ಶುಕ್ರವಾರ, ಅಕ್ಟೋಬರ್ 22, 2021
21 °C

ಚಿಕ್ಕಮಕ್ಕಳಿಗೇ ಮೊದಲು ಶಾಲೆ ತೆರೆಯಬೇಕಿತ್ತು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲೇ ಇರುವುದರಿಂದ ಕೊರೊನಾ 2ನೇ ಅಲೆಯ ನಂತರ ರಾಜ್ಯದಲ್ಲಿ 1ನೇ ತರಗತಿಯಿಂದಲೇ ಶಾಲೆ ಆರಂಭಿಸಬೇಕಿತ್ತು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅಭಿಪ್ರಾಯಪಟ್ಟರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು 9ನೇ ತರಗತಿ ನಂತರ 6ನೇ ತರಗತಿಗಿಂತ ಮೇಲಿನ ವಿದ್ಯಾರ್ಥಿಗಳಿಗೆ ಶಾಲೆ ಆರಂಭಿಸಲಾಯಿತು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಮನೆಯಲ್ಲಿ ಕೂರಿಸಲಾಯಿತು. ಪಾಲಕರ ಒಪ್ಪಿಗೆ ಪಡೆಯುವುದು ದುಸ್ತರ ಎಂಬ ಕಾರಣಕ್ಕೆ ಸುಮ್ಮನಿದ್ದ ಶಿಕ್ಷಣ ಇಲಾಖೆ ಈ ಕುರಿತು ಚಿಂತನೆ ನಡೆಸಬೇಕಿದೆ ಎಂದರು.

2 ವರ್ಷಕ್ಕೆ ಮೇಲ್ಪಟ್ಟವರಿಗಾಗಿ ಮೂಗಿನಲ್ಲಿ ಹನಿಯ ರೂಪದಲ್ಲಿ ಹಾಕುವ (ನೇಸಲ್ ಡ್ರಾಪ್) ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತ್ ಬಯೋಟೆಕ್ ಕಂಪೆನಿಯು ಈ ಸಂಬಂಧ ನಡೆಸಿರುವ ಸಂಶೋಧನೆ ಅಂತಿಮ ಹಂತ ತಲುಪಿದ್ದು, ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆದಿದೆ. ಇದಕ್ಕೆ ಮಾನ್ಯತೆ ದೊರೆತಲ್ಲಿ, ಲಸಿಕೆಯನ್ನು ಇಂಜಕ್ಷನ್‌ ಮೂಲಕ ಪಡೆಯಲು ಆತಂಕ ಪಡುತ್ತಿರುವವರನ್ನು ನೇಸಲ್‌ ಡ್ರಾಪ್‌ ಮೂಲಕ ಆಕರ್ಷಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದಾದ್ಯಂತ 1.48 ಕೋಟಿ ಡೋಸ್‌ ಲಸಿಕೆ ಹಾಕಲಾಗಿದೆ. ೧೮ಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಶೀಘ್ರವೇ ಇದಕ್ಕೆ ಅನುಮತಿ ದೊರೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಕೆಲವು ನಿರ್ದಿಷ್ಟ ಸಮುದಾಯದವರು, ಮದ್ಯಪಾನ ಪ್ರಿಯರು ಸೇರಿದಂತೆ ಶೇ 15ರಷ್ಟು ಜನ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅಂಥವರನ್ನು ಆಕರ್ಷಿಸಲು ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಯಾ ಸಮುದಾಯಗಳ, ಧಾರ್ಮಿಕ ಮುಖಂಡರ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ರಾಜ್ಯದಲ್ಲೂ ಕೋವಿಡ್‌ನ 3ನೇ ಅಲೆಯ ಆತಂಕ ಇದೆ. ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಮೂರನೇ ಅಲೆ ಅಪ್ಪಳಿಸಬಹುದು ಎಂಬ ಶಂಕೆ ಇದೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಜಾತ್ರೆ, ಹಬ್ಬ ಹಾಗೂ ಉತ್ಸವಗಳಲ್ಲಿ ಜನಸಮೂಹ ಸೇರದಂತೆ ಕಡಿವಾಣ ಹಾಕುವುದನ್ನು ಮುಂದುವರಿಸಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು