಿಂದ ಕಂಡುಬಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು